ಸುಳ್ಯ: ಕಾದು ಬೆಂದು ಬರಡಾಗಿದ್ದ ಇಳೆಗೆ ತಂಪೆರೆದು ಸುಳ್ಯದಲ್ಲಿ ಭರ್ಜರಿ ಮಳೆ ಸುರಿಯಿತು. 3 ಗಂಟೆಯ ಸುಮಾರಿಗೆ ಆರಂಭಗೊಂಡು ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆ ಸುರಿಯಿತು. ಗಾಳಿ, ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಮಳೆ ಸುರಿಯಿತು. ಹಲವು ದಿನಗಳಿಂದ
ಮೋಡ ಕವಿದ ವಾತಾವರಣ ಇತ್ತು. ಇಂದು ಭರ್ಜರಿ ಮಳೆಯಾಗಿದೆ. ಕಳೆದೆ ಒಂದೆರಡು ತಿಂಗಳಿನಿಂದ ವಿಪರೀತ ಸೆಕೆ, ಏರಿದ ಉಷ್ಣಾಂಶದಿಂದ ಜನರು ಬಸವಳಿದಿದ್ದರು. ಎಲ್ಲೆಡೆ ನೀರು ಬತ್ತಿ ಹೋಗಿ ಆಹಾಕಾರ ಉಂಟಾಗಿತ್ತು. ಇದೀಗ ಮಳೆ ಸುರಿದು ಇಳೆಗೆ ತಂಪೆರೆದಿದೆ. ಸುಳ್ಯದಲ್ಲಿ 36 ಮಿ.ಮಿ.ಮಳೆಯಾಗಿದೆ. ಈ ವರ್ಷದ ಪ್ರಥಮ ಮಳೆಯಾಗಿದೆ ಎಂದು ಮಳೆ ದಾಖಲೆ ಮಾಡುವ ಶ್ರೀಧರ ರಾವ್ ತಿಳಿಸಿದ್ದಾರೆ. ಸುಳ್ಯ ನಗರ ಮಾತ್ರವಲ್ಲದೆ ತಾಲೂಕಿನ ವಿವಿಧ ಕಡೆಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಎಣ್ಮೂರು, ಕಲ್ಮಡ್ಕ ಉತ್ತಮ ಮಳೆಯಾಗಿದೆ. ಎಣ್ಮೂರಿನಲ್ಲಿ 45 ನಿಮಿಷಗಳಿಂದ ಉತ್ತಮ ಮಳೆಯಾಗಿದೆ ಎಂದು ಕೃಷಿಕರಾದ ಪ್ರಸನ್ನ ಎಣ್ಮೂರು ತಿಳಿಸಿದ್ದಾರೆ. ಕುಕ್ಕುಜಡ್ಕ, ಕಲ್ನಡ್ಕ, ಪಂಜ, ಸಾಧಾರಣ ಮಳೆಯಾಗಿದೆ. ಕಲ್ಲಪಳ್ಳಿ ಸೇರಿದಂತೆ ಗಡಿ ಗ್ರಾಮಗಳಲ್ಲಿಯೂ ಉತ್ತಮ ಮಳೆ ಸುರಿದಿದೆ. ಕಲ್ಲಪಳ್ಳಿಯಲ್ಲಿ 45 ನಿಮಿಷಗಳ ಕಾಲ ಮಳೆಯಾಗಿದೆ ಎಂದು ಕೃಷಿಕರಾದ ಚಂದ್ರಹಾಸ ಭಟ್ ತಿಳಿಸಿದ್ದಾರೆ. ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕಿನ ವಿವಿಧ ಕಡೆ ಸಾಮಾನ್ಯ ಮಳೆಯಾಗಿದೆ ಎಂದು ವರದಿಯಾಗಿದೆ