ಸುಳ್ಯ: ಕಲೆ, ಸಂಸ್ಕೃತಿ, ಸಾಹಿತ್ಯದಿಂದ ಜೀವನದಲ್ಲಿ ನೆಮ್ಮದಿ, ಸಂತೋಷ ಪಡೆಯಲು ಸಾಧ್ಯ ಎಂದು ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಹೇಳಿದ್ದಾರೆ. ಸುಳ್ಯದ ರಂಗಮಯೂರಿ ಕಲಾ ಶಾಲೆಯ ವತಿಯಿಂದ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ರಂಗ ಶೈಲಿಯ ಮಕ್ಕಳ ಬೇಸಿಗೆ ಶಿಬಿರ ‘ಬಣ್ಣ’ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕಲೆ ಸಂಸ್ಕೃತಿಯಿಂದ ವಿಮುಖರಾದರೆ ಜೀವನದಲ್ಲಿ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸುಖದ ಹುಡುಕಾಟಕ್ಕಾಗಿ ಹಣದ ಹಿಂದೆ ಹೋಗುತ್ತೇವೆ. ಆದರೆ
ಹಣದಿಂದ ಪಡೆಯುವ ಸುಖದಿಂದ ನೆಮ್ಮದಿ, ಸಂತೋಷ ಪಡೆಯಲು ಸಾಧ್ಯವಿಲ್ಲ. ಸುಖಕ್ಕಿಂತ ಹೆಚ್ಚಾಗಿ ನೆಮ್ಮದಿ ಬೇಕು. ನೆಮ್ಮದಿ ನಮ್ಮ ಒಳಗಿನಿಂದ ಬರಬೇಕು. ಆ ನೆಮ್ಮದಿಗೆ ಕಲೆ, ಸಂಸ್ಕೃತಿಗಳು ಬೇಕು ಎಂದು ಅವರು ಹೇಳಿದರು. ನಮ್ಮ ಸುಖದ ಕಲ್ಪನೆಯೇ ಬದಲಾಗಿದೆ. ನಮ್ಮ ಆಸೆ, ಆಕಾಂಕ್ಷೆಗಳಿಗೆ ಮಿತಿ ಇಲ್ಲದಂತಾಗಿದೆ. ಅಧಿಕಾರ ಮತ್ತು ಹಣದ ಹಿಂದೆ ಬಿದ್ದರೆ ಅದರಿಂದ ಮುಕ್ತಿ ಇಲ್ಲಾ ಎಂದು ಅವರು ಅಭಿಪ್ರಾಯಪಟ್ಟರು.
ನಾಟಕ ವೈಶಿಷ್ಟ್ಯ ಪೂರ್ಣ ಸಂಪೂರ್ಣ ಕಲೆ ಇದರ ಮೂಲಕ ಹಲವು ಕಲೆಗಳನ್ನು ಕಲಿಯಲು ಸಾಧ್ಯ, ಇದು ಸಂಸ್ಕೃತಿಯ ಭಾಗ. ಶಿಬಿರದಲ್ಲಿ ಕಲಿತದ್ದನ್ನು ಮುಂದುವರಿಸಬೇಕು ಎಂದ ಅವರು ತಲೆಮಾರುಗಳ ಅಂತರವನ್ನು ಸರಿಪಡಿಸದಿದ್ದರೆ ಮುಂದಿನ ತಲೆಮಾರಿನ ಬದುಕಿಗೆ ಸಂಕಷ್ಟಕ್ಕೆ ಸಿಲುಕುತ್ತದೆ. ಆದುದರಿಂದ ಕಲೆ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರ ಮಾಡುವ ಮೂಲಕ ತಲೆಮಾರುಗಳ ಅಂತರವನ್ನು ಕಡಿಮೆ ಮಾಡಬೇಕು ಮತ್ತು ಮಕ್ಕಳನ್ನು ಸ್ವಾರ್ಥಿಗಳಾಗದಂತೆ ನೋಡಬೇಕು. ಹಣ ಬೇಕು,ಆದರೆ ಎಷ್ಟು ಹಣ ಬೇಕು ಅದರಿಂದ ಎಷ್ಟು ಜನರಿಗೆ ಪ್ರಯೋಜನ ಆಗುತ್ತದೆ ಎಂಬ ಕಲ್ಪನೆಯನ್ನು ಮಕ್ಕಳಿಗೆ ಕಲಿಸಬೇಕು ಎಂದು ಅವರು ಕರೆ ನೀಡಿದರು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ ಮಾತನಾಡಿ ಕಲಾವಿದರನ್ನು ಸೃಷ್ಠಿಸಿ ಸಮಾಜಕ್ಕೆ ಅರ್ಪಿಸುವುದು ದೊಡ್ಡ ಕೆಲಸ. ವಿವಿಧತೆಯಲ್ಲಿ ಏಕತೆಯನ್ನು ಸಾರಿದ ಬಣ್ಣ ಶಿಬಿರದ ಮೂಲಕ ಹಲವಾರು ಪ್ರತಿಭೆಗಳನ್ನು ಹೊರ ತರುವ ಕೆಲಸ ಆಗಿದೆ. ಕಲಾವಿದರನ್ನು ಸೃಷ್ಠಿಸಿ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸುವ ಮತ್ತು ಬೆಳೆಸುವ ಕೆಲಸ ಆಗಿದೆ ಎಂದರು.
ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಕಾರ್ಯಕರ್ತೆ ಲತಾ ಅಂಬೆಕಲ್ಲು, ರ್ಯಾಂಕ್ ವಿಜೇತ ಕಲಾವಿದೆ ವೈಷ್ಣವಿ ಶೆಟ್ಟಿ ಅತಿಥಿಗಳಾಗಿದ್ದರು. ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 6 ನೇ ರ್ಯಾಂಕ್ ಪಡೆದ ವಿದ್ಯಾರ್ಥಿನಿ ವೈಷ್ಣವಿ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ರಂಗಮಯೂರಿ ಕಲಾ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅಕ್ಷತ್ ಅಜ್ಕಾವರ ಸ್ವಾಗತಿಸಿದರು. ಧೃತಿ ದೀಟಿಗೆ ವಂದಿಸಿದರು.ಸಿಂಚನ ಪುತ್ತಿಲ ಮತ್ತು ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ಆರು ಭಾಷೆಯಲ್ಲಿ ಕಲಿಸಲಾದ ವಿಭಿನ್ನ ನಾಟಕಗಳು ಪ್ರದರ್ಶನಗೊಂಡವು. ಕನ್ನಡದಲ್ಲಿ ‘ಚಾಕ್ ಸರ್ಕಲ್’ ಎಂಬ ನಾಟಕವನ್ನು ಹೇಮಂತ್ ಬೆಂಗಳೂರು, ಉತ್ತರ ಕರ್ನಾಟಕದ ಭಾಗದ ಕನ್ನಡದಲ್ಲಿ ಮಂಜು ಸಾಣೆಹಳ್ಳಿ ಅವರು ‘ಕಾಡಿನ ಮಕ್ಕಳು’ ಎಂಬ ನಾಟಕ, ತುಳು ಭಾಷೆಯಲ್ಲಿ ‘ಜೈ ಕುಲೆ’ ನಾಟಕವನ್ನು ರೋಹಿತ್ ಬೈಕಾಡಿ, ಅರೆಭಾಷೆಯಲ್ಲಿ ‘ಕುಬೇರನ ಸಮ್ಮಾನ’ ನಾಟಕವನ್ನು ಮೋಹನ್ ಶೇಣಿ, ಹಿಂದಿಯಲ್ಲಿ ‘ಅಂಧೇರಿ ನಗರ ಚೌಪಟ್ ರಾಜ’ ಎಂಬ ನಾಟಕವನ್ನು ವಿನೋದ್ ಕರ್ಕೇರಾ, ಇಂಗ್ಲೀಷ್ನಲ್ಲಿ ‘ಸ್ಟೋರೀಸ್ ಆಪ್ ಪಂಚತಂತ್ರ’ ನಾಟಕವನ್ನು ಶುಭಕರ್ ಪುತ್ತೂರು ನಿರ್ದೇಶಿಸಿ ವಿದ್ಯಾರ್ಥಿಗಳು ಪ್ರದರ್ಶಿಸಿದರು.