ಬೆಂಗಳೂರು:ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದು ನಮ್ಮ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುವ ಕ್ರೀಡಾಪಟುಗಳಿಗೆ ಸಿಎಂ ಡಿ. ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿಗಳು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಸನ್ಮಾನ ಮಾಡಿ ಗೌರವ ಸೂಚಿಸಿದ್ದಾರೆ.ಏಷ್ಯನ್ ಗೇಮ್ಸ್ನಲ್ಲಿ ರಾಜ್ಯದ ಕ್ರೀಡಾಪಟುಗಳು ಅದ್ಭುತ ಸಾಧನೆ ತೋರಿದಿದ್ದಾರೆ ಎಂದು
ಸಿಎಂ ಡಿಕೆಶಿ ಹೊಗಳಿದ್ದಾರೆ. ಇನ್ನು ಕರ್ನಾಟಕದ ಕ್ರೀಡಾ ಪ್ರತಿಭೆಗಳಿಗೆ ಹೆಚ್ಚಿನ ಆರ್ಥಿಕ ಪ್ರೋತ್ಸಾಹ, ಉದ್ಯೋಗ ಭದ್ರತೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಅಗತ್ಯ ನೆರವು ಕಲ್ಪಿಸುವ ಉದ್ದೇಶದಿಂದ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಾ. ಜಿ. ಪರಮೇಶ್ವರ ಹೇಳಿದ್ದಾರೆ.
ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದ ಕ್ರೀಡಾವೀರರಿಗೆ ನಗದು ಬಹುಮಾನವನ್ನು ನೀಡಲಾಗಿದೆ. ಈ ಹಿಂದೆ ಚಿನ್ನದ ಪದಕ ವಿಜೇತರಿಗೆ 35 ಲಕ್ಷ ರೂ, ಬೆಳ್ಳಿ ಪದಕ ವಿಜೇತರಿಗೆ 25 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತರಿಗೆ 15 ಲಕ್ಷ ರೂ. ನಗದು ಪುರಸ್ಕಾರ ನೀಡಲಾಗುತ್ತಿತ್ತು. ಆದರೆ ಇದೀಗ ಚಿನ್ನದ ಪದಕ ವಿಜೇತರಿಗೆ ಒಂದು ಕೋಟಿ ರೂಪಾಯಿ, ಬೆಳ್ಳಿ ಪದಕ ವಿಜೇತರಿಗೆ 75 ಲಕ್ಷ ರೂ ಮತ್ತು ಕಂಚಿನ ಪದಕ ಗೆದ್ದರೆ 50 ಲಕ್ಷ ರೂ. ನಗದು ಪುರಸ್ಕಾರ ನೀಡಲಾಗುವುದು.
ಈ ಬಾರಿ ಎಂಟು ಮಂದಿಗೆ ಈ ನಗದು ಪುರಸ್ಕಾರ ಸಿಗಲಿದ್ದು, ಜೊತೆಗೆ ಈ ಎಂಟು ಪದಕ ವಿಜೇತರಿಗೆ ಏಷ್ಯನ್ ಗೇಮ್ಸ್ 2026ರಲ್ಲಿ ಭಾಗವಹಿಸಿದ್ದಕ್ಕಾಗಿ, ಪದಕ ಸಾಧನೆಗೆ ನೀಡಲಾಗುವ ನಗದು ಪುರಸ್ಕಾರದ ಹೆಚ್ಚುವರಿಯಾಗಿ ತಲಾ 5 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು.
ಒಲಿಂಪಿಕ್ಸ್ನಲ್ಲಿ ಕರ್ನಾಟಕದ ಕ್ರೀಡಾಪಟುಗಳ ಭಾಗವಹಿಸುವಿಕೆ ಮತ್ತು ಸಾಧನೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೊಳಿಸಿರುವ ‘ಗುರಿ: ಒಲಿಂಪಿಕ್ಸ್’ ಯೋಜನೆಯಡಿ 2026-27ನೇ ಸಾಲಿಗೆ ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರ ಪೈಕಿ ಆಯ್ದ ನಾಲ್ವರು ಕ್ರೀಡಾಪಟುಗಳಾದ ಎಂ.ಆರ್.ಪೂವಮ್ಮ, ಸ್ನೇಹಾ ಎಸ್.ಎಸ್., ಶ್ರೇಯಾಂಕ ಪಾಟೀಲ್, ಶಿಲ್ಪಾ ಕೆ.ಎಸ್ ಅವರನ್ನು ಸೇರ್ಪಡೆ ಮಾಡಲಾಗಿದೆ. ಈ ಕ್ರೀಡಾಪಟುಗಳಿಗೆ ಒಲಿಂಪಿಕ್ಸ್ ಸಿದ್ಧತೆ, ತರಬೇತಿ ಹಾಗೂ ಇತರೆ ಅಗತ್ಯಗಳಿಗೆ ಪ್ರಸಕ್ತ ಸಾಲಿನಲ್ಲಿ ತಲಾ 10 ಲಕ್ಷ ನಗದು ಪ್ರೋತ್ಸಾಹಧನ ನೀಡಲಾಗುವುದು.







