ನಾಗೋಯಾ:ಏಷ್ಯನ್ ಗೇಮ್ಸ್ನ ಆರ್ಚರಿಯಲ್ಲಿ ಭಾರತಕ್ಕೆ ಬುಧವಾರ ಅವಳಿ ಚಿನ್ನದ ಪದಕ ಒಲಿದಿದೆ.ಮಹಿಳೆಯರ ಕಾಂಪೌಂಡ್ ಅರ್ಚರಿಯಲ್ಲಿ ಭಾರತ ಮಹಿಳೆಯರ ತಂಡವು ಚಿನ್ನದ ಪದಕ ಗೆದ್ದಿದೆ.ಆರ್ಚರಿ ಮಿಶ್ರ ತಂಡ ವಿಭಾಗದಲ್ಲೂ ಭಾರತ ಚಿನ್ನ ಗೆದ್ದಿದೆ. ಮಹಿಳಾ ವಿಭಾಗದ
ಫೈನಲ್ ಪಂದ್ಯದಲ್ಲಿ
ಚೀನಾ ತಂಡವನ್ನು ಸೋಲಿಸುವ ಮೂಲಕ ಭಾರತ ಮಹಿಳೆಯರ ತಂಡವು ಚಿನ್ನದ ಪದಕ ಗೆದ್ದಿದೆ.ಜ್ಯೋತಿ ಸುರೇಖಾ, ಚಿಕಿತಾ ತಾನಿಪರ್ತಿ, ಪ್ರಿತಿಕಾ ಪ್ರದೀಪ್ ಅವರನ್ನು ಒಳಗೊಂಡ ಭಾರತ ತಂಡವು 238-234 ಪಾಯಿಂಟ್ಗಳ ಅಂತರದಲ್ಲಿ ಚೀನಾ ತಂಡದ ವಿರುದ್ಧ ಗೆಲುವು ಸಾಧಿಸಿದೆ.
ಇದರ ಬೆನ್ನಲ್ಲೇ ಆರ್ಚರಿ ಮಿಶ್ರ ತಂಡ ವಿಭಾಗದಲ್ಲೂ ಚಿಕಿತಾ ತನಿಪಾರ್ತಿ ಮತ್ತು ಸಾಹಿಲ್ ಜಾಧವ್ ಜೋಡಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದುಕೊಟ್ಟಿತು.
2023ರ ಏಷ್ಯನ್ ಗೇಮ್ಸ್ನಲ್ಲೂ ಭಾರತದ ಮಹಿಳೆಯರ ಕಾಂಪೌಂಡ್ ಅರ್ಚರಿ ತಂಡವು ಚಿನ್ನದ ಪದಕ ಗೆದ್ದಿತ್ತು. ಮಹಿಳೆಯರ 60 ಕೆಜಿ ವಿಭಾಗದ ಬಾಕ್ಸಿಂಗ್ ಸೆಮಿಫೈನಲ್ನಲ್ಲಿ ಪ್ರಿಯಾ ಘಂಗಾಸ್ ಅವರು ಚೀನಾದ ಯಾಂಗ್ ಚೆಂಗ್ಯು ವಿರುದ್ಧ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಮಹಿಳಾ ಸ್ಕ್ವಾಷ್ ತಂಡವು ಸಿಂಗಾಪುರವನ್ನು 2-0 ಅಂತರದಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಪದಕವನ್ನು ಖಾತ್ರಿಪಡಿಸಿದೆ.









