ಲಿಸ್ಬನ್: ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅಂತಾರಾಷ್ಟ್ರೀಯ ಪುಟ್ಬಾಲ್ನಿಂದ ನಿವೃತ್ತಿಯಾಗುವುದಾಗಿ ಗುರುವಾರ ಘೋಷಿಸಿದ್ದಾರೆ.41 ವರ್ಷದ ಅವರು, 2016ರ ಯುರೋ ಕಪ್ನಲ್ಲಿ ಪೋರ್ಚುಗಲ್ ತಂಡವನ್ನು ಮೊದಲ ಪ್ರಮುಖ ಪ್ರಶಸ್ತಿಯತ್ತ ಮುನ್ನಡೆಸಿದ್ದರು. 2019 ಮತ್ತು 2025ರ ನೇಷನ್ಸ್ ಲೀಗ್ ಪ್ರಶಸ್ತಿಗಳನ್ನು
ಗೆಲ್ಲುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.
‘ಇದು ಸುಲಭದ ನಿರ್ಧಾರವಾಗಿರಲಿಲ್ಲ. ಏಕೆಂದರೆ ಕೆಲವು ನಿರ್ಧಾರಗಳನ್ನು ಕೇವಲ ಬುದ್ಧಿಯಿಂದ ಮಾತ್ರವಲ್ಲ, ಹೃದಯದ ಮಾತು ಕೇಳಿಯೂ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ರೊನಾಲ್ಡೊ ಹೇಳಿದ್ದಾರೆ.‘ನನ್ನ ಯಾವುದಾದರೂ ಗೋಲು ನಿಮ್ಮನ್ನು ಸಂತೋಷಪಡಿಸಿದ್ದರೆ, ಯಾರನ್ನಾದರೂ ಅಪ್ಪಿಕೊಳ್ಳುವಂತೆ ಮಾಡಿದ್ದರೆ, ನಿಮ್ಮ ಚಿಂತೆಯನ್ನು ಮರೆಸಿದ್ದರೆ ಅಥವಾ ನಮ್ಮ ದೇಶದ ಬಗ್ಗೆ ಹೆಮ್ಮೆ ಮೂಡಿಸಿದ್ದರೆ, ನನ್ನ ಪ್ರಯತ್ನ ಸಾರ್ಥಕವಾಗಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.ರಾಷ್ಟ್ರೀಯ ತಂಡದೊಂದಿಗಿನ 23 ವರ್ಷಗಳ
ಪಯಣದಲ್ಲಿ ಬೆಂಬಲಿಸಿದ ಕುಟುಂಬ, ಪೋರ್ಚುಗಲ್ನ ಜನರು, ಸಹ ಆಟಗಾರರು, ತರಬೇತುದಾರರು ಮತ್ತು ಸಿಬ್ಬಂದಿಗೆ ರೊನಾಲ್ಡೊ ಧನ್ಯವಾದ ಅರ್ಪಿಸಿದ್ದಾರೆ.ಪೋರ್ಚುಗಲ್ ಪರ 234 ಪಂದ್ಯಗಳನ್ನು ಆಡಿರುವ ರೊನಾಲ್ಡೊ 146 ಗೋಲುಗಳನ್ನು ಗಳಿಸಿದ್ದಾರೆ. ಅತಿ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಮತ್ತು ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ವಿಶ್ವದಾಖಲೆ ಅವರ ಹೆಸರಿನಲ್ಲಿದೆ.2026ರ ಫಿಫಾ ವಿಶ್ವಕಪ್ನಲ್ಲಿ ಅವರು ಕೊನೆಯ ಬಾರಿಗೆ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಆಡಿದ್ದರು. ತಮ್ಮ ವೃತ್ತಿಜೀವನದಲ್ಲಿ ಒಲಿಯದಿದ್ದ ಏಕೈಕ ಪ್ರಮುಖ ಪ್ರಶಸ್ತಿಯಾದ ವಿಶ್ವಕಪ್ ಗೆಲ್ಲುವ ಪ್ರಯತ್ನದಲ್ಲಿದ್ದರು. ಆದರೆ,
ಅಂತಿಮವಾಗಿ ಚಾಂಪಿಯನ್ ಆದ ಸ್ಪೇನ್ ವಿರುದ್ಧ 1–0 ಗೋಲುಗಳಿಂದ ಸೋತ ಪೋರ್ಚುಗಲ್, ಪ್ರಿ ಕ್ವಾರ್ಟರ್ಫೈನಲ್ನಲ್ಲೇ ಟೂರ್ನಿಯಿಂದ ಹೊರಬಿದ್ದಿತ್ತು. ಆರು ವಿಶ್ವಕಪ್ಗಳಲ್ಲಿ ಆಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಅವರಿಗಿದೆ. ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರು 6 ವಿಶ್ವಕಪ್ಗಳಲ್ಲಿ ಕಾಣಿಸಿಕೊಂಡಿದ್ದಾರೆ.ರೊನಾಲ್ಡೊ ಅವರ ನಿವೃತ್ತಿ ಘೋಷಣೆಯ ಬಳಿಕ ಪೋರ್ಚುಗೀಸ್ ಫುಟ್ಬಾಲ್ ಫೆಡರೇಷನ್ ಹೇಳಿಕೆ ಬಿಡುಗಡೆ ಮಾಡಿ, ತಂಡಕ್ಕೆ ಅವರು ನೀಡಿದ ಕೊಡುಗೆಗಳಿಗಾಗಿ ಅಪಾರ ಮತ್ತು ಎಂದೆಂದಿಗೂ ಉಳಿಯುವ ಕೃತಜ್ಞತೆ ಸಲ್ಲಿಸಿದೆ.


























