ಮುಂಬೈ:ಐಪಿಎಲ್ 2027ರ ಸೀಸನ್ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಪಂಜಾಬ್ ಕಿಂಗ್ಸ್ನ ಪ್ರಮುಖ ವೇಗಿ ಅರ್ಷದೀಪ್ ಸಿಂಗ್ ತಂಡ ಬದಲಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ.ಈ ಬೆಳವಣಿಗೆಯಿಂದ ಎರಡೂ ತಂಡಗಳಸಂಯೋಜನೆಯಲ್ಲಿ ಮಹತ್ವದ
ಬದಲಾವಣೆಗಳಾಗುವ ನಿರೀಕ್ಷೆಯಿದೆ.ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ 18 ಕೋಟಿ ರೂ. ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಲಿದ್ದು, ಆರ್ಷದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲಿದ್ದಾರೆ. ಇದರ ಜೊತೆಗೆ ಮುಂಬೈ ತಂಡಕ್ಕೆ ಹೊಸ ನಾಯಕನ ಹುಡುಕಾಟವೂ ಆರಂಭವಾಗಲಿದೆ. ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಹಾಗೂ ಸೂರ್ಯಕುಮಾರ್ ಯಾದವ್ ಅವರಂತಹ ಅನುಭವಿ ಆಟಗಾರರು ನಾಯಕತ್ವದ ರೇಸ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.ಹಾರ್ದಿಕ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ನಿರೀಕ್ಷಿತ
ಪ್ರದರ್ಶನ ನೀಡಲು ವಿಫಲವಾಗಿತ್ತು. 2026ರ ಐಪಿಎಲ್ನಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವು ದಾಖಲಿಸಿದ ತಂಡ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದು, ನಾಕೌಟ್ ಹಂತ ತಲುಪುವಲ್ಲಿ ವಿಫಲವಾಗಿತ್ತು. ಹೀಗಾಗಿ ಮುಂದಿನ ಸೀಸನ್ನಲ್ಲಿ ತಂಡದ ಪುನರಾಗಮನಕ್ಕೆ ಹೊಸ ಯೋಜನೆ ರೂಪಿಸುವ ಅನಿವಾರ್ಯತೆ ಎದುರಾಗಿದೆ.ಮೊದಲ ಪ್ರಶಸ್ತಿಯ ಕನಸಿಗೆ ಪಂಜಾಬ್ ಬಲ
ಹಾರ್ದಿಕ್ ಸೇರ್ಪಡೆಯಿಂದ ಪಂಜಾಬ್ ಕಿಂಗ್ಸ್ ತಂಡದ ಬಲ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ. ನಾಯಕ ಶ್ರೇಯಸ್ ಅಯ್ಯರ್ ಜೊತೆಗೆ ಮಾರ್ಕೊ ಯಾನ್ಸನ್, ಯುಜ್ವೇಂದ್ರ ಚಹಲ್, ಪ್ರಿಯಾಂಶ್ ಆರ್ಯ ಅವರಂತಹ ಆಟಗಾರರಿರುವ ತಂಡಕ್ಕೆ ಹಾರ್ದಿಕ್ ಹೊಸ ಆಯ್ಕೆಯಾಗಲಿದ್ದಾರೆ. ಇತ್ತ ಬುಮ್ರಾ ಮತ್ತು ಅರ್ಷದೀಪ್ ಜೋಡಿ ಮುಂಬೈ ಬೌಲಿಂಗ್ ವಿಭಾಗಕ್ಕೆ ಬಲ ತುಂಬುವ ನಿರೀಕ್ಷೆಯಿದೆ.
































