ಅಲ್ ಅಮೆರತ್:ಇಲ್ಲಿ ನಡೆದ 19 ವರ್ಷದೊಳಗಿನವರ ಎಸಿಸಿ ಮೆನ್ಸ್ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಅಫ್ಗಾನಿಸ್ತಾನವನ್ನು ಮಣಿಸಿದ ಭಾರತ ತಂಡವು ಫೈನಲ್ಗೆ ಲಗ್ಗೆ ಇಟ್ಟಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಗಾನಿಸ್ತಾನ ಅಂಡರ್ 19 ತಂಡವು ನೋಮನ್ ಸಲಾರ್ಜೈ (51) ಮತ್ತು
ಶಾ ಫೈಸಲ್ ರಹಿಮಿ (51) ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 227 ರನ್ ಕಲೆಹಾಕಿತು.ಭಾರತದ ಪರ ಇಶಾನ್ ಸೂದ್ ಮೂರು ವಿಕೆಟ್ ಪಡೆದು ಮಿಂಚಿದರೆ, ಅರ್ಜುನ್ ಸವಸಾನಿ ಎರಡು ವಿಕೆಟ್ ಪಡೆದುಕೊಂಡರು. ಕಾವ್ಯ ಪಟೇಲ್, ಯಶ್ಬರ್ಧನ್ ಚೌಹಾಣ್, ಅರ್ಜುನ್ ರಜಪುತ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ಅಂಡರ್ 19 ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ನಾಯಕ ಲಕ್ಷ್ಯ ರಾಜೇಶ್ ರೈಚಂದಾನಿ (93) ಮತ್ತು ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ (53) 117 ರನ್ಗಳ ಜೊತೆಯಾಟ ಆಡುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಂತರ ಬಂದ ವಿ.ಕೆ. ವಿನೀತ್ ಕೂಡ (ಅಜೇಯ 57) ಉತ್ತಮ ಪ್ರದರ್ಶನ ತೋರುವ ಮೂಲಕ 36.5 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಲು ನೆರವಾದರು.
ಅಫ್ಗಾನಿಸ್ತಾನ ಪರ ನೂರ್ ಅಲಿ ನಯಾಜಿ ಮತ್ತು ನಾಯಕ ಸೋಹೆಲ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
































