*ಚಂದ್ರಾವತಿ ಬಡ್ಡಡ್ಕ.
ಯಾದಾರೊಂದು ಸಂಗತಿ ಯಾರೊಟ್ಟಿಗಾರ್ ಸೆರಿ ಆತ್ಲರೆ ಸಾಮಾನ್ಯಕೆ ಒಂದು ಮಾತ್ ಹೇಳ್ದುಟ್ಟು. ಅದ್ ಎಂತಾಂತೇಳ್ರೇ, ನೀ ಅಲ್ಲರೆ ನಿನ್ನಪ್ಪಾಂತ. ಇಲ್ಲಿ ಒಂದು ಗೂಡೆ ಈ ಮಾತ್ನ ಅಕ್ಷರಕ್ಷರ ಸತ್ಯ ಮಾಡಿಟುಗಡ. ಹಾಂಗೇಂತ ಅದೇ ಅದರ ಸೋಷಿಯಲ್ ಮೀಡಿಯಾ ಎಕೌಂಟ್ಲಿ ಹೇಳಿಕಂಡುಟು.
ವಿಷಯ ಎಂತಾಂತೇಳ್ರೆ, ಆ ಗೂಡೆಗೆ ಒಂದು ಹೈದನೊಟ್ಟಿಗೆ ಲವ್ವು. ಒಟ್ಟಿಗೆ ಅಲ್ಲಿ-ಇಲ್ಲಿ ತಿರ್ಗಿ, ಡೇಟಿಂಗ್ ಹೋಗಿ, ಮಜಾ ಮಾಡಿ ಎಲ್ಲ ಆದಮೇಲೆ ಹೈದಂಗೆ ಆ ಗೂಡೆ ಬೇಡಾಂತಾಗಿ ಸೂನೆ ಹೇಳಿಕೆ ಸುರುಮಾಡ್ತ್. ಅದರ
ಬುಟ್ಟ್ ಇನ್ನೊಂದರೊಟ್ಟಿ ಚಂಙಾಯಿ ಸುರುಮಾಡ್ತ್. ಫಾರೀನ್ ದೇಶಗಳ್ಲೆಲ್ಲ ಲವ್ವು ಮಾಡ್ದು, ಮೊದುವೆ ಆದು ಬುಡ್ದು ಎಲ್ಲ ಮಾಮೂಲು, ಅಂತಾ ದೊಡ್ಡ ಸಂಗತಿ ಏನಲ್ಲ. ಈಗ ನಮ್ಮಲ್ಲಿನೂ ಹಾಂಗೆ ಕೆಲವು ಸಂಗತಿಗ ಕಂಡವೆ. ಸುಡಲಿ ಅದರ. ಆದರೆ, ಈ ಗೂಡೆಗೆ ಮಾತ್ರ ಆ ಹೈದನ ಮೊದುವೆ ಆಕೂಂತ ಇತ್ತ್. ಅಂವ ಮಾಡ್ದ ಮೋಸ ಅದ್ಕೆ ಭಯಂಕರ ಬೆಚ್ಚ ಆತ್ಗಡ. ಬೆಚ್ಚ ಆಗದೆ ಇರ್ದೋ? ಬೊಯ್ದ್, ಹೊಡ್ದ್, ಮರ್ಟ್, ದೂರ್ ಹೇಳಿ, ಎದೆಎದೆ ಹೊಡ್ಕಂಡ್ ರಣಾರಂಪ ಮಾಡಿ ಸಿಕ್ಕಿಸಿಕ್ಕಿದವರೊಟ್ಟಿಗೆ ಗೋಳು ಹೇಳಿಕಣದೆ ಸುಮ್ಮಂಗೆ ಇತ್ತ್ಗಡ. ನಿಂಗೆ ಕಲ್ಸಿನೆ ‘ಮಂಞಂ’ತೇಳೆ ಹಲ್ಲ್ಕಚ್ಚಿತ್.
ಸಾಮಾನ್ಯಕ್ಕೆ ಏನಾರ್ ಕೈತಪ್ಪಿ ಹೋದರೆ, ಒಬ್ಬ ಬುಟ್ಟು ಹೋದರೆ, ಇಲ್ಲರೆ, ಯಾದಾರ್ ಸಂದಾನಮನಿ ತಪ್ಪಿ ಹೋದರೆ ನಾವು ಸಮ್ದಾನ ಮಾಡ್ದುಟ್ಟು. ಹೋದರೆ ಹೋಗಲಿ ಬುಡು, ಅಂವ ಅಲ್ಲರೆ, ಅಂವನ ಅಪ್ಪನಾಂಗಿದ್ದಂವ ಸಿಕ್ಕುದೂಂತ. ಈ ಗೂಡೆಗೆನೂ ಹಾಂಗೆ ಯಾರಾರ್ ಸಮ್ದಾನ ಮಾಡ್ದೊನೋ ಗೊತ್ತಿಲೆ. ಅದ್ ಮಾತ್ರ ಸೀದಾ ಅವನ ಅಪ್ಪನನೇ ಮೊದುವೆ ಆಗಿ ಆ ಹೈದಂಗೆ ಚಿಕವ ಆಗಿ ಶಾಕ್ ಕೊಟ್ಟತ್ಗಡ!
ಲವರ್ ಗೂಡೆ ಆಗಿದ್ದದ್ ಈಗ ಅಪ್ಪನ ಹೆಣ್ಣಾತ್. ಅಪ್ಪನ ಮೊದುವೆ ಆಗಿ ಅಯ್ಯೆನ ಜಾಗೆಲಿ ಬಂದ್ ಕುದ್ದತ್. ಮನೆ ಎಜಮಾಂತಿ ಆಗಿ ಕಾರ್ಬಾರ ಸುರುಮಾಡ್ತ್. ಈ ಹೈದ ಬೇರೆ ಗೂಡೆನ ಮೊದುವೆ ಆಕನ ಎಲ್ಲ ವಿಷಯಲೂ ನಾ ಹೇಳ್ದೇ ನಡಿಯೊಕೂಂತ ಆ ಹೈದಂಗೆ ಸಾಕ್ಬೇಕ್ ಮಾಡ್ತ್. ನಾ ಮನೆ ಎಜಮಾಂತಿ ಆಗಿರಿಕನ ಎಲ್ಲ ನಾ ಹೇಳ್ದಾಂಗೆ ನಡಿಯೊಕೂಂತ ಪ್ರತಿಯೊಂದರ್ಲೂ ಮೂಂಕು ಹಾಕಿಕೆ ಹೋತ್. ಅದ್ ಏಕೆ ನನ್ನೊಟ್ಟಿಗೆ ಹೇಳ್ತ್ಲೆ, ಇದ್ ಏಕೆ ಹೀಂಗೆ, ಮೊದೊಳಿಗೆ ಗೂಡೆ ನೋಡಿಕೆ ಪೊರ್ಲಿಲ್ಲೆ…. ಹೀಂಗೆಲ್ಲ ಹೇಳಿ…. ಒಂದೆರ್ಡಲ್ಲ, ಸಿಕ್ಕಿಸಿಕ್ಕಿದ ವಿಷಯಲಿ ಆ ಹೈದನನೂ ಅವನ ಗೂಡೆನನೂ ಮೇಲೆಕೆಳಗೆ ಮಾಡಿ ಬಂಙಾನ ಬಂಙ ಬರ್ಸಿತ್.
ಇದ್ ಸಾಲ್ದ್ಂತ ಮೊದುವೆ ದಿನ ಮೊದೊಳಿಗೆನಂತದೇ ಬೆಳ್ದ್ ಬಣ್ಣದ ಡ್ರೆಸ್ ಹಾಕಿ ಮೊದುಮಂಙನ ಎದ್ರೆದ್ರ್ ಹೋಗಿ ನಿತ್ತ್ ಅವಂಗೆ ಸುಮ್ಮಂಗಾವಾಂಗೆ ಮಾಡ್ತ್ಗಡ. ಸಾಮಾನ್ಯಕೆ ಅತ್ತನ ಎಲ್ಲ ಮೊದುವೆಗಳ್ಲಿ ಮೊದೊಳಿಗೆ ಬೆಳ್ದ್ ಬಣ್ಣದ ಗೌನ್ ಹಾಕುದು ಪದ್ಧತಿ. ಒಳ್ದವು ನಂಟ್ರ್ಗ, ಮನೆವೂ, ದೋಸ್ತಿಗಾ ಎಲ್ಲ ಬಣ್ಣಬಣ್ಣದ ಬೇರೆ ನಮೂನೆ ಡ್ರೆಸ್ಸ್ ಹಾಕುದು. ಈ ‘ಚಿಕವ’ ಮಾತ್ರ ಅದೂ ಸಾಲ್ದ್ಂತ ಎಲ್ಲವು ಪಟಕ್ಕೆ ನಿಲ್ಲಿಕನ ಎಲ್ಲಾ ಪಟಲಿನೂ ಹೋಗಿ ನಿತ್ತ್ ಮೊದುಮಂಙಂಗೂ ಮೊದೊಳಿಗೆಗೆನೂ ಸಾಕ್ಬೇಕ್ ಮಾಡ್ತ್ಗಡ. ಈ ‘ಚಿಕವನ’ ಈ ಎಲ್ಲ ಆಟಗಳ ಮೊದುಮಂಙಂಗೆ ಅಗಿಯಕೂ ಅಲ್ಲ ನುಂಗಿಕೂ ಅಲ್ಲ. ಎಷ್ಟಾರ್ ಅಪ್ಪನ ಹೆಣ್ಣ್, ಮನೆ ಎಜಮಾಂತಿ ಸ್ಥಾನಮಾನ. ಇದರ ಆಟಗಳ ನೋಡಿನೋಡಿ ಮೊದುಮಂಙನ ತಂಗೆಗೆ ಸಿಟ್ಟ್ ಬಂದ್ ಸತ್ತತ್. ಕಡೆಗೆ ಅದ್ ಅದರ ಜೊಸ್ತಿಗಳೊಟ್ಟಿಗೆ ಸೇರಿ ಹೇಂಗಾರ್ ಈ ಚಿಕವನ ಉಪದ್ರನ ತಪ್ಪುಸಿತ್ಗಡ. ಹೀಂಗೆಂತ ಹೈದನ ತಂಗೆನೂ ಅದರ ಸೋಷಿಯಲಿ ಮೀಡಿಯಾಲಿ ಬರ್ಕಂಡುಟು. ಇತ್ತ ಈ ಹೊಸ ಚಿಕವನೂ ಅದರ ಸೋಷಿಯಲ್ ಮೀಡಿಯಾಲಿ ಅದ್ ಅದರ ಹಳೆಹೈದನ ಅಪ್ಪನ ಮೊದುವೆ ಆದ ಕತೆನನೂ ಬರ್ಕಂಡುಟು. ಇದರೆಲ್ಲ ಓದಿದವರ್ದ್ ಒಂದೇ ಪ್ರಶ್ನೆ, ಈ ಹೈದ ಅವನ
ಅಪ್ಪನೊಟ್ಟಿಗೆ ಏನೂ ಹೇಳದೆ ಇದರೆಲ್ಲ ಸೈರ್ಸಿಕಂಡದ್ಕೆ ಕಾರಣ ಏನ್ಂತ.
ಹೀಂಗೆ ಈ ಗೂಡೆ ಎಲ್ಲ ವಿಷಯ ಹೇಳಿಕಂಡ್ “ಹೇಂಗೇ…. ನಾ ಅವಂಗೆ ಮಾಡ್ದ ಮುಯ್ಯಿಗೆ ಮುಯ್ಯೀಂತ” ಕೇಳಿಟು. ಅದ್ಕೆ ಅದರ ಜೋಸ್ತಿಗ ಎಲ್ಲವೂ ನೀ ಜಾಣೆಂತ ಹೊಗಳ್ಯಳೋ. ಈ ಸುದ್ದಿ ಕೇಳಿ ಹಕ್ಕಲೆಕ್ಕಲೆ ಸುಮಾರ್ ಒಂದ್ ತಿಂಗಳ್ಂದ ಮೇಲೆ ಆಗುಟು. ಇಂಗ್ಲೀಸ್ ಪೇಪರ್ಗಳ್ಲಿ ಬಂದೀತ್. ಅದರ ಹೆಡ್ಡಿಂಗ್ ನೋಡಿಕನೇ ನಂಗೆ, ‘ನೀ ಅಲ್ಲರೆ ನಿನ್ನಪ್ಪಂತೇಳಿ’ ನೆಗೆ ಬಂದ್ ಬೊತ್ತ್. ನಿಮ್ಮೊಟ್ಟಿಗೆ ಹೇಳಿಕಣಕೂಂತ ಆಗಳೇ ಗ್ರೇಸೀದೆ.
ಈ ಕತೆ ಹೀಂಗಾದರೆ ಇನ್ನೊಂದು ಕತೆ ಇನ್ನೊಂದು ನಮೂನೆ ಲಾಯ್ಕುಟ್ಟು. ಅದೆಂತಾಂತೇಳ್ರೇ ಹೀಂಗೆ ಇನ್ನೊಂದು ಹೈದ ಅವನ ಗೂಡೆ ಮೇಲೆ ಸುಮ್ಮಸುಮ್ಮಂಗಾರ್ ಸುಳ್ಳುಸುಳ್ಳೇ ಬೇಡಾದ್ದ್ ಹೇಳಿ ಇನ್ನೊಂದು ಗೂಡೆನ ಮೊದುವೆ ಆಗೀತ್ ಗಡ. ಮೊದುವೆ ಆಗಿ ಹಂಞ ಸಮಯ ಕಳ್ದ್ ಡೈವೋರ್ಸ್ನಕ್ಕಲೆ ಎತ್ತೀತ್. ಇದ್ ಸುರುನ ಗೂಡೆಗೆ ಗೊತ್ತಾಗಿ ಅವನ ಹೆಣ್ಣ್ನ ಕಂಡ್ ಮಾತಾಡಿ ಅಂವ ಎಂತಾ ಸುಳ್ಳಾಂತ ಸಾಕ್ಷಿ ಸಮೇತ ತೋರ್ಸಿತ್. ಈಗ ಸೋಷಿಯಲ್ ಮೀಡಿಯಾ ಕಾಲ ಅಲ್ಲನೋ. ಈ ಗೂಡೆನೂ ಅವನ ಹೆಣ್ಣ್ನೂ ಒಟ್ಟುಸೇರಿ ಪ್ಲಾನ್ ಮಾಡಿ, ಬೇರೆಬೇರೆ ನಂಬರ್ಂದ ಬೇರೆಬೇರೆ ಅಕೌಂಟ್ ಓಪನ್ ಮಾಡಿ ಅವಂಗೆ ಮೆಸೇಜ್ ಕಳ್ಸಿದೊ. ಹೈದ ಸುಲಾಬಲಿ ಸಿಕ್ಕಿಬೀತ್. ಹೀಂಗೆಲ್ಲ ಕತೆಗಡ ಸಣಪಾ. ನೀವು ಏನೇಳ್ರೇ…..?