*ಗಣೇಶ್ ಮಾವಂಜಿ.
ನೀನು ಪಾಸಾ?… ಅವಳು ಫೈಲಂತೆ! …ಅದೃಷ್ಟ ಅಂದರೆ ಅವನದ್ದು…ಅಂವ ಕ್ಲಾಸಿಗೂ ಸರಿಯಾಗಿ ಬರುತ್ತಿರಲಿಲ್ಲ… ಹಾಗಿದ್ರೂ ಅವನು ಪಾಸಂತೆ..ಛೇ…ಪಾಪ…ಅಂವ ಈ ಸಲವೂ ಫೈಲಂತೆ… ಎರಡೆರಡು ಸಲ ಒಂದೇ ಕ್ಲಾಸಲ್ಲಿ ಡುಮ್ಕಿಯಂತೆ….
ಪ್ರತೀ ಬಾರಿ ಎಪ್ರಿಲ್ 10 ರಂದು ಮಕ್ಕಳ ಭವಿಷ್ಯ ನಿರ್ಧಾರಾಗುವ ಪಾಸ್-ಫೈಲ್ ಎಂದು ಕರೆಯಲ್ಪಡುವ ಶಾಲಾ ಮಕ್ಕಳ ಪರೀಕ್ಷಾ ಫಲಿತಾಂಶ ಪ್ರಕಟಗೊಳ್ಳುವ ದಿನದಂದು ಕೇಳಿ ಬರುವ ಮಾತುಗಳಿವು. ಆಗೆಲ್ಲಾ ಸಾಧಾರಣವಾಗಿ ಒಂದು ಕ್ಲಾಸಿನಲ್ಲಿ ಹತ್ತು, ಹದಿನೈದು ಮಕ್ಕಳಾದರೂ ಡುಮ್ಕಿ ಹೊಡೆಯುತ್ತಿದ್ದರು. ಒಂದರಿಂದ ಹತ್ತನೇ ತರಗತಿಯವರೆಗೆ ಫೈಲ್ ಆಗದೆ ಸಾಗುವ ವಿದ್ಯಾರ್ಥಿ ಬುದ್ಧಿವಂತ ಎಂಬುದು ಎಲ್ಲರೂ
ಅಂದಾಜಿಸುವ ಸಂಗತಿಯಾಗಿತ್ತು.
ಈಗಿನ ಹಾಗೆ ಸೆಮಿಸ್ಟರ್ ಶಿಕ್ಷಣ ಪದ್ಧತಿ ಆಗಿರಲಿಲ್ಲ. ಜೂನ್ ನಲ್ಲಿ ಓದಿದ ವಿಷಯವನ್ನು ಮಧ್ಯಾವಧಿ ಪರೀಕ್ಷೆಯಲ್ಲೂ ಓದಬೇಕಾಗಿತ್ತಲ್ಲದೆ ವರ್ಷದ ಕೊನೆಯಲ್ಲಿ ಬರೆಯುವ ವಾರ್ಷಿಕ ಪರೀಕ್ಷೆಗೂ ಓದಿ ತಯಾರಿ ಮಾಡಿಕೊಳ್ಳಬೇಕಿತ್ತು. ಅಲ್ಲದೆ ಒಮ್ಮೆ ಓದಿ ಮುಗಿದು ಪರೀಕ್ಷೆ ಬರೆದ ಪಾಠಗಳು ಮುಂದಿನ ಪರೀಕ್ಷೆಗೆ ಇಲ್ಲವೆಂದಾಗುತ್ತಿದ್ದರೆ ಬಹುಷ: ಆ ಪ್ರಶ್ನೋತ್ತರ ಪುಸ್ತಕಗಳು ಗುಜುರಿ ಅಂಗಡಿ ಸೇರುತ್ತಿದ್ದವೋ ಏನೋ!
ಹೀಗಾದುದರಿಂದ ಮಕ್ಕಳು ಎಲ್ಲಾ ಪಾಠಗಳನ್ನೂ ಓದಿ ವಾರ್ಷಿಕ ಪರೀಕ್ಷೆಯ ಸಂದರ್ಭ ಉತ್ತರಗಳನ್ನು ಬಾಯಿಪಾಠ ಮಾಡಿಕೊಳ್ಳಬೇಕಾಗುತ್ತಿತ್ತು. ಕೊನೆಗೆ ಫಲಿತಾಂಶ ಪ್ರಕಟಗೊಳ್ಳುವ ವೇಳೆ ಓದಿನಲ್ಲಿ ಹಿಂದೆ ಉಳಿಯುವ ಮಕ್ಕಳು ಫೈಲ್ ಆಗುತ್ತಿರುವುದು ಸರ್ವೇ ಸಾಮಾನ್ಯ ಎಂಬಂತಾಗುತ್ತಿತ್ತು.
ಸಾಮಾನ್ಯವಾಗಿ ಎಪ್ರಿಲ್ ಹತ್ತರಂದೇ ಎಲ್ಲಾ ಶಾಲೆಗಳಲ್ಲೂ ಫಲಿತಾಂಶ ಪ್ರಕಟಗೊಳ್ಳುತ್ತಿತ್ತು. ಈಗಿನ ಹಾಗೆ ಬೈಕ್ ನಲ್ಲಿ, ರಿಕ್ಷಾದಲ್ಲಿ, ಶಾಲಾ ಬಸ್ಸಿನಲ್ಲಿ ಶಾಲೆಗೆ ಹೋಗುವ ಕಾಲ ಅದಾಗಿರಲಿಲ್ಲ. ಹೆಚ್ಚಿನ ಮಕ್ಕಳು ಮೂರ್ನಾಲ್ಕು ಕಿಲೋ ಮೀಟರ್ ಪಾದ ಸವೆಸಿಯೇ ಶಾಲಾ ಮೆಟ್ಟಿಲು ಹತ್ತಬೇಕಾಗಿತ್ತು. ಹಣೆಬರಹ ನಿರ್ಧಾರವಾಗುವ ಪಾಸ್- ಫೈಲ್ ಎಂಬ ಪ್ರಹಸನದ ದಿನ ಮಕ್ಕಳು ಏನಾಗುತ್ತದೋ ಎಂಬ ಆತಂಕದಿಂದಲೇ ಶಾಲೆಗೆ ಬರುತ್ತಿದ್ದರು. ಹೀಗೆ ಬರುವಾಗ ಅದ್ಯಾವುದೋ ಎಲೆಯನ್ನು ಮೇಲೆ ಹಾರಿಸಿ ಬೆನ್ನು ಬಿದ್ದರೆ ಪಾಸ್, ಹೊಟ್ಟೆ ಬಿದ್ದರೆ ಫೈಲ್ ಎಂಬ ಲೆಕ್ಕಾಚಾರದಲ್ಲಿ ತೊಡಗುತ್ತಿದ್ದರು. ಹೀಗೆ ಎಲೆ ಹಾರಿಸುವಾಗ ‘ಫೈಲ್’ ಎಂದು ಬಂದರೂ ‘ಪಾಸ್’ ಎಂಬ ಫಲಿತಾಂಶ ಬರುವವರೆಗೂ ಎಲೆ ಹಾರಾಟ ಮುಂದುವರಿಯುತ್ತಿತ್ತು. ಇನ್ನು ಅಪಶಕುನ ಎಂದೆನಿಸಿದ ಬೆಕ್ಕು ಆ ದಿನ ಅಡ್ಡ ಬಂದರಂತೂ ಮಕ್ಕಳ ಕಲ್ಲೇಟು ಗ್ಯಾರಂಟಿ ಎಂಬಂತಾಗಿತ್ತು.

ಆದರೆ ಶಾಲೆಯಲ್ಲಿ ಶಿಕ್ಷಕರು ಪಾಸ್ ಆದವರ ಹೆಸರು ಹೇಳುವಾಗ ಎಲೆ ಭವಿಷ್ಯ ಸುಳ್ಳಾಗುತ್ತಿತ್ತು. ಬೆಕ್ಕು ಅಡ್ಡ ಬಂದರೂ ಫಲಿತಾಂಶ ಪಾಸ್ ಎಂದಾದಾಗ ಮಕ್ಕಳ ಖುಷಿಗೆ ಪಾರವೇ ಇರುತ್ತಿರಲಿಲ್ಲ. ಪಾಸ್ ಆದ ಮಕ್ಕಳು ಗಾಳಿ ತುಂಬಿದ ಬಲೂನಿನಂತೆ ಎದೆಯುಬ್ಬಿಸಿ ನಡೆದರೆ ಫೈಲ್ ಆದ ಮಕ್ಕಳ ಮುಖ ಬಾಡಿದ ಬದನೆಕಾಯಿಯಂತಾಗುತ್ತಿತ್ತು. ಹಾಗಿದ್ದರೂ ಫೈಲ್ ಆದ ಮಕ್ಕಳ ಬೇಸರ ಕೇವಲ ಒಂದೆರಡು ದಿನಕ್ಕಷ್ಟೇ ಸೀಮಿತಗೊಳ್ಳುತ್ತಿತ್ತು. ಮತ್ತೆ ಬೇಸಿಗೆ ರಜೆಯ ಮಜಾ ಉಡಾಯಿಸುವುದರಲ್ಲೇ ಮಕ್ಕಳು ತಲ್ಲೀನರಾಗುತ್ತಿದ್ದರು. ಹಾಗಿದ್ದರೂ ಜೂನ್ ಒಂದರಂದು ಶಾಲೆ ಮತ್ತೆ ತೆರೆದಾಗ, ಫೈಲ್ ಆದ ಮಕ್ಕಳು ಅದೇ ಕ್ಲಾಸಿನಲ್ಲಿ ಕುಳಿತುಕೊಳ್ಳಬೇಕಾದಾಗ ಎಳೆಯ ಆ ಮಕ್ಕಳಿಗೂ ಮಂಡೆಬೆಚ್ಚ ಅಗದೆ ಇರುತ್ತಿರಲಿಲ್ಲ.
ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಕಡ್ಡಾಯ ಶಿಕ್ಷಣದ ಹೆಸರಿನಲ್ಲಿ ಮಕ್ಕಳಿಗೆ ಪ್ರಮೋಷನ್ ವ್ಯವಸ್ಥೆ ಇರುವುದರಿಂದಾಗಿ ಒಂದನೇ ಕ್ಲಾಸಿನಿಂದ ಹತ್ತನೇ ತರಗತಿಯವರೆಗೆ ಡುಮ್ಕಿ ಹೊಡೆಯದೆ ಮುಂದುವರಿಯಬಹುದಾಗಿದೆ. ಹತ್ತನೇ ತರಗತಿಗೆ ಕಾಲಿಟ್ಟ ವಿದ್ಯಾರ್ಥಿಯ ಬೌದ್ಧಿಕ ಮಟ್ಟ ಅಳೆದರೆ ಈ ಪ್ರಮೋಷನ್ ವ್ಯವಸ್ಥೆ ತಂದಿಟ್ಟ ಫಚೀತಿಯ ಬಗ್ಗೆ ಅರಿತುಕೊಳ್ಳಬಹುದೇನೋ!
ಆದರೆ ಇಲ್ಲಿ ಉಲ್ಲೇಖಿಸಲೇಬೇಕಾದ ಮತ್ತೊಂದು ಅಂಶವಿದೆ. ಪಾಸ್-ಫೈಲ್ ಎಂಬ ಪ್ರಹಸನ ಕೇವಲ ಒಂದು ತರಗತಿಯಿಂದ ಮತ್ತೊಂದು ತರಗತಿಗೆ ಪಾದಾರ್ಪಣೆ ಮಾಡಲು ಸಿಗುವ ಲೈಸನ್ಸ್ ಮಾತ್ರವೇ ವಿನಃ ಅದು ಜೀವನದ ಯಶಸ್ಸಿನ ಕೀಲಿ ಕೈ ಅಲ್ಲವೇ ಅಲ್ಲ. ಏಕೆಂದರೆ ಪ್ರಾಥಮಿಕ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಎರಡೆರಡು ಬಾರಿ ಫೈಲ್ ಆದ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಕಂಡಿರುತ್ತಾನೆ. ಒಂದು ಬಾರಿಯೂ ಅನುತ್ತೀರ್ಣನಾಗದೆ ಮುಂದುವರಿದ ವಿದ್ಯಾರ್ಥಿ ಜೀವನದಲ್ಲಿ ಗೋತಾ ಹೊಡೆದಿರುವ ಉದಾಹರಣೆಗಳೂ ಇಲ್ಲದಿಲ್ಲ.
ಪುಸ್ತಕದ ಜ್ಞಾನಕ್ಕಿಂತಲೂ ಹೆಚ್ಚಾಗಿ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಲೇಬೇಕಾದುದು ಅತ್ಯವಶ್ಯಕ. ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿ ಹಿರಿಯರಿಗೆ ಗೌರವ ನೀಡುವುದಿಲ್ಲ ಎಂದಾದರೆ ಆ ಜ್ಞಾನಕ್ಕೆ ಎಳ್ಳಷ್ಟೂ ಬೆಲೆ ಇಲ್ಲ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ದೇಶಪ್ರೇಮದ ಬಗ್ಗೆ ಇರಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ವಿದ್ಯಾರ್ಥಿ ಹುಟ್ಟಿಬೆಳೆದ ನೆಲಕ್ಕೆ ಗೌರವ ನೀಡದೆ ಅನ್ಯ ದೇಶದ ಬಗ್ಗೆ ಒಲವು ಬೆಳೆಸಿಕೊಂಡರೇನು ಪ್ರಯೋಜನ?
ಕಲಿಕಾ ಫಲಿತಾಂಶ ಜೀವನದ ಯಶಶ್ಸಿಗೆ ಮಾನದಂಡವಾದರೆ ಉತ್ತಮ. ಆದರೆ ಬಹುತೇಕ ಸಂದರ್ಭಗಳಲ್ಲಿ ಶಾಲಾ ಫಲಿತಾಂಶ ಜೀವನದ ಸವಾಲುಗಳನ್ನು ಎದರಿಸಲು ಸಹಕರಿಸುವುದೇ ಇಲ್ಲ. ಹಾಗೆಂದು ಕಲಿಕೆಯಲ್ಲಿ ಉತ್ತಮ ನಿರ್ವಹಣೆ ತೋರಿದವರು ಬದುಕಿನಲ್ಲಿ ಉನ್ನತ ಸ್ಥಾನ ಏರುವದರಲ್ಲಿ ಸಫಲತೆ ಸಾಧಿಸುವುದೇ ಇಲ್ಲ ಎಂಬುದು ನನ್ನ ವಾದವಲ್ಲ. ಜ್ಞಾನ ಗಳಿಕೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ನೆಮ್ಮದಿಯ ಜೀವನ ಸಾಗಿಸಬಹುದು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕೆಂಬುದಷ್ಟೇ ನನ್ನ ಕೋರಿಕೆ.

(ಗಣೇಶ್ ಮಾವಂಜಿ ಪತ್ರಕರ್ತರು ಹಾಗೂ ಲೇಖಕರು)