*ಡಾ.ಸುಂದರ ಕೇನಾಜೆ.
ಇವರಿಬ್ಬರ ಬಗ್ಗೆ ಬರೆಯದಿದ್ದರೆ ಈ ಅಂಕಣವೇ ಅಪೂರ್ಣ. ಅಷ್ಟರ ಮಟ್ಟಿನ ಪ್ರಭಾವಶಾಲಿಗಳು ಇವರು. ನೆಟ್ಟಗೆ ಶಾಲೆಯ ಮೆಟ್ಟಲನ್ನು ತುಳಿಯದ, ಅನ್ನದ ಬಟ್ಟಲನ್ನು ಕಾಣದ, ಅಪಮಾನಗಳ ಬದುಕನ್ನು ಹಾಸುಹೊದ್ದು ಮೇಲೆ ಬಂದ ಇವರಿಬ್ಬರೂ ಇಂದು ಹೆಮ್ಮೆಪಡುವ ಕಲಾವಿದರು. ದಿನ ಬೆಳಗಾದರೆ ಆರ್ಭಟಿಸುವ ಮೈಕಗಳ ಬಾಯಿಗೆ ಇಂಪಾದ ಸ್ವರಗಳನ್ನು ನೀಡುತ್ತಾ ಪರಂಪರೆಯ ಕಥನಗಳನ್ನು ಮುಂದಕ್ಕೆ ದಾಟಿಸುತ್ತಾ ಬಂದ ಈ ಇಬ್ಬರೂ ಈ ಉತ್ಕೃಷ್ಟ ಪರಂಪರೆಯ
ಸಮರ್ಥ ಪ್ರತಿನಿಧಿಗಳು. ಆದರೆ ಕೊನೆಯ ಕೊಂಡಿಗಳು ಎನ್ನುವುದೇ ವಿಷಾದನೀಯ. ಹೊಸ ತಲೆಮಾರು ಎಷ್ಟೇ ಕಲಿತರೂ ಇವರನ್ನು ಮೀರುವುದು ಕಷ್ಟ, ಕಲಿಕೆಗೆ ಅಧುನಿಕ ಸ್ಪರ್ಶ ಎಷ್ಟೇ ಸಮರ್ಥವಾಗಿ ನೀಡಿದರೂ ಕಲಿಯುವ ವಾತಾವರಣ ಸೃಷ್ಟಿಸುವುದು ಇನ್ನೂ ಕಷ್ಟ.
ಕೃಷ್ಣಾಪುರ (ಮಳವಳ್ಳಿ) ಮಹದೇವ ಸ್ವಾಮಿ ಮತ್ತು ಮೈಸೂರು ಗುರುರಾಜ್ ನೀಲಗಾರ ಪರಂಪರೆಯಲ್ಲಿ ಕಥೆ ಮಾಡುವ ಎರಡು ಕಣ್ಣುಗಳು. ಇವರನ್ನು ಮೀರುವ ಇನ್ನೊಬ್ಬ ಈ ಪರಂಪರೆಯಲ್ಲಿ ಹಿಂದೆ ಆಗಿ ಹೋಗಿರಬಹುದು, ಆದರೆ ಮುಂದೆ ಬರುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಆವರಿಸಿಕೊಂಡವರು. ಹಾಗೆ ನೋಡಿದರೆ ನೀಲಗಾರ ಪರಂಪರೆಯಲ್ಲಿ ಎಂತೆಂಥಾ ಮಹಾನ್ ಕಲಾವಿದರು ಹುಟ್ಟಿ ಮೆರೆದಿದ್ದಾರೋ? ಆದರೆ ಕಾಲದ ಮಧ್ಯೆ ದಾಖಲೆಯಾಗಿ ಉಳಿದದ್ದು ಅಷ್ಟುಇಷ್ಟು ಮಾತ್ರ. ಇದಕ್ಕೆ ವಾಕ್ ದಾಖಲೆಯೇ ಅಂತಿಮ ಎಂದು ಹೇಳುವುದಾದರೆ ಇಂದು ನಮ್ಮ ಮುಂದೆ ಇರುವ ಈ ಇಬ್ಬರು ಕಲಾವಿದರು ಸಾಗಿ ಬಂದ ಗುರು
ಪರಂಪರೆಯೇ ಸಾಕ್ಷಿ. ಸುಮಾರು ಐನೂರು ಆರುನೂರು ವರ್ಷಗಳ ಹಿಂದಿನ ಈ ನೀಲಗಾರ ಪರಂಪರೆಯನ್ನು ಕಾವ್ಯ ಶಕ್ತಿಯ ಮೂಲಕ ಕಟ್ಟಿ ನಿಲ್ಲಿಸುತ್ತಾ ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಭಾವಶಾಲಿ ಜನಪದ ಗಾಯನ ಪರಂಪರೆಯ ಸ್ಥಾನ ಪಡೆಯಲು ಕಾರಣವಾದದ್ದು ನೀಲಗಾರರ ಗುರು ಪರಂಪರೆಯಿಂದ. ಆದರೆ ಈ ಪರಂಪರೆ ಅವನತಿಯ ಹಂತದಲ್ಲಿದೆ. ಒಂದು ಕಾಲದ ವಾಸ್ತವ ಚರಿತ್ರೆಯನ್ನು ಬಾಯಿಂದ ಬಾಯಿಗೆ ದಾಟಿಸುತ್ತಾ ಆ ಚರಿತ್ರೆಗೆ ಪ್ರತಿಭಾ ಸಂಪನ್ನ ಕಲಾವಿದ ಜೀವ ನೀಡುತ್ತಾ ತನ್ನ ಜೀವನಕ್ಕೂ ದಾರಿಯಾಗಿಸುತ್ತಾ ಬಂದ ಈ ಪರಂಪರೆಯ ನಡೆಯೂ ಕುತೂಹಲಕಾರಿಯಾದುದು (ನೋಡಿ, ಮಾತಿನ ಮಹಾ ಕಾವ್ಯ ಮತ್ತು ಮಲೆ ಮಾದೇಶ್ವರ ಸಾಕ್ಷ್ಯಚಿತ್ರ)
ಮಂಟೇಸ್ವಾಮಿ ಮತ್ತು ಮಲೆ ಮಾದೇಶ್ವರ ಪರಂಪರೆಯ ಜನಪದ ಮಹಾಕಾವ್ಯಗಳನ್ನು ಸಮುದಾಯದ ಮಧ್ಯೆ ಪ್ರಸಿದ್ಧಿಗೊಳಿಸುವ ಮೂಲಕ ತಳಸಮುದಾಯದ ಈ ಇಬ್ಬರು ಕಲಾವಿದರು ಕಳೆದ ಐವತ್ತು ಅರವತ್ತು ವರ್ಷಗಳಿಂದ ಕಲಿತ ಕಥನ ಮತ್ತು ಹಾಡಿದ ಹಾಡು ಅಗಣಿತವಾದುದು. ಇಬ್ಬರೂ ಒಬ್ಬರನ್ನೊಬ್ಬರು ಮೀರಿಸುವಂತೆ ಬೆಳೆದು ನಿಂತವರು.ಜತೆಗೆ ಸಮಾನ ಆಸಕ್ತರು, ಪ್ರತಿಸ್ಪರ್ಧಿಗಳೂ ಹೌದು. ವೃತ್ತಿ ಗಾಯಕರಾದ ಇಬ್ಬರಿಗೂ ಬರುವ ಸಾಲುಗಳು, ತಾಳ, ಲಯ ಜ್ಞಾನ, ರಾಗ ಮತ್ತು ಪ್ರತ್ಯುತ್ಪನ್ನಮತಿತ್ವ ಜನಪದ ಕಾವ್ಯ ಪರಂಪರೆಯಲ್ಲೇ ಅಸಮಾನ್ಯವಾದುದು.
ತಳಸಮದಾಯದ ಪರಂಪರಾಗತ ಕಷ್ಟಕೋಟಲೆಗಳ ಮಧ್ಯೆ, ತಾವು ಕಲಿತ ಕಥೆ ಹೇಳುವ ಪರಂಪರೆಯನ್ನು ಅತ್ಯಂತ ಪರಿಣಾಮಕಾರಿಯಾಗಿಯೇ ಪ್ರಸ್ತುತ ಪಡಿಸುತ್ತಾ ಬಂದ ಮಹದೇವ ಸ್ವಾಮಿ ಹುಟ್ಟು ಕಲಾವಿದ. ದೇವರಗುಡ್ಡ ಸಂಪ್ರದಾಯಕ್ಕೆ ಸೇರಿ ಮಲೆ ಮಹದೇಶ್ವರ ಹಾಗೂ ಮುಡುಕುತೊರೆಯ ಮಲ್ಲಿಕಾರ್ಜುನನ ಕಂಸಾಳೆ ಹಾಡುಗಳಿಂದ ಆರಂಭಿಸಿ, ನೀಲಗಾರ ಸಂಪ್ರದಾಯದ ಅಷ್ಟೋ ಹಾಡುಗಳನ್ನು ಹಾಡುವ ಪ್ರತಿಭಾವಂತ ಕಥೆಗಾರ(ಹಾಡುಗಾರ). ರಾತ್ರಿ ಹಗಲೆನ್ನದೇ ಬಹಳ ದೀರ್ಘ ಕಥನವನ್ನು ಅತ್ಯಂತ ಸಲೀಸಾಗಿ ಮತ್ತು ಅಷ್ಟೇ ಸುಶ್ರಾವ್ಯವಾಗಿ ಹಾಡಬಲ್ಲ ಮಹದೇವ ಸ್ವಾಮಿ ಈ ವರೆಗೆ ಹಾಡಿದ ಹಾಡುಗಳಿಗೆ, ಹತ್ತಿದ ವೇದಿಕೆಗಳಿಗೆ ಲೆಕ್ಕವಿಲ್ಲ. ತನ್ನ ಹಾಡುಗಳನ್ನು ಅಸಂಖ್ಯ ಕ್ಯಾಸೆಟ್, ಸಿಡಿಗಳ ಮೂಲಕವೂ ಮನೆ ಮಾತಾಗಿಸಿದವರು. ಈ ರೀತಿಯ ಬೆಳವಣಿಗೆಯಿಂದ ಮೈಸೂರು ಗುರುರಾಜ್ ಕೂಡ ಹೊರತಾದವರಲ್ಲ. ಹುಟ್ಟು ನೀಲಗಾರ ಪರಂಪರೆಗೆ ಸೇರಿದ ಇವರು ಮಂಟೇಸ್ವಾಮಿ ಕಾವ್ಯದ ಜತೆಗೆ ಇನ್ನೂ ಅನೇಕ ಕಥೆಗಳನ್ನು ಹಗಲು ರಾತ್ರಿ ಎನ್ನದೇ ಹಾಡಬಲ್ಲವರು. ನಾಗರ ಹೆಡೆಯ ತಂಬೂರಿ ಹಿಡಿದು ಒಮ್ಮೆ ಝೇಂಕರಿಸಿ ಹಾಡಲು ಆರಂಭಿಸಿದರೆ ಇವರೂ ಮೈಮರೆಯಬಲ್ಲರು. ಕೇಳುಗರನ್ನೂ ಮೈಮರೆಸಬಲ್ಲರು. ಪ್ರಮುಖ ಎರಡು(ಮಲೆ ಮಹದೇಶ್ವರ ಮತ್ತು ಮಂಟೇಸ್ವಾಮಿ) ಜನಪದ ಮಹಾಕಾವ್ಯಗಳಲ್ಲದೇ ಗುರುರಾಜ್ ಸುಮಾರು ಇಪ್ಪತ್ತೈದಕ್ಕೂ ಹೆಚ್ಚಿನ ಕಥೆಗಳನ್ನು ದೀರ್ಘಕಾಲ ಹಾಡಬಲ್ಲರು.
ಈ ಇಬ್ಬರು ಕಲಾವಿದರು ಭಾರತದ ಮೂಲೆಮೂಲೆಗಳಲ್ಲಿ ಹಾಡಿದ್ದು ಮಾತ್ರವಲ್ಲದೇ ಅಮೇರಿಕಾದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲೂ ಹಾಡಿದ್ದಾರೆ. ಇವರ ಕಲಿಕೆಯ ಹಿಂದೆ ಅಗಾಧ ಶ್ರಮ ಮತ್ತು ಗುರು ಪರಂಪರೆಯ ಬಲವಿದ್ದರೆ, ಇವರ ಸಾರ್ವಜನಿಕ ಪ್ರಸಿದ್ಧಿಯ ಹಿಂದೆ ಪ್ರೊ.ಹನೂರು ಕೃಷ್ಣಮೂರ್ತಿಯವರಂತಹಾ ಜನಪದ ವಿದ್ವಾಂಸರ ಕೊಡುಗೆಯೂ ಇದೆ. ಇವರ ಹಾಡು, ಕೃತಿ, ಸಾಕ್ಷ್ಯಚಿತ್ರ ಇತ್ಯಾದಿಗಳನ್ನು ಸಂಗ್ರಹಿಸಿ ಅಂತರ್ ಜಾಲದಲ್ಲಿ ಅಳವಡಿಸುವುದರಲ್ಲಿ ಮೈಸೂರಿನ ಅರಿವು ಸಾಂಸ್ಕೃತಿಕ ಸಂಘಟನೆಯ ಇಚ್ಛಾಶಕ್ತಿಯೂ ಇದೆ. ಈ ಇಬ್ಬರಲ್ಲಿ ಒಬ್ಬರು ಈಗಾಗಲೇ ರಾಜ್ಯೋತ್ಸವ ಪ್ರಶಸ್ತಿ, ಗೌರವ ಡಾಕ್ಟರೇಟ್ ನಂತಹಾ ಗೌರವಕ್ಕೆ ಪಾತ್ರರಾದರೆ, ಇನ್ನೊಬ್ಬರೂ ಇವನ್ನೆಲ್ಲ ಪಡೆಯುವ ಎಲ್ಲ ಅರ್ಹತೆ ಇರುವವರೇ ಆಗಿದ್ದಾರೆ.
ಈ ಮಧ್ಯೆ ನೀಲಗಾರರ ಕಲಿಕಾ ಪರಂಪರೆ (ಎಲ್ಲ ಜನಪದ ಕಾವ್ಯಗಳಿಗೂ ಇದು ಅನ್ವಯಿಸುತ್ತದೆ) ಸಂದಿಗ್ಧ ಸ್ಥಿಯಲ್ಲಿರುವ ಈ ಕಾಲದಲ್ಲಿ ಈ ಇಬ್ಬರು ಕಲಾವಿದರು ದೃಢವಾದ ನಿರ್ಧಾರವೊಂದನ್ನು ಕೈಗೊಳ್ಳಬೇಕಾಗಿದೆ, ಇದೇ ಈ ಬರಹದ ಆಶಯ(ಇದು ಎಲ್ಲ ಜನಪದ ಕಲಾವಿದರಿಗೂ ಅನ್ವಯಿಸುತ್ತದೆ) ಅದೇನೆಂದರೆ ತಮ್ಮ ಬಳಿ ಇರುವ ಅದೆಷ್ಟೋ ರಾತ್ರಿ ಹಗಲು ಹಾಡಬಹುದಾದ ಕಥನಗಳ ವೀಡಿಯೋ ಧ್ವನಿ ಮುದ್ರಣವನ್ನು ಆದಷ್ಟು ಬೇಗ ನಡೆಸಬೇಕು. ತಮ್ಮ ಶಿಷ್ಯ ಪರಂಪರೆಯಿಂದ ಈ ಉತ್ಕೃಷ್ಟ ಕಾವ್ಯವನ್ನು ಉಳಿಸುತ್ತೇವೆ ಎನ್ನುವ ಭರವಸೆ ಒಂದಿನಿತೂ ಇಲ್ಲದ ಈ ಕಾಲದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಅದನ್ನು ದಾಖಲಿಸಿಕೊಳ್ಳಬೇಕು. ಆ ಮೂಲಕ ತಾವು ಶ್ರಮಪಟ್ಟು ಕಲಿತ ಈ ವಿದ್ಯೆಯನ್ನು ಮುಂದಿನ ತಲೆಮಾರು ಗುರುತಿಸುವಂತೆ, ಅದರ ಮೌಲ್ಯವನ್ನು ಅರಿಯುವಂತೆ ಮತ್ತು ತಮ್ಮ ಹೆಸರನ್ನು ಚಿರಕಾಲ ಉಳಿಯುವಂತೆ ಮಾಡಬೇಕು. ಮಂಟೇಸ್ವಾಮಿ ಪೀಠ ಇವರಲ್ಲಿ ಓರ್ವರ ದೀರ್ಘ ವಿಡಿಯೋ ಮುದ್ರಣವನ್ನು ಈಗಾಗಲೇ ಮಾಡಿ ಅಂತರ್ ಜಾಲಕ್ಕೆಸಲ್ಲಿಸುವ ತಯಾರಿಯಲ್ಲಿದೆ. ಅದರಂತೆ ಆರ್ಥಿಕ ನೆರವಿನ ಯಾವುದೇ ಸಂಸ್ಥೆ ಇವರಿಬ್ಬರ ಪ್ರತಿಭೆಯನ್ನು ದಾಖಲಿಸಲು ಮುಂದೆ ಬರಬೇಕು. ಇದಕ್ಕೆ ಈ ಇಬ್ಬರು ಕಲಾವಿದರು ಮುಕ್ತ ಮನಸ್ಸಿನಿಂದ ಸಹಕರಿಸಬೇಕು. ಆ ಮೂಲಕ ಕೋಟ್ಯಾಂತರ ಅಂತರ್ಜಾಲ ಶಿಷ್ಯರನ್ನು ಪಡೆದುಕೊಳ್ಳಬೇಕು. ಇದು ನಡೆಯಲಿ ಎಂದು ಆಶಿಸುತ್ತೇನೆ.

(ಡಾ.ಸುಂದರ ಕೇನಾಜೆ ಜಾನಪದ ಸಂಶೋಧಕರು ಹಾಗೂ ಅಂಕಣಕಾರರು)