ಸುಳ್ಯ: ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ, ನಗರ ನೈರ್ಮಲ್ಯ ಜಾಗೃತಿ ಕುರಿತು ತರಬೇತಿ ಶಿಬಿರ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸುಳ್ಯ ನಗರ ಪಂಚಾಯತ್, ಕೆವಿಜಿ ದಂತ ಮಹಾ ವಿದ್ಯಾಲಯ,ಸ್ವಚ್ಛ ಭಾರತ್ ಮಿಷನ್, ಮಾಹಿತಿ ಶಿಕ್ಷಣ ಸಂವಹನ ಹಾಗೂ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ
ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕೆವಿಜಿ ದಂತ ಮಹಾ ವಿದ್ಯಾಲಯದ ಎಕ್ಸಿಕ್ಯುಟಿವ್ ಡೈರೆಕ್ಟರ್ ಮೌರ್ಯ ಆರ್. ಪ್ರಸಾದ್ ಶಿಬಿರವನ್ನು ಉದ್ಘಾಟಿಸಿದರು. ಡಾ.ರಾಜೇಶ್ ಬೆಜ್ಜಂಗಳ ಪುತ್ತೂರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ, ಉಪಾಧ್ಯಕ್ಷ ಬುದ್ಧ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ, ಕೆವಿಜಿ ದಂತ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಮೋಕ್ಷಾ ನಾಯಕ್, ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಸುಳ್ಯ ಪಟ್ಟಣ ಪಂಚಾಯತ್ ಹಾಗೂ ಕೆ ವಿ ಜಿ ದಂತ ಮಹಾ ವಿದ್ಯಾಲಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ, ಸ್ವಚ್ಛತಾ ಜಾಗೃತಿ ಅಭಿಯಾನ ನಡೆಯಿತು. ನಗರದ ವಿವೇಕಾನಂದ ವೃತ್ತದಿಂದ ಕುರುಂಜಿಭಾಗ್ವರೆಗೆ ವಿವಿಧ ಕಡೆಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು, ನಗರ ಪಂಚಾಯತ್ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಅಮರ ಸುಳ್ಯ ರಮಣೀಯ ತಂಡದ ಸದಸ್ಯರು ಹಾಗೂ ಸಾರ್ವಜನಿಕರು ಅಭಿಯಾನದಲ್ಲಿ ಭಾಗವಹಿಸಿದರು.