ಸುಳ್ಯ:ಗಡಿ ಪ್ರೇಶದ ಜನರ ಪ್ರಮುಖ ಸಂಪರ್ಕ ರಸ್ತೆ ದೇವರಗುಂಡ- ಮಯಗೇರು ರಸ್ತೆಯಲ್ಲಿ ದೇವರ ಗುಂಡದಿಂದ ದೇಲಂಪಾಡಿ ಗ್ರಾಮದ ಬನಾರಿ ಸಂಪರ್ಕಿಸುವ ರಸ್ತೆಯಲ್ಲಿ ತೀರಾ ಹದಗೆಟ್ಟಿರುವ ಕರ್ನಾಟಕದ ಭಾಗದ ರಸ್ತೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವೀಕ್ಷಿಸಿ ಪರಿಶೀಲನೆ ನಡೆಸಿದರು. ಹದಗೆಟ್ಟಿರುವ ರಸ್ತೆಯನ್ನು ಅಭಿವೃದ್ಧಿ ಮಾಡಲು
ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು. ಸುಳ್ಯ- ಕಾಸರಗೋಡು ಅಂತಾರಾಜ್ಯ ರಸ್ತೆಯಲ್ಲಿ ದೇವರಗುಂಡದಿಂದ ಬನಾರಿಗೆ ಸುಮಾರು 3 ಕಿ.ಮಿ.ದೂರ ಇದೆ. ಇದರಲ್ಲಿ ದೇವರಗುಂಡದಿಂದ ಬೆಳ್ಳಿಪ್ಪಾಡಿ ಮೈಕ್ರೋ ಟವರ್ ಸಮೀಪದವರೆಗೆ ಸುಮಾರು ಒಂದು ಕಿ.ಮಿ.ರಸ್ತೆ ಕರ್ನಾಟಕದ ಭಾಗ.
ಸುಮಾರು 8-10 ವರ್ಷಗಳ ಹಿಂದೆ ಈ ರಸ್ತೆ ಅಭಿವೃದ್ಧಿ ಕಂಡಿತ್ತು. ಆದರೆ ಇದೀಗ ರಸ್ತೆ ಸಂಪೂರ್ಣ ಎಕ್ಕುಟ್ಟಿ ಹೋಗಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ಡಾಮರು ಎದ್ದು ಹೋಗಿ ಬೃಹದಾಕಾರದ ಹೊಂಡ ಬಿದ್ದಿದೆ. ಕಾರು, ರಿಕ್ಷಾ, ದ್ವಿಚಕ್ರ ವಾಹನ ಸೇರಿ ಸಾಮಾನ್ಯ ವಾಹನ ಸಂಚಾರಕ್ಕೆ ದುಸ್ತರವಾಗಿದೆ. ದೇಲಂಪಾಡಿ, ಬನಾರಿ, ಬೆಳ್ಳಿಪ್ಪಾಡಿ ವಿವಿಧ ಭಾಗಗಳಿಂರ ನೂರಾರು ಮಂದಿ ಸಾರ್ವಜನಿಕರು, ವಿದ್ಯಾರ್ಥಿಗಳು ದಿನ ನಿತ್ಯದ ಅಗತ್ಯಕ್ಜಾಗಿ ಈ ರಸ್ತೆಯ ಮೂಲಕ ಸುಳ್ಯಕ್ಕೆ ಹಾಗೂ ಕಾಸರಗೋಡಿಗೆ ಹೋಗುತ್ತಾರೆ. ರಸ್ತೆಯ ಮೂಲಕ ದೇವರಗುಂಡಕ್ಕೆ ಆಗಮಿಸಿ ಸುಳ್ಯ, ಅಥವಾ ಕಾಸರಗೋಡಿಗೆ ಹೋಗಬೇಕು. ಕೆಲವು ದಶಕಗಳ ಹಿಂದೆ ದೇವರಗುಂಡ-ಬನಾರಿ ರಸ್ತೆಯಲ್ಲಿ ಬಸ್ಗಳ ಓಡಾಟ ಇತ್ತು. ಆದರೆ ರಸ್ತೆಯ ಶೋಚನೀಯ ಸ್ಥಿತಿಯಿಂದ ಬಸ್ ಪ್ರಯಾಣ ಸ್ಥಗಿತಗೊಂಡಿತು. ಈ ರಸ್ತೆಯಲ್ಲಿ ಕೇರಳದ ಭಾಗ ತಕ್ಕಮಟ್ಟಿಗೆ ಚೆನ್ನಾಗಿದೆ. ಕರ್ನಾಟಕದ ಒಂದು ಕಿ.ಮಿ. ಅಭಿವೃದ್ಧಿ ಪಡಿಸಿ ಸರ್ವ ಋತು ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕು ಎಂದು ಸ್ಥಳೀಯರು ಶಾಸಕರಲ್ಲಿ ಸ್ಥಳೀಯರು ಮನವಿ ಮಾಡಿದರು.
ರಸ್ತೆಯನ್ನು ಅಭಿವೃದ್ಧಿ ಪಡಿಸಲು ಎಲ್ಲಾ ಪ್ರಯತ್ನ ನಡೆಸುವುದಾಗಿ ಶಾಸಕರು ತಿಳಿಸಿದರು. ಸ್ಥಳೀಯರಾದ ಚಂದ್ರಶೇಖರ ಬೆಳ್ಳಿಪ್ಪಾಡಿ, ಯು.ಬಿ.ಶ್ರೀನಿಲಯ ಬೆಳ್ಳಿಪ್ಪಾಡಿ, ಧನಂಜಯ ಬೆಳ್ಳಿಪ್ಪಾಡಿ, ಶಿವರಾಮ ಗೌಡ ಬೆಳ್ಳಿಪ್ಪಾಡಿ,ಗೋಪಾಲಕೃಷ್ಣ ಮುದಿಯಾರು, ಪ್ರಸಾದ್ ಕಾಟೂರು ಮತ್ತಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.