ಮಂಗಳೂರು:ಗುತ್ತಿಗಾರು ಅಮರ ಸಂಜೀವಿನಿ ಒಕ್ಕೂಟಕ್ಕೆ ಜಿಲ್ಲಾಮಟ್ಟದ ಅತ್ಯುತ್ತಮ ಒಕ್ಕೂಟ ಪ್ರಶಸ್ತಿ ಲಭಿಸಿದೆ.ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಕೌಶಲ್ಯಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸ್ವ-ಸಹಾಯ ಗುಂಪುಗಳು ಉತ್ಪಾದಿಸುವ ಉತ್ಪನ್ನಗಳ ಜಿಲ್ಲಾ ಮಟ್ಟದ ಪ್ರದರ್ಶನ ಹಾಗೂ
ಮಾರಾಟ ಮೇಳ ಮಂಗಳೂರು ತಾಲೂಕು ಪಂಚಾಯತ್ ಆವರಣದಲ್ಲಿ ಶನಿವಾರ ನಡೆಯಿತು.ಈ ಸಂದರ್ಭದಲ್ಲಿ ಜಿಲ್ಲೆಯ ಸಂಜೀವಿನಿ ಒಕ್ಕೂಟಗಳ ಕಾರ್ಯಚಟುವಟಿಕೆಯನ್ನು ಗುರುತಿಸಿ ಬಹುಮಾನ ನೀಡಲಾಗಿದ್ದು, ಗುತ್ತಿಗಾರು ಅಮರ ಸಂಜೀವಿನಿ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟಕ್ಕೆ ಅತ್ಯುತ್ತಮ ಒಕ್ಕೂಟ ಪ್ರಶಸ್ತಿ ಹಾಗೂ 1 ಲಕ್ಷ ರೂ.ನಗದು ಲಭಿಸಿದೆ.
ಗೋಳ್ತಮಜಲು ಆಶೀರ್ವಾದ ಸಂಜೀವಿನಿ ಗ್ರಾ.ಪಂ.ಒಕ್ಕೂಟಕ್ಕೆ ಪ್ರಶಸ್ತಿ ಪತ್ರ ಹಾಗೂ 75 ಸಾವಿರ ರೂ.ನಗದು ಹಾಗೂ ಬಲ್ನಾಡು ಸಮೃದ್ಧಿ ಸಂಜೀವಿನಿ ಗ್ರಾ.ಪಂ.ಮಟ್ಟದ ಒಕ್ಕೂಟಕ್ಕೆ ಪ್ರಶಸ್ತಿ ಪತ್ರ ಹಾಗೂ 50 ಸಾವಿರ ರೂ.ನಗದು ಬಹುಮಾನ ವಿತರಿಸಲಾಯಿತು.
ಕ್ರಿಯಾಶೀಲ ಸ್ವಸಹಾಯ ಗುಂಪುಗಳ ಪೈಕಿ ಗೋಳ್ತಮಜಲು ಶ್ರೀ ಸಿದ್ಧಿವಿನಾಯಕ ಸ್ವಸಹಾಯ ಗುಂಪು 75 ಸಾವಿರ ರೂ. ನಗದು, ತಣ್ಣೀರು ಪಂಥ ಲಕ್ಷ್ಮೀ ಸಂಜೀವಿನೀ ಒಕ್ಕೂಟ 50 ಸಾವಿರ ರೂ. ನಗದು, ಕೋಡಿಂಬಾಡಿ ವಿಜಯ ಶ್ರೀ ಸ್ವಸಹಾಯ ಸಂಘಕ್ಕೆ 25 ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ದ.ಕ.ಜಿ.ಪಂ.ನ ಯೋಜನಾ ನಿರ್ದೇಶಕ ಕೆ.ಇ.ಜಯರಾಂ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಎಸ್.ಜೆ. ಸ್ವಸಹಾಯ ಗುಂಪುಗಳ ಉತ್ಪನ್ನಗಳ ಮಳಿಗೆಗಳನ್ನು ಉದ್ಘಾಟಿಸಿದರು.ಉತ್ಪನ್ನಗಳನ್ನು ಖರೀದಿಸಿದರು.
ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ತಾ.ಪಂ.ಸಹಾಯಕ ನಿರ್ದೇಶಕ ಮಹೇಶ್ , ಸಾನಿಧ್ಯ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷೆ ಕವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಜಿಲ್ಲೆಯ ವಿವಿಧ ಗುಂಪು ಒಕ್ಕೂಟಗಳ 30 ಮಳಿಗೆಗಳಲ್ಲಿ 70ಕ್ಕೂ ಅಧಿಕ ಉತ್ಪನ್ನಗಳು ಗಮನಸೆಳೆದವು.
ನಲ್ಮ್ ಜಿಲ್ಲಾ ಅಭಿಯಾನ ವ್ಯವಸ್ಥಾಪಕ ಐರಿನ್ ರೆಬೆಲ್ಲೋ ಸ್ವಾಗತಿಸಿ, ಸಂಜೀವಿನಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ವಂದಿಸಿದರು. ಜಯಾನಂದ ಬೆಳ್ತಂಗಡಿ ಕಾರ್ಯಕ್ರಮ ನಿರ್ವಹಿಸಿದರು. ಅಪರಾಹ್ನದ ಬಳಿಕ ನಡೆದ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಸಂಜೀವಿನಿ ಜಿಲ್ಲಾ ವ್ಯವಸ್ಥಾಪಕಿ ವಾಣಿಶ್ರೀ ನಿರ್ವಹಿಸಿದರು.