ಸುಳ್ಯ:ನಮ್ಮ ನೆಲದ ಚರಿತ್ರೆಯ ಬಗ್ಗೆ ಸ್ವಾಭಿಮಾನ, ತಿಳುವಳಿಕೆ ಅತೀ ಅಗತ್ಯ, ಆದರೆ ಚರಿತ್ರೆಯ ಬಗ್ಗೆ ಅಹಂಕಾರ ಸಲ್ಲದು
ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗ, ಕನ್ನಡ ಸಂಘ, ಇತಿಹಾಸ ವಿಭಾಗ ಐಕ್ಯೂಎಸಿ ಆಶ್ರಯದಲ್ಲಿ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ ಇದರ ಮನೆ ಮನೆಗೆ ಕನ್ನಡ ಪುಸ್ತಕ ಅಭಿಯಾನದಡಿಯಲ್ಲಿ
ಬಂಟಮಲೆ ಅಕಾಡೆಮಿ ಸಹಭಾಗಿತ್ವದಲ್ಲಿ ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಮರ ಸುಳ್ಯ ಸಂಗ್ರಾಮ 1837 (ಡಾ.ವಿಜಯ್ ಪೂಣಚ್ಚ ತಂಬಂಡ ಅವರ ಕೃತಿ ಆಧಾರಿತ ವಿಚಾರ ಸಂಕಿರಣ) ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಹೊಸ ತಲೆಮಾರಿನಲ್ಲಿ 150 ವರ್ಷಗಳ ಇತಿಹಾಸದ ಬಗ್ಗೆ ಕೂಡ ತಿಳುವಳಿಕೆ ಇಲ್ಲದಿರುವುದು ದುರದೃಷ್ಟಕರ ಎಂದ ಅವರು ಚರಿತ್ರೆಯ ಸಂಕೀರ್ಣ ಬೆಳವಣಿಗೆಯನ್ನು ಸರಳಗೊಳಿಸಿ ನೋಡಬಾರದು, ಅದರ ಆಳಕ್ಕೆ ಇಳಿದು ಅದರ ಸಾರವನ್ನು ಗ್ರಹಿಸಬೇಕು ಎಂದು ಹೇಳಿದರು. ತಮ್ಮ ಕೃತಿಯ ಮೂಲಕ ಅಮರ ಸಂಗ್ರಾಮದ ಇತಿಹಾಸವನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದವರು ಡಾ.ವಿಜಯ್ ಪೂಣಚ್ಚ ತಂಬಂಡ ಅವರು. ಇನ್ನೂ ಅದನ್ನು ಮುಂದುವರಿಸಬೇಕಾದ ದೊಡ್ಡ ಕೆಲಸ ಇದೆ. ಅಮರ ಸುಳ್ಯ ಕ್ರಾಂತಿಯ ಚರಿತ್ರೆಯ ಬಗೆಗಿನ ಸ್ವಾಭಿಮಾನ, ತಿಳುವಳಿಕೆ ಇನ್ನಷ್ಟು ಹೆಚ್ಚಬೇಕು ಎಂದರು. ಅಮರ ಕ್ರಾಂತಿಯ ಬಗ್ಗೆ ಒಂದು ಸಿನಿಮಾ ನಿರ್ಮಿಸಬೇಕು ಎಂದು ಅವರು ಸಲಹೆ ನೀಡಿದರು.ಇದರಿಂದ ಇನ್ನಷ್ಟು ಜನ ಮಾನಸದಲ್ಲಿ ಮುಟ್ಟಲು ಸಾಧ್ಯ ಎಂದು ಅವರು ಹೇಳಿದರು.
ವಿಚಾರ ಸಂಕಿರಣ ಉದ್ಘಾಟಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ’ ಸ್ಥಳೀಯ ಚರಿತ್ರೆಯ ಅರಿವು, ಅಧ್ಯಯನ ಅದರ ಪರಾಮರ್ಶೆ ಮಹತ್ವ ಪೂರ್ಣವಾದುದು ಎಂದು ಹೇಳಿದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ‘ ಡಾ.ಕೆ.ವಿ. ಚಿದಾನಂದ ಅಧ್ಯಕ್ಷತೆ ವಹಿಸಿದ್ದರು.ಶಾಸಕಿ ಭಾಗೀರಥಿ ಮುರುಳ್ಯ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್, ಹಂಪಿ ಕನ್ನಡ ವಿವಿಯ ಹಿರಿಯ ಪ್ರಾಧ್ಯಾಪಕರು ಮತ್ತು ಕುಲ ಸಚಿವರಾದ ಡಾ.ವಿಜಯ್ ಪೂಣಚ್ಚ ತಂಬಂಡ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಸಹ ಸಂಯೋಜಕರಾದ ಸಂಜೀವ ಕುದ್ಪಾಜೆ, ಡಾ.ಮಮತಾ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಂ.ರುದ್ರಕುಮಾರ್ ಎಂ.ಎಂ.ಸ್ವಾಗತಿಸಿದರು. ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಪ್ರಸಾರಾಂಗ ನಿರ್ದೇಶಕರು ಹಾಗೂ ಹಿರಿಯ ಪ್ರಾಧ್ಯಾಪಕರಾದ ಡಾ.ಮಾಧವ ಪೆರಾಜೆ ಪ್ರಸ್ತಾವಿಕವಾಗಿ ಮಾತನಾಡಿದರು. ಬಂಟಮಲೆ ಅಕಾಡೆಮಿ ಆಫ್ ನ್ಯಾಚುರಲ್
ಬಂಟಮಲೆ ಅಕಾಡೆಮಿ ಆಫ್ ನ್ಯಾಚುರಲ್ ಸೈನ್ಸಸ್ ಇದರ ನಿರ್ದೇಶಕ ಎ.ಕೆ.ಹಿಮಕರ ವಂದಿಸಿದರು. ಕಾರ್ಯಕ್ರಮದ ಸಂಯೋಜಕಿ ಡಾ.ಅನುರಾಧಾ ಕುರುಂಜಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿಚಾರಗೋಷ್ಠಿ ನಡೆಯಿತು.