ಸುಳ್ಯ:ಸುಳ್ಯ ಶ್ರೀ ಗುರು ರಾಘವೇಂದ್ರ ಮಠದ 7ನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಕಾರ್ಯಕ್ರಮಗಳು ಏ.21ರಂದು ಆರಂಭಗೊಂಡಿದೆ. ಶ್ರೀ ಗುರುರಾಯರ ಮಠದ ಪ್ರಧಾನ ಆರ್ಚಕರಾದ ವೇದ ಮೂರ್ತಿ ಶ್ರೀಹರಿ ಎಳಚಿತ್ತಾಯರ ಮಾರ್ಗದರ್ಶನದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ನಡೆಯುತಿದೆ. ಇದರ ಅಂಗವಾಗಿ ಏ.21 ರಂದು ಸಂಜೆ ಭಕ್ತಿ ಸಂಭ್ರಮದಲ್ಲಿ ಪಲ್ಲಕ್ಕಿಯಲ್ಲಿ ರಾಯರ ವೈಭವದ ಪಟ್ಟಣ ಸವಾರಿ ನಡೆಯಿತು.ಚೆಂಡೆ, ಡೋಲು, ವಾದ್ಯ, ಮೇಳ, ಆಕರ್ಷಕ ಭಜನೆ, ದೀಪಗಳ ಸಾಲು, ಕುಣಿತ ಭಜನೆಯೊಂದಿಗೆ
ಭಕ್ತ ಸಮೂಹದೊಂದಿಗೆ ರಾಯರು ಪಲ್ಲಕಿಯಲ್ಲಿ ಸುಳ್ಯ ನಗರದಲ್ಲಿ ಸಾಗಿ ಬಂದರು. ಭಜನೆ, ಜಯ ಘೋಷದೊಂದಿಗೆ, ಚೆಂಡೆ ವಾದ್ಯ ಮೇಳದೊಂದಿಗೆ ಪಲ್ಲಕ್ಕಿಯಲ್ಲಿ ರಾಯರ ಪಟ್ಟಣ ಸವಾರಿ ಸಾಗಿ ಬಂತು.ಶ್ರೀ ಗುರು ರಾಘವೇಂದ್ರ ಮಠದಿಂದ ಹೊರಟ ಪಟ್ಟಣ ಸವಾರಿಗೆ
ಯುವಜನ ಸಂಯುಕ್ತ ಮಂಡಳಿ, ಶ್ರೀಹರಿ ಕಾಂಪ್ಲೆಕ್ಸ್, ಬಸ್ ನಿಲ್ದಾಣದ ಬಳಿಯಲ್ಲಿ ಹಾಗು ಚೆನ್ನಕೇಶವ ದೇವಸ್ಥಾನದ ಬಳಿಯಲ್ಲಿ ಭಕ್ತ ಸಮೂಹ ಸ್ವಾಗತ ನೀಡಿದರು. ಈ ಸಂದರ್ಭದಲ್ಲಿ

ವಿಶೇಷ ನರ್ತನ ಸೇವೆ,ನೃತ್ಯ ಭಜನೆ ನಡೆಯಿತು. ಕಾಂತಮಂಗಲದಿಂದ ಆರಂಭಗೊಂಡ ಪಟ್ಟಣ ಸವಾರಿ ನಗರದಲ್ಲಿ ಸಂಚರಿಸಿ ರಥಬೀದಿಯಾಗಿ ಸಾಗಿ ಬಂದು ರಾಘವೇಂದ್ರ ಮಠಕ್ಕೆ ಹಿಂತಿರುಗಿತು. ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ, ಪದಾಧಿಕಾರಿಗಳು, ಟ್ರಸ್ಟಿಗಳು ಮತ್ತಿತರರು ಉಪಸ್ಥಿತರಿದ್ದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಏ.21 ರಂದು
ಬೆಳಿಗ್ಗೆ 7 ರಿಂದ ಮಹಾಗಣಪತಿ ಹೋಮ ಸಂಜೆ 4ರಿಂದ ಗುರು ರಾಘವೇಂದ್ರ ಮಕ್ಕಳ ಭಜನಾ ತಂಡದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ಎ.22ರಂದು ಪೂರ್ವಾಹ್ನ 9 ರಿಂದ ಪಂಚ ವಿಂಶತಿ ಕಲಶ ಪೂಜೆ, ಕಲಶಾಭಿಷೇಕ ಶ್ರೀ ರಾಘವೇಂದ್ರ ಅಷ್ಟಾಕ್ಷರಿ ಮಂತ್ರ ಹೋಮ, ಶ್ರೀ ರಾಮ ತಾರಕ ಮಂತ್ರ ಹೋಮ ನಡೆದು ಮಧ್ಯಾಹ್ನ 12 ರಿಂದ ಅಲಂಕಾರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಕ್ಕೆ ಆಶ್ಲೇಷಾ ಬಲಿ ಪೂಜೆ ರಾತ್ರಿ 7 ರಿಂದ ರಂಗಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಎ.22 ರಂದು ಪೂ.11ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ
ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಅವರಿಗೆ ರಾಘವೇಂದ್ರ ಮಠದ ವತಿಯಿಂದ ನೀಡುವ ಪ್ರಥಮ ಶ್ರೀಗುರುರಾಘವೇಂದ್ರಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು.ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ ಅಧ್ಯಕ್ಷತೆ ವಹಿಸುವರು. ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಅಭಿದನಂದನಾ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ

ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ಲೀಲಾಧರ ಡಿ.ವಿ, ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ಸುಬ್ರಹ್ಮಣ್ಯ ಮೂಡಿತ್ತಾಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಪೂ.10ರಿಂದ ದೀಪಾಂಜಲಿ ಭಜನಾ ಮಂಡಳಿ ಶಾಂತಿನಗರ ಇವರಿಂದ
ಭಜನಾ ಕಾರ್ಯಕ್ರಮ ಜರುಗಲಿದೆ. ಸಂಜೆ 6ರಿಂದ ಶ್ರೀ ಸದಾಶಿವ ಭಜನಾ ಮಂಡಳಿ ಆಲೆಟ್ಟಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.