*ಗಣೇಶ್ ಮಾವಂಜಿ.
ಆಧುನಿಕ ಸೌಕರ್ಯಗಳ ಗಂಧಗಾಳಿಯನ್ನು ಅನುಭವಿಸದ ನಮ್ಮ ಹಿರಿಯರು ತಮ್ಮ ಮಕ್ಕಳಿಗೆ ಅವರ ಬಾಲ್ಯದ ದಿನಗಳ ಬಗ್ಗೆ ವಿವರಿಸುತ್ತಾ ‘ಈಗ ಕಾಲ ಕೆಟ್ಟು ಹೋಗಿದೆ. ನಾವು ಚಿಕ್ಕಂದಿನಲ್ಲಿದ್ದಾಗ ನಮಗೆ ಹಾಕಲು ಬಟ್ಟೆಬರೆಗಳೇ ಇರಲಿಲ್ಲ. ಬೆಳಗಾಗುವ ಮೊದಲೇ ಗದ್ದೆ ಕೆಲಸಕ್ಕೋ ಅಥವಾ ಬೇರೆಯವರ ಮನೆ ಬಾಗಿಲಿಗೆ ತೆರಳಿ ಅಲ್ಲಿ ಚಾಕರಿ ಮಾಡಬೇಕಾಗಿತ್ತು. ಆದರೆ ನಿಮಗೀಗ ಅಂತಹ ದಾರಿದ್ರ್ಯ ಇಲ್ಲ. ಉಡಲು, ಉಣ್ಣಲು ಬೇಕಾದಷ್ಟಿದೆ. ಹಾಗಿದ್ದರೂ ಅಂದಿನ ಆ ದಿನಗಳೇ ಚೆನ್ನಾಗಿದ್ದವು. ಈಗ ನಿಮಗೆಲ್ಲವೂ
ಇದ್ದರೂ ನಾವು ಕಷ್ಟದ ದಿನಗಳಲ್ಲಿ ಅನುಭವಿಸಿದ ಸುಖ ನೀವೀಗ ಅನುಭವಿಸಲಾರಿರಿ’ ಎನ್ನುತ್ತಿದ್ದರು.
ಮುಂದುವರಿದ ಜಗತ್ತಿನ ಒಂದಷ್ಟು ಸೌಕರ್ಯಗಳನ್ನು ಕಂಡ ನಮ್ಮ ಹಿರಿಯರು ಮಕ್ಕಳಿಗೆ ತಮ್ಮ ಗತದಿನಗಳನ್ನು ನೆನಪಿಸುತ್ತಾ ‘ನಾವು ಶಾಲೆಗೆ ಹೋಗುವಾಗ ನಮಗೆ ಕೇವಲ ಒಂದು ಜೊತೆ ಬಟ್ಟೆ ಮಾತ್ರ ಇತ್ತು. ಅದನ್ನೇ ಒಗೆದು ಮರುದಿನ ಅದನ್ನೇ ಹಾಕಬೇಕಾಗಿತ್ತು. ಆದರೂ ಆಗಿದ್ದ ಮಜಾ ಈಗ ಇಲ್ಲವೇ ಇಲ್ಲ. ಆಗಿನ ಕಲ್ಲಾಟ, ಕುಂಟೆಬಿಲ್ಲೆ ಮುಂತಾದ ಗ್ರಾಮೀಣ ಆಟಗಳಲ್ಲಿದ್ದ ಮಜಾ ಈಗಿನ ನಿಮ್ಮ ಕ್ರಿಕೆಟ್, ವಾಲಿಬಾಲ್ ಮುಂತಾದ ಆಟಗಳಲ್ಲಿ ಖಂಡಿತಾ ಸಿಗಲಾರದು’ ಎನ್ನುತ್ತಿದ್ದರು. ಹಿರಿಯರ ಈ ಮಾತುಗಳಲ್ಲೂ ಆಗಿನ ಕಾಲವೇ ಚೆನ್ನ. ಈಗ ಕಾಲ ಬದಲಾಗಿ ಎಲ್ಲವೂ ಕೆಟ್ಟು ಹೋಗಿದೆ ಎಂಬ ಭಾವವೇ ಹೊರಹೊಮ್ಮುತ್ತಿತ್ತು.

ಕಾಲ ನಿಜಕ್ಕೂ ಬದಲಾಗಿದೆ. ದಿನಗಳು, ತಿಂಗಳುಗಳು, ವರ್ಷಗಳು ಕಳೆದಂತೆ ಜನರ ಜೀವನ ಮಟ್ಟದಲ್ಲಿ ಅಮೂಲಾಗ್ರ ಬದಲಾವಣೆಗಳಾಗಿವೆ. ಈಗಿನ ಹಿರಿಯರು ತಂದೆ, ತಾಯಿಯರು ತಮ್ಮ ಮಕ್ಕಳಿಗೂ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ ‘ನಾವು ಶಾಲೆಗೆ ಹೋಗಬೇಕಿದ್ದಲ್ಲಿ ಈಗಿರುವಂತೆ ಶಾಲಾ ಬಸ್ ಗಳು ಇರಲಿಲ್ಲ. ಮನೆ ಬಾಗಿಲಿಗೆ ಅಟೋ ಮಾಮನೂ ಬರುತ್ತಿರಲಿಲ್ಲ. ಮೂರ್ನಾಲ್ಕು ಕಿಲೋಮೀಟರ್ ನಡೆದೇ ಶಾಲಾ ಮೆಟ್ಟಿಲು ಹತ್ತಬೇಕಿತ್ತು. ಹೀಗೆ ಶಾಲೆಗೆ ಹೋಗಬೇಕಾದರೆ ಮಾವಿನ ಮರಕ್ಕೆ ಕಲ್ಲು ಬಿಸಾಡಿ ಮಿಡಿ ಮಾವಿನಕಾಯಿಗೆ ಉಪ್ಪು ಸೇರಿಸಿ ತಿಂದ ನೆನಪು, ರಸ್ತೆ ಬದಿಯ ಕೆಸರು ನೀರಿನಲ್ಲಿ ಕಾಲಾಡಿಸಿ ಖುಷಿ ಪಟ್ಟ ಕ್ಷಣಗಳ ಬಗ್ಗೆ ಮೆಲುಕು ಹಾಕುತ್ತಾರೆ. ಗತ ದಿನಗಳನ್ನು ನೆನಪಿಸುವ ಅವರ ಕಣ್ಣಿನಲ್ಲೂ ಅಂದಿನ ದಿನಗಳೇ ಒಳ್ಳೆಯದಿತ್ತು. ಈಗ ಕಾಲ ಕೆಟ್ಟು ಹೋಗಿದೆ ಎಂಬರ್ಥದ ಮಾತುಗಳೇ ಹಿರಿಯರಿಂದ ಹೊರಬರುತ್ತವೆ.
ಹೌದು ಈಗಿನ ಮಕ್ಕಳಿಗೆ ಅವರ ಹಿರಿಯರು ಅನುಭವಿಸಿದ ಕೆಲ ಕಷ್ಟದ ಸನ್ನಿವೇಶಗಳನ್ನು ಎದುರಿಸುವ ಪ್ರಮೇಯ ಇಲ್ಲವೇ ಇಲ್ಲ. ಶಾಲೆಗೆ ಹೋಗಲು ಶಾಲಾ ವಾಹನಗಳಿವೆ. ಅಟೋ ಮಾಮ ಮನೆ ಮೆಟ್ಟಿಲವರೆಗೆ ಬಂದು ಕರೆದುಕೊಂಡು ಹೋಗುತ್ತಾರೆ. ಮತ್ತೆ ಕೆಲವರು ಬೈಕಿನಲ್ಲೋ, ಕಾರಿನಲ್ಲೋ ಮಕ್ಕಳನ್ನು ಶಾಲೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಆದರೆ ಈಗಿನ ಮಕ್ಕಳಿಗೆ ಅವರ ಹಿರಿಯರ ಅಭಿಪ್ರಾಯದಂತೆ ಖುಷಿಯ ಕ್ಷಣಗಳ ಕೊರತೆ ಇದೆಯೇ? ಖಂಡಿತಾ ಇಲ್ಲ.

ಹಿಂದಿನವರಂತೆ ಶಾಲೆಗೆ ನಡೆದು ಹೋಗುವಾಗಿನ ಸುಂದರ ಅನುಭವಗಳು ಈಗಿನ ಮಕ್ಕಳಿಗೆ ಸಿಗದಿರಬಹುದು. ಆದರೆ ಶಾಲಾ ಬಸ್ಸಿನಲ್ಲೋ, ಅಟೋದಲ್ಲೋ, ಅವರರವರ ಸ್ವಂತ ವಾಹನಗಳಲ್ಲೋ ಶಾಲೆಗೆ ಸಾಗುವಾಗ ಸಿಗುವ ಆ ಅಲ್ಪ ಅವಧಿಯಲ್ಲೂ ಮಕ್ಕಳು ಮಜಾ ಉಡಾಯಿಸುತ್ತಾರೆ. ಆಧುನಿಕ ಯುಗದ ಸೌಲಭ್ಯಗಳ ಉಪಯೋಗದ ವೇಳೆಯೂ ಲೌಕಿಕ ಜ್ಞಾನವನ್ನೂ ವೃದ್ಧಿಸಿಕೊಳ್ಳುತ್ತಾರೆ.
ಈಗಿನ ಮಕ್ಕಳೂ ಮುಂದೊಂದು ದಿನ ಸಂಸಾರಿಗಳಾಗಿ ತಮ್ಮ ಬಾಲ್ಯದ ದಿನಗಳ ಬಗ್ಗೆ ಮೆಲುಕು ಹಾಕದಿರಲಾರರು. ಆ ನೆನಪುಗಳನ್ನು ಕೆದಕಿದಾಗಲೂ ‘ತಾವು ಕಳೆದ ಬಾಲ್ಯದ ಕ್ಷಣಗಳೇ ಶ್ರೇಷ್ಠ. ಈಗಿನ ಮಕ್ಕಳಿಗೆ ಆ ಸುಂದರ ಕ್ಷಣಗಳನ್ನು ಅನುಭವಿಸುವ ಭಾಗ್ಯ ಇಲ್ಲ’ ಎಂಬರ್ಥದ ಮಾತುಗಳೇ ಹೊರಬಂದಾವು. ಏಕೆಂದರೆ ಪ್ರತಿಯೊಬ್ಬರಿಗೂ ಬಾಲ್ಯದ ದಿನಗಳೆಂದರೆ ಅದೊಂದು ಮಾಸದ ನೆನಪು. ಅದನ್ನು ಅನುಭವಿಸುವಾಗ ಸಿಗದ ಖುಷಿ, ನೆಮ್ಮದಿ ಅದನ್ನು ನೆನಪಿಸಿಕೊಳ್ಳುವಾಗ ದಕ್ಕಿಬಿಡುತ್ತದೆ.

ಕಲಿಕೆಯ ಸಂದರ್ಭದಲ್ಲಿ ಶಿಕ್ಷಕರಿಂದ ಬೈಸಿಕೊಂಡಾಗ ಆಗುವ ಕಿರಿಕಿರಿ, ಜೊತೆಗಾರನೊಂದಿಗೆ ನಡೆದ ಜಗಳ, ಆಟವಾಡುವ ಸಂದರ್ಭದಲ್ಲಿ ನಡೆದ ಮೋಸದಾಟ ಮೊದಲಾದ ಘಟನೆಗಳೆಲ್ಲವೂ ಕೋಪ ನೆತ್ತಿಗೇರಿಸುವ ಕ್ಷಣಗಳೇ. ಆದರೆ ಜೀವನದ ಹಾದಿಯಲ್ಲಿ ಕ್ಷಣಗಳುರುಳಿ, ದಿನಗಳು ಕಳೆದು, ತಿಂಗಳುಗಳು ಸರಿದು, ವರ್ಷಗಳು ದಾಟಿದಾಗ ಆ ಕೋಪ ತರಿಸಿದ ಕ್ಷಣಗಳೇ ಸಂತಸ ಉಕ್ಕುವಂತೆ ಮಾಡುತ್ತವೆ. ಅದೇ ನೆನಪುಗಳನ್ನು ಮತ್ತೆ ಮತ್ತೆ ಮನದೊಳಗೆ ತಂದುಕೊಂಡಾಗ ಆ ಕ್ಷಣಗಳೆಷ್ಟು ಸುಂದರ ಎಂಬುದನ್ನು ಮನಸ್ಸು ಸಾರಿ ಸಾರಿ ಹೇಳುತ್ತದೆ. ಇದೇ ಕಾರಣಕ್ಕೆ ಬಾಲ್ಯದ ಕಹಿ ನೆನಪುಗಳೂ ಕೂಡಾ ಸಿಹಿಕ್ಷಣಗಳಂತೆ ಭಾಸವಾಗುತ್ತವೆ. ಇಲ್ಲದಿದ್ದರೆ ಹೊಟ್ಟೆಗೆ ಹಿಟ್ಟಿಲ್ಲದ ಆ ದಿನಗಳು ಕೂಡಾ ಅದೇಕೆ ಈಗಲೂ ಸೊಗಸಾಗಿ ಕಾಣುತ್ತವೆ? ಕಾಲಿಗೆ ಚಪ್ಪಲಿ ಇಲ್ಲದೆ ನಡೆದಾಡಿದ ಆ ಕಷ್ಟಕರ ದಿನಗಳೂ ಕೂಡಾ ಈಗೇಕೆ ಮರೆಯಲಾರದ ಸುಂದರ ಕ್ಷಣಗಳಾಗಿ ತೋರುತ್ತವೆ? ಮೈಲುಗಟ್ಟಲೆ ನಡೆದ ಆ ಸುಸ್ತಿನ ದಿನಗಳು ಸಹ ಈಗೇಕೆ ನಮ್ಮ ಮೈಮನಗಳಿಗೆ ಹುರುಪು ತುಂಬುವ ಟಾನಿಕಾಗಿ ಪರಿಣಮಿಸುತ್ತವೆ?

ಜವಾಬ್ದಾರಿ ಇಲ್ಲದ, ಒತ್ತಡಗಳೇ ಎದುರಾಗದ ಜೀವನವೆಂದರೆ ಅದು ಬಾಲ್ಯದ ದಿನಗಳಷ್ಟೇ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುತ್ತೇನೆಂದು ಹಿರಿಯರಿಗೆ ಮಾತು ಕೊಟ್ಟದ್ದನ್ನು ಈಡೇರಿಸುವ ಜವಾಬ್ದಾರಿ ಅಥವಾ ಪರೀಕ್ಷಾ ದಿನಗಳು ಸನಿಹ ಬಂದವೆಂದು ಓದಲೇ ಬೇಕೆಂಬ ಒತ್ತಡ ಇರುತ್ತವೆಯಾದರೂ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಜಾಯಮಾನ ಮಕ್ಕಳದಲ್ಲ. ಹಾಗಾಗಿ ಬಾಲ್ಯದಲ್ಲಿ ಎದುರಾಗುವ ಒತ್ತಡಗಳು ಕ್ಷಣದಲ್ಲಿ ಮಾಯವಾಗುತ್ತವೆ. ಯಾವುದೋ ಕಾರಣಕ್ಕೆ ಅಳುತ್ತಾ ಕೂತ ಮಗುವೊಂದು ಅಪ್ಪ, ಅಮ್ಮನ ಬಣ್ಣದ ಮಾತುಗಳಿಗೆ ಮರುಳಾಗಿ ಮಂದಹಾಸ ಬೀರುತ್ತದೆ. ಇನ್ಯಾವುದೋ ಕಾರಣಕ್ಕೆ ಮನಸ್ಸು ಹಾಳುಮಾಡಿಕೊಂಡ ಮಗುವೊಂದು ತನ್ನದೇ ಪ್ರಾಯದ ಮಗುವೊಂದು ಎದುರಾದಾಗ ಎಲ್ಲಾ ಮರೆತು ಆಟವಾಡಲು ಪ್ರಾರಂಭಿಸುತ್ತದೆ. ಏಕೆಂದರೆ ಸಣ್ಣ ಪ್ರಾಯದಲ್ಲಿ ಒದಗುವ ಕಷ್ಟವಾಗಲೀ, ಒತ್ತಡಗಳಾಗಲೀ ಅಥವಾ ಜವಾಬ್ದಾರಿಗಳಾಗಲೀ ಮನಸ್ಸನ್ನು ತಲ್ಲಣಿಸುವಷ್ಟು ಪ್ರಬಲವಾಗಿರುವುದಿಲ್ಲ.
ಹೀಗಾಗಿ ಬಾಲ್ಯದ ಸಂಕಷ್ಟಗಳು, ನೋವು, ಹತಾಶೆಗಳು ನೀರಿನ ಮೇಲಿನ ಗುಳ್ಳೆಗಳಂತೆ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಬಾಲ್ಯ ದಾಟಿ, ಯೌನಕ್ಕೆ ಕಾಲಿಟ್ಟಾಗ ಮಾತ್ರ ಜವಾಬ್ದಾರಿಗಳು ಹೆಗಲ ಮೇಲೇರುತ್ತವೆ. ಒಂದಿಲ್ಲೊಂದು ಒತ್ತಡಗಳು ಜೀವನದ ಹೆಜ್ಜೆಹೆಜ್ಜೆಗೂ ಬಾಧಿಸುತ್ತವೆ. ಹಾಗಿದ್ದರೂ ಬಾಲ್ಯದ ನೆನಪುಗಳಿಗೆ ಮುದಗೊಳ್ಳದ ಮನಗಳು ಇರಲಾರವು. ಮನಸ್ಸಿನಲ್ಲಿ ಅದೆಷ್ಟೇ ನೋವುಗಳಿದ್ದರೂ ಬಾಲ್ಯದ ಕ್ಷಣಗಳನ್ನು ನೆನಪಿಸಿಕೊಂಡರೆ ಒಂದು ಘಳಿಗೆಯಾದರೂ ಮನಸ್ಸು ಚೇತೋಹಾರಿಯಾಗುತ್ತದೆ. ದುಃಖದ ಸನ್ನಿವೇಶದಲ್ಲೂ ಮನಸ್ಸನ್ನು ಖುಷಿಪಡಿಸುವ ತಾಕತ್ತು ಬಾಲ್ಯದ ನೆನಪುಗಳಿಗೆ ಇದ್ದೇ ಇರುತ್ತವೆ.
ಜೀವನದಲ್ಲಿ ಉನ್ನತ ಸ್ತರ ತಲುಪಿದ ವ್ಯಕ್ತಿಯೂ, ಜೀವನದುದ್ದಕ್ಕೂ ಏಳುಬೀಳುಗಳನ್ನು ಎದುರಿಸಿಯೇ ಮುನ್ನಡೆದ ವ್ಯಕ್ತಿಯೂ ಬಾಲ್ಯ ದಾಟಿಯೇ ಹೋದವರಾಗಿರುತ್ತಾರೆ. ಸಿರಿವಂತನಿಗೂ ಜೀವನದಲ್ಲಿ ಎಲ್ಲವೂ ಸಂತಸಗೊಳ್ಳುವ ಕ್ಷಣಗಳೇ ಎದುರಾಗುವುದಿಲ್ಲ. ಖರ್ಚು ಮಾಡಲು ಹಣವಿದ್ದರೂ, ಕೆಲಸಕ್ಕೆ ಆಳುಗಳೆಷ್ಟೇ ಇದ್ದರೂ ಮನಸ್ಸಿಗೆ ಸದಾ ನೆಮ್ಮದಿ ಇದ್ದೇ ಇರುತ್ತದೆ ಎಂದು ಹೇಳುವ ಹಾಗಿಲ್ಲ. ಯಾವುದೋ ಕಾರಣಕ್ಕೆ ಮನಸ್ಸಿಗೆ ಬೇಸರವಾಗಿದೆ ಎಂದಾದರೆ ಬಾಲ್ಯದ ಸುಂದರ ಕ್ಷಣಗಳನ್ನು ಮತ್ತೊಮ್ಮೆ ಮೆಲುಕು ಹಾಕಿ. ದುಃಖದ ಜಾಗದಲ್ಲಿ ಸಂತಸ ಮನೆಮಾಡುತ್ತದೆ. ಮುದುಡಿದ ಮನಸ್ಸು ಅರಳದಿದ್ದರೆ ಮತ್ತೆ ಹೇಳಿ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು, ಅಂಕಣಕಾರರು)