ಕನಕಮಜಲು: ಕನಕಮಜಲು ಗ್ರಾಮದ ವಿವಿಧ ಭಾಗಗಳಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕನಕಮಜಲು ಗ್ರಾಮದ ಗುಡ್ಡಡ್ಕ ಭಾಗದಲ್ಲಿ ಕಳೆದ ರಾತ್ರಿ ದಾಳಿ ಮಾಡಿದ ಕಾಡಾನೆ ವ್ಯಾಪಕ ಕೃಷಿ ಹಾನಿ ಮಾಡಿದೆ. ಅಡಿಕೆ ಮರ, ಬಾಳೆ, ತೆಂಗು ಮತ್ತಿತರ ಕೃಷಿಗಳನ್ನು ನಾಶಪಡಿಸಿದೆ. ಮನೆಯ ಅಂಗಳಕ್ಕೂ ಆನೆ ದಾಂಗುಡಿಯಿಟ್ಟಿದೆ ಎಂದು

ಕೃಷಿಕರು ಹೇಳುತ್ತಾರೆ. ಗುಡ್ಡಡ್ಕ ಭಾಗದಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದ್ದು ಇತ್ತೀಚಿನ ದಿನಗಳಲ್ಲಿ 4-5 ಬಾರಿ ಕಾಡಾನೆ ದಾಳಿ ಮಾಡಿ ಕೃಷಿ ಹಾನಿ ಮಾಡಿದೆ ಎಂದು ಈ ಭಾಗದ ಕೃಷಿಕರು ಹೇಳಿದ್ದಾರೆ.
ಕನಕಮಜಲು, ಜಾಲ್ಸೂರು ಭಾಗದಲ್ಲಿ ಕೆಲವು ಸಮಯದಿಂದ ಕಾಡಾನೆ ಹಾವಳಿ ತೀವ್ರಗೊಂಡಿದೆ ಕನಕಮಜಲು ಗ್ರಾಮದ ಗುಡ್ಡಡ್ಕ, ಕಜೆಗದ್ದೆ ಮತ್ತಿತರ ಭಾಗಗಳಲ್ಲಿ, ಸಮೀಪದ ಪೆರ್ನಾಜೆ ಭಾಗದಲ್ಲಿ, ಜಾಲ್ಸೂರು ಗ್ರಾಮದ ಕೆಮನಬಳ್ಳಿ ಮತ್ತಿತರ ಕಡೆಗಳಲ್ಲಿ ಕಾಡಾನೆ ಹಾವಳಿ ಅಧಿಕವಾಗಿದ್ದು ಕೃಷಿಕರು ರೋಸಿ ಹೋಗಿದ್ದಾರೆ. ಕಾಡಾನೆ ಹಾವಳಿ ತಡೆಯಲು ಅರಣ್ಯ ಇಲಾಖೆ, ಸರಕಾರ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ.
