*ಗಣೇಶ್ ಮಾವಂಜಿ.
ಮನೆಯಲ್ಲಿ ಕುಳಿತಲ್ಲಿಗೇ ಊಟ, ತಿಂಡಿಗಾಗಿ ಅಮ್ಮನಿಗೆ ಆರ್ಡರ್ ಮಾಡಿಸಿ ಗಡದ್ದಾಗಿ ತಿಂದು, ಮನಸ್ಸಾದರೆ ಮಾತ್ರ ತಿಂದ ಬಟ್ಟಲನ್ನು ತೊಳೆದಿಡುತ್ತಿದ್ದ ಮಗ ಮೊನ್ನೆ ಸೂಟ್ ಕೇಸ್ ತುಂಬಿ ಹಾಸ್ಟೆಲ್ ಗೆ ಹೊರಟು ನಿಂತಾಗ ಮನಸ್ಸು ಭಾರವಾಗಿತ್ತು. ಶಾಲೆಯಲ್ಲಿ ಆಟವಾಡಿ ದಿರಿಸು ತುಂಬಾ ಮಣ್ಣು ಮೆತ್ತಿಕೊಂಡು ಅಮ್ಮನಲ್ಲಿ ಒಗೆಯಲು ಕೊಡುತ್ತಿದ್ದ ಮಗ, ಇನ್ನು ತಾನೇ ತನ್ನ ಬಟ್ಟೆಬರೆಗಳನ್ನು ಒಗೆದು ಶುಚಿಗೊಳಿಸಿಸಬೇಕಲ್ಲವೇ.? ಇದು ಸಾಧ್ಯವಾ? ಎಂದು
ಮನಸ್ಸು ನನ್ನನ್ನೇ ಪ್ರಶ್ನಿಸುತ್ತಿತ್ತು. ಮನೆಯ ಬಚ್ಚಲು ಮನೆ, ಶೌಚಾಲಯ ಗಲೀಜಾಗಿದ್ದರೆ ಉಪಯೋಗಿಸಲು ಸುತರಾಂ ಒಪ್ಪದ ಇವನು ತಾನೇ ಶುಚಿಗೊಳಿಸಿ ಹಾಸ್ಟೆಲ್ ನಲ್ಲಿ ಹೇಗೆ ತಾನೇ ದಿನ ಕಳೆದಾನು ಎಂಬ ಆತಂಕ ಮನಸ್ಸಲ್ಲಿ ಇದ್ದೇ ಇತ್ತು. ಹಾಗಿದ್ದರೂ ಮಗ ಹೊರಟು ನಿಂತಾಗ ಮುಖದಲ್ಲಿ ಬೇಸರವನ್ನಾಗಲೀ, ಆತಂಕವನ್ನಾಗಲೀ ತೋರ್ಪಡಿಸದೆ ಸಾಧ್ಯವಾದಷ್ಟೂ ಗೆಲುವಾಗಿರಲು ಪ್ರಯತ್ನಿಸಿದೆ.
ಹಾಸ್ಟೆಲ್ಗೆ ಹೋಗಿ ದಿನ ಕಳೆಯುವ ಧಾವಂತಕ್ಕಿಂತಲೂ ಮಿಗಿಲಾಗಿ ಅಕ್ಕನ ಹಾಗೆಯೇ ನನಗಿನ್ನು ಹಾಸ್ಟೆಲ್ ಜೀವನ ಎಂಬ ಖುಷಿಯೇ ಆತನಲ್ಲಿ ಹೆಚ್ಚಾಗಿತ್ತು. ಒಂದೆರಡು ವಾರಕ್ಕಿಂತ ಮೊದಲು ಮಗಳು ಕೂಡಾ ಹಾಸ್ಟೆಲ್ ಗೆ ಹೋದಾಗ ಅವಳಿಗೆ ಬೇಕಾದ ಬಟ್ಟೆಬರೆ, ಸೋಪು, ಪೇಸ್ಟ್, ಪೌಡರ್, ಸ್ನೋ, ಜೊತೆಗೆ ಬೋರ್ ಆದಾಗ ಓದಲು ಒಂದಷ್ಟು ಪುಸ್ತಕಗಳು, ಹೊಟ್ಟೆ ಚುರುಗುಟ್ಟಿದಾಗ ಮೆಲ್ಲಲು ಇರಲೆಂದು ಮಿಕ್ಸರ್, ಚಾಕಲೇಟ್ ಮೊದಲಾದವುಗಳನ್ನು ಪ್ಯಾಕ್ ಮಾಡಿ ಬ್ಯಾಗ್ ನಲ್ಲಿ ತುಂಬಿಸಿ ಕಳುಹಿಸಿದ್ದನ್ನು ಮಗ ನೋಡಿದ್ದ. ತಾನೂ ಹಾಸ್ಟೆಲ್ ಗೆ ಹೋದರೆ ತನಗೂ ಹೀಗೆಯೇ ಬ್ಯಾಗ್ ತುಂಬಿಸಿ ಕಳುಹಿಸುತ್ತಾರೆ ಎಂದು ಆಸೆ ಪಟ್ಟಿದ್ದ ಮಗ ಮೂರನೇ, ನಾಲ್ಕನೇ ಕ್ಲಾಸಿನಲ್ಲಿದ್ದಾಗಲೇ ತಾನೂ ಹಾಸ್ಟೆಲ್ ಗೆ ಹೋಗುತ್ತೇನೆ ಎಂದು ಕನಸು ಕಂಡಿದ್ದ. ಅದಕ್ಕಾಗಿಯೇ ಸರಕಾರಿ ವಸತಿ ಶಾಲಾ ಶಿಕ್ಷಣಕ್ಕಾಗಿ ಗೊತ್ತುಪಡಿಸಿದ ಪರೀಕ್ಷೆಯನ್ನು ತನ್ನಿಚ್ಚೆಯಂತೆಯೇ ಬರೆದು ಪಾಸಾಗಿ ಹಾಸ್ಟೆಲ್ ಗೆ ಆಯ್ಕೆಗೊಂಡಿದ್ದ.

ಮೊನ್ನೆ ಹಾಸ್ಟೆಲ್ ಗೆಂದು ಹೊರಟಾಗ ಅಕ್ಕ ತನ್ನ ಬ್ಯಾಗ್ ನಲ್ಲಿ ತುಂಬಿಸಿದ ವಸ್ತುಗಳನ್ನು ನೆನಪಿಸಿಕೊಂಡು ಅಕ್ಕನಿಗೆ ತೆಗೆದುಕೊಟ್ಟ ವಸ್ತುಗಳೆಲ್ಲವೂ ತನಗೂ ಬೇಕೆಂದು ಹಟಹಿಡಿದು ತನ್ನ ಕೈಯಾರೆ ಲಿಸ್ಟ್ ಮಾಡಿ ಇವೆಲ್ಲವೂ ಬೇಕೆಂದು ನನ್ನ ಕೈಗಿತ್ತಿದ್ದ. ಅಗತ್ಯವಿಲ್ಲದಿದ್ದರೂ ಮಗನನ್ನು ಬೇಸರಪಡಿಸುವ ಇಚ್ಚೆಯಾಗದೆ ಆತ ಅಪೇಕ್ಷಿಸಿದ ವಸ್ತುಗಳೆಲ್ಲವನ್ನೂ ತೆಗೆದುಕೊಟ್ಟೆ.ಮಗ ಹಾಸ್ಟೆಲ್ಗೆ ಹೋಗುವುದು ಪಕ್ಕಾ ಎಂದಾದಾಗ ಅಲ್ಲಿ ಹೇಗಿರಬೇಕು., ಬೇರೆ ಹಿರಿಯ ಮಕ್ಕಳ ಜೊತೆ ಹೇಗೆ ಹೊಂದಾಣಿಕೆಯಿಂದಿರಬೇಕು., ಬೇಸರವಾದಾಗ ಏನು ಮಾಡಬೇಕು., ತೀರಾ ಸಂತೋಷವಾದಾಗ ಹಿಗ್ಗುವ ಮನಸ್ಸನ್ನು ಯಾವ ರೀತಿ ಹತೋಟಿಗೆ ತಂದುಕೊಳ್ಳಬೇಕೆಂಬ ಟಿಪ್ಸ್ ಗಳೆಲ್ಲವನ್ನೂ ಹೇಳಿಕೊಡುತ್ತಿದ್ದೆ. ಬೇಸರವಾದಾಗ ಅಥವಾ ಸಂತೋಷವಾದಾಗ ‘ಈ ಕ್ಷಣ ಹೆಚ್ಚು ಸಮಯ ಇರಲಾರದು’ ಎಂಬ ಸತ್ಯವನ್ನು ಸದಾ ನೆನಪಿನಲ್ಲಿಟ್ಟುಕೊಂಡು ಮುಂದುವರಿಯಬೇಕು ಎಂಬುದನ್ನು ತಿಳಿಸಿದ್ದೆ. ಅದಕ್ಕಿಂತಲೂ ಹೆಚ್ಚಾಗಿ ‘ನಿನ್ನನ್ನು ಹಾಸ್ಟೆಲ್ ನಲ್ಲಿ ಬಿಟ್ಟು ಬಂದಾಗ ನಾವು ಅತ್ತರೂ ನೀನು ಅಳದೆ ನಮ್ಮನ್ನು ಸಮಾಧಾನಗೊಳಿಸಬೇಕು’ ಎಂದು ಉಪದೇಶ ಮಾಡಿದ್ದೆ. ಇದರ ಪ್ರಥಮ ಪ್ರಯೋಗವನ್ನು ಅಳಲು ರೆಡಿಯಾಗಿದ್ದ ಅಮ್ಮನ ಮೇಲೆ ಪ್ರಯೋಗಿಸಿ ಭೇಷ್ ಎನಿಸಿಕೊಂಡ.

ಅಂತೂ ಹೊಟ್ಟೆ ಉಬ್ಬರಿಸಿದಂತಿದ್ದ ಸೂಟ್ ಕೇಸ್ ನ ಜೊತೆಗೆ ಮತ್ತೆರಡು ಬ್ಯಾಗ್ ಗಳ ಜಿಬ್ ಹಾಕಲು ಸಾಧ್ಯವಾಗದಷ್ಟು ವಸ್ತುಗಳನ್ನು ತುಂಬಿಸಿ ಹಾಸ್ಟೆಲ್ ನ ಗೇಟ್ ದಾಟಿ ಅವನಿಗಾಗಿ ಕೊಟ್ಟ ಟ್ರಂಕ್ ನಲ್ಲಿ ಕೊಂಡು ಹೋದ ವಸ್ತುಗಳೆಲ್ಲವನ್ನೂ ತುಂಬಿಸಿ ಟಾಟಾ ಮಾಡಿ ಹೊರಬಂದಾಗ ಹಸುವಿನ ಕೆಚ್ಚಲಿಗೆ ಬಾಯಿ ಹಾಕಿ ನೊರೆಹಾಲನ್ನು ಹೀರುತ್ತಿದ್ದ ಕರುವನ್ನು ಕನಿಕರವೇ ಇಲ್ಲದಂತೆ ಎಳೆದೊಯ್ದು ಬೇರೆಡೆ ಕಟ್ಟಿದಷ್ಟು ಬೇಸರವಾಯ್ತು.
ಈ ವೇಳೆ ನಮ್ಮಂತೆಯೇ ತಮ್ಮ ಮಕ್ಕಳನ್ನು ಹಾಸ್ಟೆಲ್ನಲ್ಲಿ ಬಿಟ್ಟು ಬರುವ ಪೋಷಕರನ್ನು ನೋಡುವ ಅವಕಾಶವೂ ದೊರೆಯಿತು. ಕೆಲ ಪೋಷಕರು ಮಕ್ಕಳನ್ನು ಬಿಟ್ಟು ಬರುವ ವೇಳೆ ಉಪದೇಶಿಸುವ ಉಪದೇಶಗಳು ಮಹಾಭಾರತ ಯುದ್ಧದ ಸಂದರ್ಭದಲ್ಲಿ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ನೀಡುವ ಉಪದೇಶವನ್ನೂ ಮೀರಿಸುವಂತಿತ್ತು.
ಹಾಸ್ಟೆಲ್ ಗೆಂದು ವೀರಾವೇಶದಲ್ಲಿ ಹೊರಟು ಹಾಸ್ಟೆಲ್ ಸೇರಿದಾಗ ಯುದ್ಧಕ್ಕೆ ಬೆದರಿ ರಣರಂಗದಿಂದ ಓಡಿದ ಉತ್ತರ ಕುಮಾರನನ್ನು ನೆನಪಿಸಿದ ವಿದ್ಯಾರ್ಥಿಗಳೂ ಅಲ್ಲಿದ್ದರು. ಸದಾ ಅಪ್ಪ ಅಮ್ಮನ ಬಾಲವಾಗಿರುತ್ತಿದ್ದ ಮಕ್ಕಳು ಏಕಾಏಕಿ ಮನೆಬಿಟ್ಟು ಹಾಸ್ಟೆಲ್ ಸೇರಿದಾಗ ಅಲ್ಲಿನ ಕಟ್ಟುನಿಟ್ಟಿನ ಜೀವನಕ್ಕೆ ಹೊಂದಿಕೊಳ್ಳುವುದು ಅನಿವಾರ್ಯ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ಹೊರಗೆ ಕಳುಹಿಸುವ ಎಲ್ಲಾ ಪೋಷಕರ ಕರುಳ ಕೂಗು ಕೂಡಾ ‘ಮಕ್ಕಳು ಅಲ್ಲಿ ಚೆನ್ನಾಗಿದ್ದರೆ ಸಾಕಪ್ಪಾ’ ಎಂಬುದಷ್ಟೇ ಆಗಿರುತ್ತದೆ. ಮನೆಯಲ್ಲಾದರೆ ಮುದ್ದು ಮಾಡಿ

ಹೊಟ್ಟೆತುಂಬಿಸುವವರಿರುತ್ತಾರೆ. ಹೊಟ್ಟೆ ಚುರುಗುಟ್ಟಿದಾಗ ಏನನ್ನಾದರೂ ಬಾಯಿಗಿಟ್ಟು ಹಸಿವು ನೀಗಿಸಿಕೊಳ್ಳಬಹುದು. ಬೇಗ ನಿದ್ದೆ ಬಂದರೆ ಅಲ್ಲೇ ಒರಗಿ ನಿದ್ರಾ ಲೋಕಕ್ಕೆ ಜಾರಿಬಿಡಬಹುದು. ಏಕೆಂದರೆ ಅಪ್ಪ, ಅಮ್ಮನೇ ಎತ್ತಿಕೊಂಡು ಹೋಗಿ ಹೊದ್ದು ಮಲಗಿಸುತ್ತಾರೆ ಎಂಬುದು ಗ್ಯಾರಂಟಿ ಇರುತ್ತದೆ ಮಕ್ಕಳಿಗೆ. ಬೆಳಗ್ಗೆಯೂ ‘ಏಳು ಹೊತ್ತಾಯ್ತು’ ಎಂಬ ಅಮ್ಮನ ಸುಪ್ರಭಾತ ಹಲವು ಬಾರಿ ಮೊಳಗಿದರೂ ಒಂದಷ್ಟು ಹೊತ್ತು ಮತ್ತೂ ಸುರುಟಿ ಮಲಗಿಬಿಡಬಹುದು. ಆದರೆ ಹಾಸ್ಟೆಲ್ ಎಂದಾಗ ನಿಗದಿತ ಸಮಯದವರೆಗೆ ನಿದ್ರಿಸದೆ ಓದಬೇಕಾಗುತ್ತದೆ. ಬೆಳಿಗ್ಗೆಯೂ ಬಿಸಿಲು ಬರುವವರೆಗೆ ಮಲಗದೆ ಮುಂಜಾನೆಯೇ ಏಳಬೇಕಾಗುತ್ತದೆ.
ಸಮಯದ ಪರಿವೆಯೇ ಇಲ್ಲದೆ ಮನಬಂದ ಹಾಗೆ ಇದ್ದ ಮಕ್ಕಳು ಹಾಸ್ಟೆಲ್ ಸೇರಿದಾಗ ಅರ್ಥಾತ್ ಬೆಚ್ಚಗಿನ ಗೂಡಿನಿಂದ ದೂಡಿಬಿಟ್ಟ ಮರಿ ಹಕ್ಕಿಗಳ ಹಾಗೆ ಆಗಿ ಬಿಡುತ್ತಾರೆ. ಒಂದಷ್ಟು ದಿನಗಳು ಕಳೆದ ಬಳಿಕವಷ್ಟೇ ಮಕ್ಕಳು ಹಾಸ್ಟೆಲ್ ಜೀವನಕ್ಕೆ ಒಗ್ಗಿಕೊಳ್ಳುತ್ತಾರೆ. ಈ ನಡುವೆ ಮನೆಯವರ ಜೊತೆ ಮಾತನಾಡಲೆಂದು ಫೋನ್ ಕೊಟ್ಟಾಗ ಅತ್ತು ರಂಪಾಟ ಮಾಡಿ ನನ್ನನ್ನು ಈಗಲೇ ಕಳೆದುಕೊಂಡು ಹೋಗಿ ಎಂದು ಗೋಗರೆಯುವವರೂ ಇಲ್ಲದಿಲ್ಲ. ಸಹನೆಯಿಂದ ಮಕ್ಕಳನ್ನು ಸಂತೈಸಲು ಹೆತ್ತವರು ಸಫಲರಾದರೆ ಮಕ್ಕಳು ಹಾಸ್ಟೆಲ್ ನಲ್ಲೇ ಉಳಿದುಕೊಳ್ಳುತ್ತಾರೆ. ಮಕ್ಕಳ ಕಣ್ಣೀರಿಗೆ ಹೆತ್ತವರೂ ಕರಗಿದರೆ ಮಕ್ಕಳ ಹಾಸ್ಟೆಲ್ ಜೀವನ ಒಂದಷ್ಟು ದಿನಗಳಿಗಷ್ಟೇ ಸೀಮಿತವಾಗುತ್ತದೆ.
ಐದನೇ ತರಗತಿ ಪಾಸಾಗಿ ಆರನೇ ಕ್ಲಾಸಿಗೆ ಅಡಿ ಇಡುವ ಮಕ್ಕಳಿಗೆ ವಯಸ್ಸು ಕೇವಲ ಹತ್ತು ದಾಟಿರುತ್ತದಷ್ಟೇ. ಮನೆಯಿಂದಲೇ ಶಾಲೆಗೆ ಹೋಗುವುದಿದ್ದರೆ ಅವರ ಪ್ರತಿಯೊಂದು ಕೆಲಸಗಳನ್ನು ಹೆತ್ತವರೇ ಮಾಡಬೇಕಾಗುತ್ತದೆ. ಶಾಲೆಯಲ್ಲಿ ಕೊಡುವ ಹೋಂ ವರ್ಕ್ ಗಳನ್ನು ಕಾಟಾಚಾರಕ್ಕಾಗಿ ಮಾಡಿ ಮುಗಿಸಿ ಬ್ಯಾಗ್ ಬಿಸುಟರೆ ಮತ್ತೆ ನಾಳೆ ಬೆಳಿಗ್ಗೆ ಬ್ಯಾಗ್ ಹೆಗಲೇರಿಸುವವರೂ ಕೂಡಾ ಮಕ್ಕಳ ಹೆತ್ತವರೇ ಆಗಿರುತ್ತಾರೆ. ಈ ನಡುವೆ ಸದಾ ಮೊಬೈಲ್ ಒತ್ತಲು ತವಕಿಸುವ ಮಕ್ಕಳನ್ನು ಹತೋಟಿಗೆ ತರಬೇಕಾದರೆ ಪೋಷಕರು ಹರಸಾಹಸ ಪಡಬೇಕಾಗುತ್ತದೆ. ಆದರೆ ಹಾಸ್ಟೆಲ್ ಗೆ ಹೋದರೆ ತಮ್ಮ ಕೆಲಸಗಳನ್ನು ಇನ್ನೊಬ್ಬರ ಮೇಲೆ ಹೇರಲಾಗುವುದಿಲ್ಲ. ಮನೆಯಲ್ಲಿ ಚಿಕ್ಕ ಕೆಲಸಕ್ಕೂ ಪರಾವಲಂಬಿಗಳಾಗುತ್ತಿದ್ದ ಮಕ್ಕಳು ತಮ್ಮ ಬಟ್ಟೆಗಳನ್ನು ತಾವೇ ಒಗೆದು ಸ್ವಾವಲಂಬಿಗಳಾಗುತ್ತಾರೆ.

ಎರಡ್ಮೂರು ದಶಕಗಳ ಹಿಂದಿನ ಸರಕಾರಿ ಹಾಸ್ಟೆಲ್ ಗೂ ಈಗಿನ ಸರಕಾರಿ ಹಾಸ್ಟೆಲ್ ಗೂ ಅಜಗಜಾಂತರವಿದೆ. ಹಾಸ್ಟೆಲ್ ಗಳಲ್ಲಿ ಆಗ ಈಗಿನಂತೆ ಬಗೆಬಗೆಯ ಬೆಳಗ್ಗಿನ ಉಪಹಾರವಿರಲಿಲ್ಲ. ಪ್ರತೀ ದಿನ ಬೆಳಿಗ್ಗೆ ಗಂಜಿಯ ಜೊತೆಗೆ ಹುರುಳಿ ಚಟ್ನಿ ಅಥವಾ ಕಡ್ಲೆ ಚಟ್ನಿ ಇದ್ದರೆ ಅದೇ ಹೆಚ್ಚು. ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಅನ್ನ, ಸಾಂಬಾರು ಮಾತ್ರ. ಈಗಿನಂತೆ ಮೊಟ್ಟೆ, ಕೋಳಿ, ಬಾಳೆಹಣ್ಣು, ಪಾಯಸ ನೀಡುವ ಮಾತೇ ಇರಲಿಲ್ಲ. ಸ್ನಾನ ಮಾಡಲು ಈಗಿನಂತೆ ಬಿಸಿನೀರು ಇರಲಿಲ್ಲ. ಅಷ್ಟೇ ಏಕೆ?..ಸರಿಯಾಗಿ ನೀರು ಸರಬರಾಜು ಕೂಡಾ ಆಗದೆ ಹಾಸ್ಟೆಲ್ ಮಕ್ಕಳು ಕಷ್ಟ ಪಡಬೇಕಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಜನರ ಜೀವನ ಮಟ್ಟ ಸುಧಾರಣೆ ಕಂಡಂತೆ ಸರಕಾರಿ ವ್ಯವಸ್ಥೆಗಳಲ್ಲೂ ಅಮೂಲಾಗ್ರ ಬದಲಾವಣೆಗಳಾಗಿವೆ.
ಹಾಗೆಂದು ಹಾಸ್ಟೆಲ್ ಗೆ ಹೋದ ಎಲ್ಲಾ ಮಕ್ಕಳೂ ಎಲ್ಲಾ ರೀತಿಯಲ್ಲೂ ಮೇಲುಗೈ ಸಾಧಿಸುತ್ತಾರೆ ಎಂದಲ್ಲ. ಅಲ್ಲಿ ಸ್ವಾವಲಂಬನೆಗೆ ಅವಕಾಶಗಳು ಅಧಿಕ ಎಂದಷ್ಟೇ ಹೇಳಬಹುದು. ಏಕೆಂದರೆ ಬಟ್ಟೆ ಒಗೆಯಲು ಉದಾಸೀನ ತೋರಿ ಕೊಳಕು ಬಟ್ಟೆಗಳಲ್ಲೇ ದಿನ ದೂಡುವ ಮಕ್ಕಳೂ ಇರುತ್ತಾರೆ. ಸ್ನಾನದ ಶಾಸ್ತ್ರವಷ್ಟೇ ಮಾಡಿ ಬಾತ್ ರೂಂ ನಿಂದ ಹೊರಬರುವವರೂ ಇರುತ್ತಾರೆ. ಚಿಕ್ಕ ಮಕ್ಕಳ ಜೊತೆ ಕೆಲಸ ಮಾಡಿಸಿ ಮೆರೆದಾಡುವ ದೊಡ್ಡ ಮಕ್ಕಳೂ ಇರುತ್ತಾರೆ. ತಮ್ಮ ತಾಳಕ್ಕೆ ತಕ್ಕಂತೆ ಕುಣಿಯದ ಮಕ್ಕಳನ್ನು ಬೆದರಿಸಿ ಚಂದ ನೋಡುವ ಪೋಕ್ರಿ ಮಕ್ಕಳೂ ಅಲ್ಲಿರುತ್ತಾರೆ. ಸದಾ ಮಕ್ಕಳ ಮೇಲೆ ಕಣ್ಣಿರಿಸಿ ಮಕ್ಕಳನ್ನು ಸರಿ ದಾರಿಯಲ್ಲೇ ಸಾಗುವಂತೆ ಮಾಡುವ ವಾರ್ಡನ್, ಶಿಕ್ಷಕರು ಅಲ್ಲಿದ್ದರೆ ಹಾಸ್ಟೆಲ್ ಮಕ್ಕಳ ಬದುಕು ಬಂಗಾರವಾಗುವುದರಲ್ಲಿ ಸಂಶಯವಿಲ್ಲ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು)