*ಗಣೇಶ್ ಮಾವಂಜಿ.
‘ ಹೇ ನಿನಗೆ ವಿಷಯ ಗೊತ್ತುಂಟಾ? ನನ್ನ ಅಮ್ಮನ ಅಣ್ಣನ ಮಗಳ ಮಗ ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದಾನೆ. ಹಾಗೆ ಮೊನ್ನೆ ಅವರಲ್ಲಿ ಗಮ್ಮತ್ ಮಾಡಿದ್ರು. ನಾವೆಲ್ಲಾ ಹೋಗಿ ತುಂಬಾ ಎಂಜಾಯ್ ಮಾಡಿ ಬಂದದ್ದು’ ಪಕ್ಕದ ಮನೆಯ ಮಹಿಳೆ ತನ್ನ ಗೆಳತಿಯೊಂದಿಗೆ ವಿಷಯ ಹಂಚಿಕೊಳ್ತಾಳೆ.
‘ಹೌದಾ? ಈಗ ಐಎಎಸ್ ಪರೀಕ್ಷೆ ಪಾಸ್ ಮಾಡುವುದೆಂದರೆ ತುಂಬಾ ಕಷ್ಟ. ಅಂತದರಲ್ಲಿ ನಿಮ್ಮ ಸಂಬಂಧಿ ಹುಡುಗ ಒಂದೇ ಪ್ರಯತ್ನದಲ್ಲಿ ಪಾಸ್ ಮಾಡುವುದೆಂದರೆ ಎಂತಹ ಅದೃಷ್ಟ ಅಲ್ವಾ?’ ವಿಷಯ ಕೇಳಿಸಿಕೊಂಡ ಮಹಿಳೆ ತನ್ನ ಅಭಿಪ್ರಾಯ ಮಂಡಿಸುತ್ತಾಳೆ. ಅಲ್ಲದೆ ತನ್ನ ಸಂಬಂಧಿ ಹುಡುಗಿಯೊಬ್ಬಳು ಪಿಯುಸಿ ಯಲ್ಲಿ 98 ಪರ್ಸೆಂಟ್ ಮಾರ್ಕ್ಸ್ ಪಡೆದ
ಬಗ್ಗೆಯೂ ತಿಳಿಸಿ ತನ್ನ ಸಂಬಂಧಿಕರೂ ಏನೂ ಕಡಿಮೆ ಇಲ್ಲ ಎಂಬುದನ್ನು ಬಿಚ್ಚಿಡುತ್ತಾಳೆ.
ಈ ವಿಷಯ ಇಲ್ಲಿಗೇ ಮುಗಿದರೆ ಉತ್ತಮ. ಅಥವಾ ಐಎಎಸ್ ಪರೀಕ್ಷೆಯನ್ನು ಒಂದೇ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ ಹುಡುಗನನ್ನು ಆದರ್ಶವಾಗಿ ಇಟ್ಟುಕೊಂಡು ತನ್ನ ಮಕ್ಕಳೂ ಅದೇ ಹಾದಿಯಲ್ಲಿ ಸಾಗುವಂತೆ ಮಾಡಿದರೆ ಅತ್ಯುತ್ತಮ. ಅಲ್ಲದೆ ಪಿಯುಸಿಯಲ್ಲಿ 98 ಪರ್ಸೆಂಟ್ ಮಾರ್ಕ್ಸ್ ಪಡೆದ ಹುಡುಗಿಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅವಳಂತೆ ತನ್ನ ಮಕ್ಕಳೂ ಸಾಧಿಸಲೆಂದು ಆಶಿಸುವುದರಲ್ಲೂ ತಪ್ಪಿಲ್ಲ.
ಆದರೆ ವಿಷಯ ತಿಳಿಸಿದ ಅದೇ ಮಹಿಳೆ ಐಎಎಸ್ ಪರೀಕ್ಷೆ ಪಾಸ್ ಮಾಡಿದ ಹುಡುಗನ ಬಗ್ಗೆ ತನ್ನ ಕೆಲಸ ಬಿಟ್ಟು ಪ್ರತಿ ದಿನ ಎಲ್ಲರಲ್ಲೂ ತಿಳಿಸುತ್ತಾ ಆತನ ಬಗ್ಗೆಯೇ ಗುಣಗಾನ ಮಾಡುತ್ತಾ ಇನ್ನೊಬ್ಬರ ಪ್ರತಿಕ್ರಿಯೆಗಾಗಿ ಕಾಲಹರಣ ಮಾಡುವುದು ಮಾತ್ರ ಸರಿಯಲ್ಲ. ಪಿಯುಸಿಯಲ್ಲಿ 98 ಪರ್ಸೆಂಟ್ ಮಾರ್ಕ್ಸ್ ಪಡೆದ ಹುಡುಗಿಯ ಬಗ್ಗೆಯೇ ತಿಳಿಸುತ್ತಾ ತನ್ನ ಮಕ್ಕಳ ಓದಿನತ್ತ ಕಿಂಚಿತ್ತೂ ತಲೆಬಿಸಿ ಮಾಡದೆ ಹೋದರೆ ಕೊನೆಗೆ ಮನೆಯ ಮಕ್ಕಳ ಪರಿಸ್ಥಿತಿ ಅಧೋಗತಿಗೆ ಇಳಿಯುವುದು ಖಂಡಿತಾ.
ಮೊನ್ನೆ ಐಪಿಎಲ್ ಪಂದ್ಯಾಟದಲ್ಲಿ ಕಪ್ ಗೆದ್ದ ಆರ್ಸಿಬಿ ತಂಡವನ್ನು ಹುರಿದುಂಬಿಸಲೆಂದು ಬೆಂಗಳೂರಿನಲ್ಲಿ ವಿಜಯೋತ್ಸವ ಆಯೋಜನೆಗೊಂಡಾಗ ಹನ್ನೊಂದು ಜನರು ಬಲಿಯಾದ ಘಟನೆ ನೋಡಿದಾಗ ಇವೆಲ್ಲವೂ ನೆನಪಿಗೆ ಬರುತ್ತದೆ. ಅಭಿಮಾನಿಗಳ ಅಭಿಮಾನವನ್ನು ಒಂದು ಹಂತದವರೆಗೆ ಒಪ್ಪಿಕೊಳ್ಳಬಹುದು.ಆದರೆ ಹಂತ ಮೀರಿ ತೋರ್ಪಡಿಸುವ ಅಭಿಮಾನ ಯಾರಿಗೂ ಒಳಿತಲ್ಲ. ಬೆಂಗಳೂರು ಮಾತ್ರವಲ್ಲ. ರಾಜ್ಯದ ಹಳ್ಳಿಗಳ ಮೂಲೆಮೂಲೆಯಲ್ಲೂ ಆರ್ಸಿಬಿ ತಂಡಕ್ಕೆ ಅಭಿಮಾನಿಗಳಿದ್ದು ಮೊನ್ನೆ ತಂಡ ಗೆದ್ದಾಗ ಸಂಭ್ರಮಿಸಿದ್ದಾರೆ. ಟಿವಿಯ ಮುಂದೆ ಕುಳಿತು ಹರ್ಷ ವ್ಯಕ್ತಪಡಿಸಿದ್ದಾರೆ. ಕೆಲ ಯುವಕರ ತಂಡ ಬಾಟಲಿ ಖಾಲಿ ಮಾಡಿ ಖುಷಿಪಟ್ಟಿದ್ದಾರೆ. ಯುವಕರು ಮಾತ್ರವಲ್ಲ, ಯುವತಿಯರೂ
ಕೂಡಾ ತಾವೇನೂ ಕಡಿಮೆ ಇಲ್ಲ ಎಂಬಂತೆ ತಮ್ಮದೇ ಲೋಕದಲ್ಲಿ ವಿಹರಿಸಿ ಗೆದ್ದ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಬದುಕಿನ ಬಗ್ಗೆ ನಿಜವಾದ ಜ್ಞಾನ ಉಳ್ಳವರು ತಂಡ ಗೆದ್ದಿದೆ ಎಂದು ಗೊತ್ತಾದ ಕೂಡಲೇ ತಮ್ಮತಮ್ಮೊಳಗೆ ಒಂದಷ್ಟು ಹೊತ್ತು ತಂಡದ ಆಟಗಾರರ ನಿರ್ವಹಣೆಯ ಬಗ್ಗೆ ಕೊಂಡಾಡಿ ಬಳಿಕ ಟಿವಿ ಆಫ್ ಮಾಡಿ ನಿದ್ದೆಗೆ ಜಾರಿದ್ದಾರೆ. ಮರುದಿನ ಎಂದಿನಂತೆ ಎದ್ದು ತಮ್ಮ ನಿತ್ಯದ ದಿನಚರಿಯಲ್ಲಿ ತೊಡಗಿದ್ದಾರೆ.
ಆದರೆ ತಂಡದ ಬಗ್ಗೆ ಅತಿರೇಕದ ಅಭಿಮಾನ ವ್ಯಕ್ತಪಡಿಸಿ ಬಾಟಲಿ ಖಾಲಿ ಮಾಡಿದ ಕೆಲ ಉದ್ಯೋಗಸ್ಥ ಯುವಕರು ಮರುದಿನ ಕೆಲಸಕ್ಕೆ ಹೋಗಿಲ್ಲ. ಹಳ್ಳಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಂದಿಯೂ ಇದಕ್ಕೆ ಹೊರತಾಗಿಲ್ಲ. ಕುರುಡು ಅಭಿಮಾನದಿಂದ ರಾತ್ರಿಯಿಡೀ ವಿಜಯೋತ್ಸವ ಆಚರಣೆ ಮಾಡಿ ಮರುದಿನ ಕೆಲಸಕ್ಕೆ ಹಾಜರಾಗದೆ ತಮ್ಮ ಒಂದು ದಿನದ ದುಡಿಮೆಯ ಹಣಕ್ಕೆ ಸಂಚಕಾರ ತಂದೊಡ್ಡಿಕೊಂಡಿದ್ದಾರೆ.
ಆದರೆ ಬೆಂಗಳೂರಿನಲ್ಲಿ ವಿಜಯೋತ್ಸವದ ವೇಳೆ ನಡೆದ ಘಟನೆ ಇದಕ್ಕಿಂತಲೂ ಭಿನ್ನವಾದುದು. ನೆಚ್ಚಿನ ತಂಡ ಗೆದ್ದಿದೆ ಎಂಬುದರ ಖುಷಿಯ ಆಚರಣೆ ಮತ್ತೊಂದು ದಿನಕ್ಕೆ ವಿಸ್ತರಣೆಗೊಂಡಿದೆ. ಗೆದ್ದ ಮರುಕ್ಷಣದಲ್ಲಿ ಗಲ್ಲಿಗಲ್ಲಿಗಳಲ್ಲಿ ‘ಆರ್ಸಿಬಿ’ ಎಂದು ಅರಚುತ್ತಾ ಟ್ರಾಫಿಕ್ ಜಾಮ್ ಮಾಡಿಸಿದ್ದು ಮಾತ್ರವಲ್ಲದೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಮಂದಿಯನ್ನು ಸುತ್ತಿಬಳಸಿ ಹೋಗುವಂತೆ ಮಾಡಿದ್ದಾರೆ. ನಂತರ ಮರುದಿನದ ವಿಜಯೋತ್ಸವದ ವೇಳೆಯೂ ಕುರುಡು ಅಭಿಮಾನದಿಂದ ಒಂದೆಡೆ ಜಮಾಯಿಸಿ ಯಾರದೋ ಜೀವಬಲಿಗೆ ಪರೋಕ್ಷವಾಗಿ ಕಾರಣೀಭೂತರಾಗಿದ್ದಾರೆ.
ಇದೀಗ ವಿಜಯೋತ್ಸವ ಆಚರಣೆ ಆಯೋಜನೆಯ ಬಗ್ಗೆ ಅಪಸ್ವರ ಕೇಳಿಬರುತ್ತಲಿದ್ದು ಪರಸ್ಪರ ದೂಷಣೆ ವ್ಯಕ್ತವಾಗುತ್ತಿದೆ. ಆದರೆ ಕಾಲ್ತುಳಿತಕ್ಕೆ ಜೀವ ಹೋಗುವಂತಾದದ್ದು ನಮ್ಮದೇ ಕುರುಡು ಅಭಿಮಾನದಿಂದ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಯಾವುದರ ಬಗ್ಗೆಯೂ ಅತಿರೇಕದ ಅಭಿಮಾನ ಬೆಳೆಸಿಕೊಂಡರೆ ಕೊನೆಗೆ ನಷ್ಟ ಉಂಟಾಗುವುದು ನಮ್ಮದೇ ಎಂಬ ಸತ್ಯದ ಅರಿವು ಎಲ್ಲರಲ್ಲೂ ಮೂಡಬೇಕಾಗಿದೆ.
ಇಲ್ಲದಿದ್ದರೆ ಯಾವುದೋ ಕ್ಲಬ್, ರಾಜ್ಯದ ಆಟಗಾರರಲ್ಲದೆ ಅನ್ಯ ರಾಜ್ಯ, ದೇಶದ ಆಟಗಾರರನ್ನು ಹರಾಜಿನಲ್ಲಿ ಹಣ ಕೊಟ್ಟು ಪಡೆದುಕೊಂಡು, ನಂತರ ಗೆದ್ದು ಹಣ ಗಳಿಸುವ ಪ್ರಕ್ರಿಯೆಗೆ ನಾವೇಕೆ ಅಷ್ಟೊಂದು ಅಭಿಮಾನವನ್ನು ಹೊಂದಬೇಕು? ಯಾರು ಗೆದ್ದರೂ ನಾವು ಬದುಕಲು ನಾಳೆ ದುಡಿಯಲೇ ಬೇಕು. ಕಷ್ಟಕಾಲದಲ್ಲಿ ಕೈ ಹಿಡಿಯಲು ಐಪಿಎಲ್ ತಂಡದ ಯಾವ ಆಟಗಾರನಾಗಲೀ, ಮಾಲಕರಾಗಲೀ ಬರಲಾರರು ಎಂಬ ಸತ್ಯದ ಅರಿವು ನಮಗಿದ್ದರೂ ನಾವೇಕೆ ಕೆಲಸಕ್ಕೆ ರಜೆ ಹಾಕಿ, ಕರ್ತವ್ಯಕ್ಕೆ ಬೆನ್ನು ಹಾಕಿ ಸಂಭ್ರಮಿಸುವಷ್ಟು ಮೂರ್ಖತನ ತೋರ್ಪಡಿಸುತ್ತಿದ್ದೇವೆ.
ಮುಂದಿನ ವರ್ಷವೂ ಐಪಿಎಲ್ ಪಂದ್ಯಾಟಗಳು ನಡೆಯುತ್ತವೆ. ವಿವಿಧ ತಂಡಗಳ ಆಟಗಾರರು ಈ ಬಾರಿಯ ತಂಡಗಳಲ್ಲಿ ಮುಂದಿನ ವರ್ಷವೂ ಇರುತ್ತಾರೆ ಎನ್ನುವಂತಿಲ್ಲ. ಹರಾಜಿನಲ್ಲಿ ಗರಿಷ್ಠ ಮೊತ್ತ ಘೋಷಿಸುವ ತಂಡದ ಮಾಲಿಕರ ಪಾಲಾಗಿ ಅಭಿಮಾನಿಗಳ ಭಾವನಾತ್ಮಕ ಸಂಬಂಧಕ್ಕೆ ಎಳ್ಳುನೀರು ಬಿಟ್ಟು ಹೆಚ್ಚು ಹಣಕ್ಕೆ ಸೇಲ್ ಆದ ತಂಡದ ಪರವಾಗಿ ಬ್ಯಾಟ್ ಬೀಸಬೇಕಾಗುತ್ತದೆ. ಅಷ್ಟೊಂದು ಅಭಿಮಾನ ತೋರಿದ ಆಟಗಾರನೂ ಕಳೆದ ಬಾರಿ ತಾನಿದ್ದ ತಂಡದ ವಿರುದ್ಧ ತೊಡೆ ತಟ್ಟಿ ನಿಲ್ಲಬೇಕಾಗುತ್ತದೆ. ಹಾಗಿದ್ದಾಗ ನಾವೇಕೆ ಈ ರೀತಿಯ ಕರುಡು ಅಭಿಮಾನಕ್ಕೆ ಒಳಗಾಗುತ್ತೇವೆ? ಎಂಬುದರ ಬಗ್ಗೆ ಚಿಂತಿಸಬೇಕಾಗುತ್ತದೆ.
ಇದು ಕೇವಲ ಮೊನ್ನೆಯ ಘಟನೆಗೆ ಸೀಮಿತವಾದ ಮಾತಲ್ಲ. ಕ್ರಿಕೆಟ್, ಕಬಡ್ಡಿ, ಫುಟ್ಬಾಲ್ ಅಥವಾ ಇನ್ನಿತರ ಆಟಗಳ ಆಟಗಾರರ ಬಗ್ಗೆ, ಸಿನಿಮಾ ತಾರೆಗಳ ಬಗ್ಗೆ ಒಲವು ಬೆಳೆಸಿಕೊಂಡ ಎಲ್ಲಾ ಅಭಿಮಾನಿಗಳೂ ಅರ್ಥೈಸಿಕೊಳ್ಳಬೇಕಾದ ಮಾತಿದು. ಆಟಗಾರರ ಬಗ್ಗೆ, ಅವರ ನಿರ್ವಹಣೆಯ ಬಗ್ಗೆ ಮೆಚ್ಚುಗೆ ಇರುವುದು ತಪ್ಪಲ್ಲ. ಆದರೆ ತಾನು ಮೆಚ್ಚಿದ ಆಟಗಾರನಿಗೆ ಇನ್ನು ಮುಂದೆ ಆಡಲು ಕಷ್ಟ ಎಂಬ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾಗುವುದು, ನೆಚ್ಚಿನ ಸಿನಿಮಾ ನಟನಿಗೆ ಮಾರಕ ರೋಗ ಇದೆ ಎಂದರಿವಾದಾಗ ತನ್ನನ್ನು ನಂಬಿದವರನ್ನು ನಡುನೀರಿನಲ್ಲಿ ಕೈಬಿಟ್ಟು ಇಹಲೋಕ ತ್ಯಜಿಸುವುದು, ಮೆಚ್ಚಿನ ನಟಿ ತಪ್ಪೆಸಗಿದರೂ ಅವಳ ಪರವಹಸಿ ಮಾತನಾಡುವುದು., ಇವೆಲ್ಲವೂ ತಪ್ಪು ಮಾತ್ರವಲ್ಲ. ಅಕ್ಷಮ್ಯ ಅಪರಾಧ.
ಇನ್ನು ಈ ಲೇಖನದ ಪ್ರಾರಂಭದ ಮಾತುಗಳಿಗೆ ಬರೋಣ. ಸಂಬಂಧಿಯೊಬ್ಬರ ಅತ್ಯುತ್ತಮ ನಿರ್ವಹಣೆಗೆ ಯಾವುದೇ ನೆಪ ಹೇಳದೆ ಸಂಭ್ರಮಿಸೋಣ. ಜೊತೆಗೆ ಅದೇ ನಿರ್ವಹಣೆಯನ್ನು ಹೊಂದಲು ನಾವೂ ಕೂಡಾ ಪ್ರಯತ್ನಿಸೋಣ. ಅದು ಬಿಟ್ಟು ಸಂಬಂಧಿಯೊಬ್ಬರು ಐಎಎಸ್ ಪಾಸ್ ಮಾಡಿದ್ದಾರೆ ಎಂಬ ಕಾರಣಕ್ಕಾಗಿ, ಪರಿಚಯದ ವ್ಯಕ್ತಿಯೊಬ್ಬರು ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಲ್ಲಿ ಇದ್ದಾರೆ ಎಂಬ ಮಾತ್ರಕ್ಕೆ ಅಥವಾ ಒಡಹುಟ್ಟಿದವರು ಉದ್ಯಮದಲ್ಲಿ ಯಶಸ್ಸು ಗಳಿಸಿದ್ದಾರೆ ಎಂದೊಡನೆ ನಮ್ಮ ಪರಿಸ್ಥಿತಿ ಖಂಡಿತಾ ಬದಲಾಗದು. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದಿದ್ದರೆ ನಾವು ನಮಗಾಗಿ ಕಷ್ಟ ಪಡಬೇಕು., ಸವಾಲುಗಳನ್ನು ಎದುರಿಸುವ ಎದೆಗಾರಿಕೆ ಹೊಂದಬೇಕು., ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಜಾಣ್ಮೆಯನ್ನು ಹೊಂದಬೇಕಾದುದು ಅತ್ಯವಶ್ಯಕ.

(ಗಣೇಶ್ ಮಾವಂಜಿ ಪತ್ರಕರ್ತರು, ಅಂಕಣಕಾರರು)