ಮುಲ್ಲನಪುರ:ಪದಾರ್ಪಣೆ ಪಂದ್ಯದಲ್ಲೇ ಆರು ವಿಕೆಟ್ ಕಬಳಿಸಿರುವ ಎಡಗೈ ಸ್ಪಿನ್ನರ್ ಮಾನವ್ ಸುತಾರ್ (33ಕ್ಕೆ 6 ವಿಕೆಟ್) ದಾಳಿಗೆ ನಲುಗಿರುವ ಪ್ರವಾಸಿ ಅಫ್ಗಾನಿಸ್ತಾನ ತಂಡವು ಇಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಸೋಲಿನ ಭೀತಿಗೆ ಸಿಲುಕಿದೆ. ಮೂರನೇ ದಿನದಾಟದಲ್ಲಿ ಪ್ರಥಮ ಇನ್ನಿಂಗ್ಸ್ನಲ್ಲಿ ಕೇವಲ 152 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು ಫಾಲೋ ಆನ್ ಎದುರಿಸಿದ ಅಫ್ಗಾನಿಸ್ತಾನ ಎರಡನೇ
ಇನ್ನಿಂಗ್ಸ್ನಲ್ಲಿ 5 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿದೆ. ಮೊದಲ ಇನಿಂಗ್ಸ್ನಲ್ಲಿ ಎಂಟು ವಿಕೆಟ್ ನಷ್ಟಕ್ಕೆ 564 ರನ್ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿದ ಭಾರತ 412 ರನ್ಗಳ ಬೃಹತ್ ಮುನ್ನಡೆ ಗಳಿಸಿತು.ಅಫ್ಗನ್ ಪರ ರೆಹಮತ್ ಶಾ 60 ರನ್ ಗಳಿಸಿದನ್ನು ಹೊರತುಪಡಿಸಿದರೆ ಇತರೆ ಯಾವ ಬ್ಯಾಟರ್ ಹೋರಾಟದ ಮನೋಭಾವವನ್ನು ತೋರಲಿಲ್ಲ. ತಮ್ಮ ಚೊಚ್ಚಲ ಪಂದ್ಯದಲ್ಲೇ ಸುತಾರ್ 22 ಓವರ್ಗಳಲ್ಲಿ ಕೇವಲ 33 ರನ್ ನೀಡಿ ಆರು ವಿಕೆಟ್ ಕಿತ್ತು ಮಿಂಚಿದರು. ಇದರಲ್ಲಿ 10 ಮೇಡನ್ ಓವರ್ಗಳು ಸೇರಿವೆ.ಪ್ರಸಿದ್ಧ ಕೃಷ್ಣ 37 ರನ್ನಿಗೆ ಮೂರು ವಿಕೆಟ್ ಗಳಿಸಿದರು. ಮತ್ತೊಂದು ವಿಕೆಟ್ ವಾಷಿಂಗ್ಟನ್ ಸುಂದರ್ ಪಡೆದರು.
ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಅಫ್ಗಾನಿಸ್ತಾನ, ಇತ್ತೀಚಿನ ವರದಿಯ ವೇಳೆಗೆ 29 ಓವರ್ಗಳಲ್ಲಿ 98 ರನ್ನಿಗೆ 5 ವಿಕೆಟ್ ಕಳೆದುಕೊಂಡು ಇನಿಂಗ್ಸ್ ಸೋಲಿನ ಭೀತಿಯಲ್ಲಿದೆ. ವಾಷಿಂಗ್ಟನ್ ಸುಂದರ್ 3 ವಿಕೆಟ್ ಉರುಳಿಸಿದರು. ಇನಿಂಗ್ಸ್ ಸೋಲು ತಪ್ಪಿಸಲು ಇನ್ನೂ 314 ರನ್ ಗಳಿಸಬೇಕಿದೆ.













