ಸಂಪಾಜೆ: ಸಂಪಾಜೆ ಗ್ರಾಮದ ಗೂನಡ್ಕ ಭಾಗದಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದ್ದು ರಾಷ್ಟ್ರೀಯ ಹೆದ್ದಾರಿ ಮಧ್ಯೆಯೇ ಕಾಣಿಸಿಕೊಳ್ಳುತ್ತಿರುವ ಗಜಪಡೆಗಳ ಹಿಂಡು ಭೀತಿ ಹುಟ್ಟಿಸುತ್ತಿವೆ. ಭಾನುವಾರ ರಾತ್ರಿ ಗೂನಡ್ಕ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ 8 ರಿಂದ 9 ಆನೆಗಳ ಹಿಂಡು ಸಮೀಪದ ತೋಟಕ್ಕೆ ನುಗ್ಗಿದೆ. ಮರಿಗಳು ಸೇರಿ ಆನೆಗಳು ರಸ್ತೆಯನ್ನು
ದಾಟುವ ವೀಡಿಯೋಗಳು ಹರಿದಾಡುತಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು ಸ್ಥಳೀಯ ಕೃಷಿಕರ ಕೃಷಿಯನ್ನು ಆನೆಗಳು ಪುಡಿಗಟ್ಟುತುವೆ. ಸಮೀಪದ ಕಾಡಿನಲ್ಲಿ ಬೀಡು ಬಿಟ್ಟಿರುವ ಆನೆ ಹಿಂಡು ಕತ್ತಲಾಗುತ್ತಿದ್ದಂತೆ ಸಮೀಪದ ಕೃಷಿ ತೋಟಗಳಿಗೆ ದಾಂಗುಡಿಯಿಡುತ್ತಿವೆ. ಗಜಪಡೆಗಳು ರಾಜಾರೋಷವಾಗಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ ಮೂಲಕವೇ ತೋಟಕ್ಕೆ ನುಗ್ಗಿವೆ.
ವಾಹನ ಸವಾರರು ನೋಡ ನೋಡುತ್ತಿದ್ದಂತೆಯೇ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿದ ಆನೆಗಳು ನೇರವಾಗಿ ಹೆದ್ದಾರಿ ಬದಿಯಲ್ಲೇ ಇರುವ ಅಡಿಕೆ, ತೆಂಗು ಮತ್ತು ಬಾಳೆ ತೋಟಗಳಿಗೆ ನುಗ್ಗಿವೆ. ಕೃಷಿಕರು ಕೃಷಿ ನಾಶದಿಂದ ಬೇಷತ್ತಿರುವುದರ ಜೊತೆಗೆ ಆನೆಗಳ ಹಿಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ, ಜನವಸತಿ ಪ್ರದೇಶದ ಸಮೀಪ ಕಾಣಿಸಿಕೊಳ್ಳುವುದರಿಂದ ಸ್ಥಳೀಯರಲ್ಲಿ ಭೀತಿ ಉಂಟಾಗಿದೆ.













