ನವದೆಹಲಿ:ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ದಾಖಲೆ ಬರೆದಿದ್ದಾರೆ. ಈ ಮೂಲಕ ಅಫ್ಘಾನಿಸ್ತಾನ ವಿರುದ್ಧ 3ನೇ ಹಾಗು ಅಂತಿಮ ಟಿ20 ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ಪೇರಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ
7 ವಿಕೆಟ್ ನಷ್ಟಕ್ಕೆ 221ರನ್ ಗಳಿಸಿದೆ.ಫಜಲ್ಹಕ್ ಫಾರೂಕಿ ಎಸೆತದಲ್ಲಿ ಎಕ್ಸ್ಟ್ರಾ ಕವರ್ ಕಡೆಗೆ ಬೌಂಡರಿ ಬಾರಿಸಿ ಖಾತೆ ತೆರೆದ ಅಭಿಷೇಕ್, ನಂತರ ಅಫ್ಘಾನ್ ಬೌಲರ್ಗಳ ಮೇಲೆ ಸವಾರಿ ಮಾಡಿದರು.ಅಜ್ಮತುಲ್ಲಾ ಉಮರ್ಝಾಯಿ ಬೌಲಿಂಗ್ನಲ್ಲಿ ಎರಡು ಸಿಕ್ಸರ್ ಸಿಡಿಸಿದ ಎಡಗೈ ಬ್ಯಾಟರ್, ಫಾರೂಕಿ ಅವರ ಶಾರ್ಟ್ ಪಿಚ್ ಎಸೆತಗಳನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿದರು.5ನೇ ಓವರ್ನಲ್ಲಿ ಮೊಹಮ್ಮದ್ ನಬಿ ಬೌಲಿಂಗ್ಗೆ ಗುರಿಯಾಗಿಟ್ಟುಕೊಂಡ ಅಭಿಷೇಕ್, 3 ಸಿಕ್ಸರ್ ಹಾಗೂ 1 ಫೋರ್ ನೆರವಿನಿಂದ ಕೇವಲ 14 ಎಸೆತಗಳಲ್ಲಿ
ಅರ್ಧಶತಕ ಪೂರೈಸಿದರು. ರಶೀದ್ ಖಾನ್ ಅವರಂತಹ ವಿಶ್ವ ದರ್ಜೆಯ ಸ್ಪಿನ್ನರ್ಗಳಿಗೆ ಭರ್ಜರಿ ಸಿಕ್ಸರ್ ಬಾರಿಸುತ್ತಾ, 30ನೇ ಎಸೆತದಲ್ಲಿ ಶತಕ ಪೂರ್ಣಗೊಳಿಸಿ ಹೊಸ ದಾಖಲೆ ನಿರ್ಮಿಸಿದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಸಾಹಿಲ್ ಚೌಹಾಣ್ (27 ಎಸೆತ) ಮತ್ತು ಮುಹಮ್ಮದ್ ಫಹಾದ್ (29 ಎಸೆತ) ನಂತರ ಅತ್ಯಂತ ವೇಗವಾಗಿ ಶತಕ ಸಿಡಿಸಿದ ವಿಶ್ವದ 3ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅಭಿಷೇಕ್ ಪಾತ್ರರಾಗಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ವೇಗದ ಶತಕ ಸಿಡಿಸಿದ ಭಾರತದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಅಂತಿಮವಾಗಿ 34 ಎಸೆತಗಳಲ್ಲಿ 11 ಸಿಕ್ಸರ್ ಹಾಗು 9 ಬೌಂಡರಿ ನೆರವಿನಿಂದ 108 ರನ್ ಗಳಿಸಿ ನಿರ್ಗಮಿಸಿದರು.
ಅವರ ಈ ಬಿರುಗಾಳಿ ಇನಿಂಗ್ಸ್ ಭಾರತ ತಂಡಕ್ಕೆ ಬೃಹತ್ ಮೊತ್ತ ಕಲೆಹಾಕಲು ಬಲವಾದ ಅಡಿಪಾಯ ಹಾಕಿಕೊಟ್ಟಿತು. ಮೊದಲ ವಿಕೆಟ್ಗೆ ಸಂಜು ಸ್ಯಾಮ್ಸನ್ ಜೊತೆ ಮೊದಲ ವಿಕೆಟ್ಗೆ 9.5 ಓವರ್ಗಳಲ್ಲಿ 142 ರನ್ ಬಾರಿಸಿದರು. ಸಂಜು 35 ಎಸೆತಗಳಲ್ಲಿ 4 ಸಿಕ್ಸರ್ ಹಾಗು 2 ಬೌಂಡರಿ ನೆರವಿನಿಂದ 50 ರನ್ ಬಾರಿಸಿದರು.ಆರಂಭಿಕರು ನಿರ್ಗಮಿಸಿದ ಬಳಿಕ ಭಾರತದ ವಿಕೆಟ್ಗಳು ಪಟ ಪಟನೆ ಉದುರಿತು. ತಿಲಕ್ ವರ್ಮ(2), ಶ್ರೇಯಸ್ ಅಯ್ಯರ್ (29), ಶಿವಂ ದುಬೆ(14), ಇಶಾನ್ ಕಿಸನ್(10), ನಿತೀಶ್ ರೆಡ್ಡಿ(1), ಅಕ್ಸರ್ ಪಟೇಲ್(5) ರನ್ ಗಳಿಸಿದರು.








