ಬೆಂಗಳೂರು: ರೈತರ ಕೃಷಿ ಪಂಪ್ ಸೆಟ್ಗಳಿಗೆ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಸಲಾಗುತ್ತಿದೆ. ಬೇಸಿಗೆಯಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಸಿದ್ಧತೆ ನಡೆಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದ್ದಾರೆ.ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ನ ದಿನೇಶ್ ಗೂಳಿಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೃಷಿ ಪಂಪ್ ಸೆಟ್ಗಳಿಗೆ ಈಗಾಗಲೇ
ಹಗಲಿನಲ್ಲಿ ನಾಲ್ಕು ಗಂಟೆ ಹಾಗೂ ರಾತ್ರಿ 3 ಗಂಟೆ ಸೇರಿ ಒಟ್ಟು ಏಳು ಗಂಟೆಗಳ ಕಾಲ ತ್ರಿಪೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಕೆಲವು ರೈತರು ಒಮ್ಮೆಲೆ ಏಳು ಗಂಟೆ ವಿದ್ಯುತ್ ನೀಡಿ ಎಂದು ಹೇಳಿದರೆ ಇನ್ನು ಕೆಲವರು ಈಗಿರುವ ವಿಧಾನ ಸರಿಯಿದೆ. ನಿರಂತರವಾಗಿ ಏಳು ಗಂಟೆ ನೀರು ಹಾಯಿಸುವ ಸಾಮರ್ಥ್ಯ ಪಂಪ್ಗಳಿಗಿಲ್ಲ, ಜೊತೆಗೆ ನೀರಿನ ಲಭ್ಯತೆಯೂ ಇರುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ 18,365 ಮೆಗಾ ವ್ಯಾಟ್ನ ಗರಿಷ್ಠ ಬೇಡಿಕೆಯನ್ನು ಪೂರೈಸಲಾಗಿದ್ದು ಈ ಪ್ರಮಾಣ 19,000 ಮೆಗಾವ್ಯಾಟ್ಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಜಾರ್ಜ್ ತಿಳಿಸಿದ್ದಾರೆ.
ಸರ್ಕಾರವು ರೈತರಿಗೆ ಐ.ಪಿ ಸೆಟ್ ಗಳನ್ನ ನೀಡಲಾಗುತ್ತಿದ್ದು ಪ್ರತಿ ವರ್ಷ 19ರಿಂದ 20 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಅಕ್ರಮ ಸಕ್ರಮಗೊಳಿಸಲು ರೂಪುರೇಷೆ ಸಿದ್ದಪಡಿಸಲಾಗುತ್ತಿದ್ದು, ಇನ್ನೊಂದು ವರ್ಷದಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಮಂಡ್ಯದಲ್ಲಿ ಕಬ್ಬಿನ ಕಟಾವಿನ ಸಮಯದಲ್ಲಿ ಹೆಚ್ಚುವರಿಗೆ ಅವಧಿಗೆ ತ್ರಿಫೇಸ್ ವಿದ್ಯುತ್ ನೀಡಬೇಕು ಎಂಬ ಬೇಡಿಕೆಗೆ ಸ್ಥಳೀಯ ಪರಿಸ್ಥಿತಿ ಗಮನಿಸಿ ಸ್ಪಂದಿಸಲಾಗುವುದು. ಇನ್ನು ಸ್ಮಾರ್ಟ್ ಮೀಟರ್ ಅನ್ನು ಗ್ರಾಹಕರು ಕೊಂಡುಕೊಳ್ಳಬೇಕು ಎಂದು ಸಚಿವರು ಹೇಳಿದರು.