ಸುಳ್ಯ:ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ 2025-26ನೇ ಸಾಲಿನಲ್ಲಿ ಆಸ್ತಿ ತೆರಿಗೆ ದರ ಶೇ.3ರಷ್ಟು ಹೆಚ್ಚಿಸಲು ನಗರ ಪಂಚಾಯತ್ ಸಭೆಯಲ್ಲಿ ನಿರ್ಧರಿಸಲಾಯಿತು. 2025-26ನೇ ಸಾಲಿಗೆ ಆಸ್ತಿ ತೆರಿಗೆ ದರವನ್ನು ಶೇ.3ರಿಂದ 5ರ ವರೆಗೆ ಏರಿಕೆ ಮಾಡಲು ಕ್ರಮ ವಹಿಸುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನದ ಮೇರೆಗೆ ಸುಳ್ಯ ನಗರ ಪಂಚಾಯತ್ನಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ನಗರ ಪಂಚಾಯತ್
ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದು ತೆರಿಗೆ ಕನಿಷ್ಟ ದರ ಅಂದರೆ ಶೇ.3ರಷ್ಟು ಏರಿಕೆ ಮಾಡಲು ನಿರ್ಧರಿಸಲಾಯಿತು. ನಗರ ಪಂಚಾಯತ್ ವ್ಯಾಪ್ತಿಯಲ್ಲಿ ತೆರಿಗೆ ಕಟ್ಟಲು ಬಾಕಿ ಇರುವವರ ಪಟ್ಟಿ ನೀಡಬೇಕು ಆ ಬಳಿಕ ಹೊಸ ತೆರಿಗೆ ಅನುಷ್ಠಾನ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ಸದಸ್ಯ ಎಂ.ವೆಂಕಪ್ಪ ಗೌಡ ಮಾತನಾಡಿ ‘ಯಾರೆಲ್ಲ ಆಸ್ತಿ ತೆರಿಗೆ ಪಾವತಿಗೆ ಬಾಕಿ ಇದೆ ಎಂಬ ಪಟ್ಟಿಯನ್ನು ಸಿದ್ಧಪಡಿಸಿ ಟ್ಯಾಕ್ಸ್ ಸಂಗ್ರಹಕ್ಕೆ ಮುಲಾಜಿಯಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಮುಂದಿನ ಸಭೆಗೆ ಮುಂಚಿತವಾಗಿ ಬಾಕಿ ಇರುವವರ ಎಲ್ಲಾ ಪಟ್ಟಿ ನೀಡಬೇಕು ಎಂದು ಅವರು ಹೇಳಿದರು. ಮುಂದಿನ ಸಭೆಗೆ ಮುಂಚಿತವಾಗಿ ತೆರಿಗೆ

ಪಾವತಿಸದವರ ಪಟ್ಟಿ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದರು. ಸದಸ್ಯ ಕೆ.ಎಸ್. ಉಮ್ಮರ್ ಮಾತನಾಡಿ ‘ ಶೇ.3 ತೆರಿಗೆ ಹೆಚ್ಚಳದಿಂದ 7.50 ಲಕ್ಷ ಅಧಿಕ ಹೊರೆ ಬಂದರೂ ಬಿಖಾತೆ, ಎ ಖಾತೆ ನೀಡುವುದರಿಂದ ಸರಕಾರ ಜನರಿಗೆ 20 ಲಕ್ಷದ ತೆರಿಗೆ ಹೊರೆ ಕಡಿಮೆ ಮಾಡುತಿದೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮಾತನಾಡಿ ಈ ಬಾರಿ 20 ಲಕ್ಷ ಕಡಿಮೆ ಆಗುವುದಿಲ್ಲ. ಈ ಬಾರಿ ಡಬಲ್ ಟ್ಯಾಕ್ಸ್ ಸಂಗ್ರಹಿಸಿ ಬಿ ಖಾತೆ ನೀಡುತ್ತೇವೆ.ಮುಂದಿನ ವರ್ಷದಿಂದ ಸಕ್ರಮಗೊಂಡು ತೆರಿಗೆ ಕಡಿಮೆ ಆಗಬಹುದಷ್ಟೇ ಎಂದು ಹೇಳಿದರು.ಏಪ್ರಿಲ್ನಲ್ಲಿ ತೆರಿಗೆ ಪಾವತಿಸಿದರೆ ಶೇ.5ರಷ್ಟು ರಿಯಾಯಿತಿ ನೀಡಲಾಗುವುದು, ಮೇ ಮತ್ತು ಜೂನ್ ತಿಂಗಳಲ್ಲಿ ದಂಡನೆ ರಹಿತ ಪಾವತಿ , ಜುಲೈ ತಿಂಗಳಿನಿಂದ ಶೇ 2 ದಂಡನೆ ವಿಧಿಸಲಾಗುವುದು ಎಂದು ಮುಖ್ಯಾಧಿಕಾರಿ ಸುಧಾಕರ ಎಂ.ಎಚ್ ತಿಳಿಸಿದರು.
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಕುರಿತು ಚರ್ಚೆ ನಡೆಯಿತು.ಎರಡು ದಿನಗಳಿಂದ ನಗರದಲ್ಲಿ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡಿರುವ ಬಗ್ಗೆ ಕೆ.ಎಸ್.ಉಮ್ಮರ್ ಮತ್ತು ವೆಂಕಪ್ಪ ಗೌಡ ಸಭೆಯ ಗಮನ ಸೆಳೆದರು. ಕರೆಂಟ್ ಇಲ್ಲದೇ ಇರುವಾಗ ಬಳಸಲು ಲಕ್ಷಾಂತರ ರೂ ಖರ್ಚು ಮಾಡಿ ಜನರೇಟರ್ ಖರೀದಿಸಿದರೂ ಅದನ್ನು ಯಾಕೆ ಉಪಯೋಗಿಸುತ್ತಿಲ್ಲ, ಅದು ಯಾಕೆ ದುರಸ್ತಿ ಮಾಡಿಲ್ಲ ಎಂದು ಸದಸ್ಯರು ಪ್ರಶ್ನಿಸಿದರು.ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರೇಟರ್ ಹಾಳಾಗಿದೆ ಎಂದು ವಿನಯಕುಮಾರ್ ಕಂದಡ್ಕ ಹೇಳಿದರು. ನೆರೆ ನೀರು ನುಗ್ಗಿ ಜನರೇಟರ್ ಹಾಳಾಗಿದೆ. ಅದನ್ನು ದುರಸ್ತಿ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಹೇಳಿದರು.
ನ.ಪಂ.ಉಪಾಧ್ಯಕ್ಷ ಬುದ್ಧ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ನ.ಪಂ.ಸದಸ್ಯರು ಭಾಗವಹಿಸಿದ್ದರು.