ಸುಳ್ಯ:ಸುಳ್ಯ ನಗರಕ್ಕೆ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚಿಸಿ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಶೀಘ್ರದಲ್ಲೇ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಸದಸ್ಯರ ನೇಮಕ ಮಾಡುವ ಸಾಧ್ಯತೆ ಇದೆ. 2011 ರಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯಡಿಯಲ್ಲಿ ಸುಳ್ಯ ಪಟ್ಟಣ ಪಂಚಾಯತ್ ವ್ಯಾಪ್ತಿಯನ್ನು ಸ್ಥಳೀಯ ಯೋಜನಾ ಪ್ರದೇಶವನ್ನಾಗಿ ಘೋಷಿಸಿ ಸುಳ್ಯ ಪಟ್ಟಣ ಪಂಚಾಯತ್ ಯೋಜನಾ ಪ್ರಾಧಿಕಾರ ಎಂದು ಆದೇಶಿಸಲಾಗಿತ್ತು. ಅದರಂತೆ
ಇದನ್ನು ಇದೀಗ ಪ್ರತ್ಯೇಕ ಯೋಜನಾ ಪ್ರಾಧಿಕಾರವಾಗಿ ಪರಿಗಣಿಸಿದೆ.ಈ ಪ್ರದೇಶದ ವ್ಯಾಪ್ತಿಯಲ್ಲಿನ ಅಭಿವೃದ್ಧಿಗಳನ್ನು ನಿಯಂತ್ರಿಸಲು ಮತ್ತು ಮಹಾ ಯೋಜನೆ ತಯಾರಿಸಲು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯನ್ವಯ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚಿಸಿ ಆದೇಶಿಸಲಾಗಿದೆ.ಈ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ಸರ್ಕಾರದಿಂದ ನೇಮಿಸಲಾಗುತ್ತದೆ. ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ

ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಸುಳ್ಯ ಪಟ್ಟಣ ಪಂಚಾಯತ್ನ ಚುನಾಯಿತ ಸದಸ್ಯರೊಬ್ಬರು ಮತ್ತು ಪಂಚಾಯತ್ನ ಮುಖ್ಯಾಧಿಕಾರಿಗಳು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಾಗಿ ಇರಲಿದ್ದು, ಸರ್ಕಾರದಿಂದ ನೇಮಿಸಲ್ಪಡುವ ಮೂರು ಮಂದಿ ಇತರ ಸದಸ್ಯರು ಅಧಿಕಾರೇತರ ಸದಸ್ಯರಾಗಿರುತ್ತಾರೆ ಎಂದು ತಿಳಿದು ಬಂದಿದೆ.
ಸುಳ್ಯ ನಗರ ಯೋಜನಾ ಪ್ರಾಧಿಕಾರ ಪ್ರತ್ಯೇಕವಾಗಿ ರಚಿಸಿ, ಸಮಿತಿ ನೇಮಿಸುವಂತೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕಾಂಗ್ರೆಸ್ ವಿಧಾನಸಭಾ ಅಭ್ಯರ್ಥಿ ಜಿ. ಕೃಷ್ಣಪ್ಪ, ನಗರ ಪಂಚಾಯತ್ ಮಾಜಿ ಸದಸ್ಯ ಕೆ. ಎಂ. ಮುಸ್ತಫ ಮತ್ತಿತರರು ಸ್ಪೀಕರ್ ಯು.ಟಿ. ಖಾದರ್ ಅವರ ಮೂಲಕ ನಗರಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಿ ಸರಕಾರ ಮಟ್ಟದಲ್ಲಿ ಪ್ರಾಧಿಕಾರ ರಚನೆಗೆ ಪ್ರಯತ್ನಿಸಿದ್ದರು ಎಂದು ತಿಳಿದು ಬಂದಿದೆ.