ಸುಳ್ಯ:ಸಾಮಾನ್ಯವಾಗಿ ಸಮತಟ್ಟಾದ ರಸ್ತೆಯಲ್ಲಿ, ಹೈವೇಗಳಲ್ಲಿ ವಾಹನಗಳ ವೇಗವನ್ನು ನಿಯಂತ್ರಿಸಲು ರಸ್ತೆಯಲ್ಲಿ ಹಂಪ್ಸ್ಗಳನ್ನು ನಿರ್ಮಿಸಲಾಗುತ್ತದೆ. ಆದರೆ ಇಲ್ಲೊಂದು ಒಳರಸ್ತೆಯಲ್ಲಿ ಸಾಲು ಸಾಲು ಹಂಪ್ಸ್ಗಳು ನಿರ್ಮಾಣಗೊಂಡಿದೆ. ಸುಳ್ಯ ಪೈಚಾರ್ನಿಂದ ಶಾಂತಿನಗರ ಹೋಗುವ ರಸ್ತೆಯಲ್ಲಿ ಸುಮಾರು 400-500 ಮೀಟರ್ ಅಂತರದಲ್ಲಿ 6 ಕಡೆ ಹಂಪ್ಸ್ ನಿರ್ಮಾಣ ಆಗಿದೆ.ಶಾಂತಿನಗರ ರಸ್ತೆಯಲ್ಲಿ
ಮುತ್ತಪ್ಪ ಗುಡಿ ಸಮೀಪದಿಂದ ಶಾಲೆಯ ತನಕ ಅಲ್ಲಲ್ಲಿ ಈ ರೀತಿ ದಿಬ್ಬಗಳು ತಲೆ ಎತ್ತಿದೆ. ಸಮತಟ್ಟಾದ ಸ್ಥಳದಲ್ಲಿ ಮಾತ್ರವಲ್ಲದೆ ಕಡಿದಾದ ಅಪ್ಗಳಲ್ಲಿಯೂ ಹಂಪ್ಸ್ ತಲೆ ಎತ್ತಿದೆ.
ಹಂಪ್ಸ್ ನಿರ್ಮಾಣ ಆಗಿರುವುದು ಹೇಗೆ..?
ಇಲ್ಲಿ ಸಾರ್ವಜನಿಕರು ಹೇಳುವ ಪ್ರಕಾರ ಇಲ್ಲಿ ಹಂಪ್ಸ್ ನಿರ್ಮಾಣ ಆಗಿರುವ ಕಥೆಯೇ ರೋಚಕ. ಕುಡಿಯುವ ನೀರಿನ ಪೈಪ್ ಅಳವಡಿಕೆಗೆಂದು ರಸ್ತೆಯನ್ನು ಕಡಿದು ಹಾಕಲಾಗಿತ್ತು. ಹಲವು ದಿನಗಳ ಕಾಲ ರಸ್ತೆಯಲ್ಲಿ ಹೊಂಡಗಳು ಬಾಯ್ದೆರೆದು ವಾಹನ ಸವಾರರಿಗೆ ಸಂಕಷ್ಟ ನೀಡಿತ್ತು. ಬಳಿಕ

ರಸ್ತೆಗೆ ಅಡ್ಡಲಾಗಿ ಕಡಿಯಲಾದ ಈ ಹೊಂಡವನ್ನು ಸಿಮೆಂಟ್ ಮಿಕ್ಸ್ ಹಾಕಿ ಮುಚ್ಚಲಾಗಿದೆ. ಆದರೆ ಮುಚ್ಚುವಾಗ ರಸ್ತೆಗೆ ಸಮಾನಾಂತರವಾಗಿ ಮುಚ್ಚದೆ ರಸ್ತೆಯಿಂದ ಎತ್ತರಕ್ಕೆ ದಿಬ್ಬದಂತೆ ಮುಚ್ಚಲಾಗಿದೆ. ಇದರಿಂದ ಕೃತಕ ಹಂಪ್ಸ್ ನಿರ್ಮಾಣಗೊಂಡಿದೆ. ಇದೀಗ ಆ ಹಂಪ್ಸ್ಗಳಿಗೆ ಕಪ್ಪು-ಬಿಳಿ ಬಣ್ಣ ಬಳಿಯಲಾಗಿದೆ. ಹಂಪ್ಸ್ಗೆ ಸಂಖ್ಯೆಗಳನ್ನೂ ನೀಡಲಾಗಿದೆ.
ವಾಹನ ಸವಾರರ ಪರದಾಟ:
ಕಿರಿದಾದ ರಸ್ತೆ, ತಿರುವು, ಏರು ರಸ್ತೆ ಇದು ಶಾಂತಿನಗರ ರಸ್ತೆ. ಇಲ್ಲಿ ಈ ರೀತಿ ಹಂಪ್ಸ್ ನಿರ್ಮಾಣ ಆಗಿರುವುದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ದ್ವಿಚಕ್ರವಾಹನ ಸವಾರರು, ಕಾರು, ರಿಕ್ಷಾ ಸೇರಿ ಎಲ್ಲಾ ವಾಹನಗಳು ಈ ಅನಿರೀಕ್ಷಿತ ಹಂಪ್ಸ್ಗಳ ಆವಾಂತರದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಪಘಾತಗಳು ಸಂಭವಿಸುವ ಅಪಾಯವೂ ಇದೆ.
‘ಶಾಲೆ ಬಳಿ ಅಥವಾ ವಾಹನಗಳು ವೇಗವಾಗಿ ಸಂಚಾರ ಮಾಡುವ ಸ್ಥಳದಲ್ಲಿ ಅಗತ್ಯ ಇದ್ದಲ್ಲಿ ಹಂಪ್ಸ್ಗಳು ನಿರ್ಮಾಣ ಮಾಡಲಿ ಆದರೆ ಇಲ್ಲಿ ಅಲ್ಲಲ್ಲಿ ಹಂಪ್ಸ್ ಮಾಡಿರುವುದು ಯಾಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.ಇದು ನಗರ ಪಂಚಾಯತ್ ಅನುಮತಿಯಿಂದ ರಚಿಸಲಾಗಿದೆಯೇ, ಅಥವಾ ಈ ರೀತಿ ಮನೆ ಬಾಗಿಲಿಗೆ ಒಂದರಂತೆ ಹಂಪ್ ರಚಿಸುವ ನಿಯಮವಿದೆಯೇ. ಇದು ಯಾರು ಈ ರೀತಿ ಹಂಪ್ಸ್ ಮಾಡಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.