ವಡೋದರಾ: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಗುಜರಾತ್ ಜೈಂಟ್ಸ್ ನೀಡಿದ್ದ ಬೃಹತ್ ಗುರಿಯನ್ನು ಬೆನ್ನತ್ತಿ ಗೆಲುವು ಸಾಧಿಸಿದೆ.
ಆ ಮೂಲಕ ಡಬ್ಲ್ಯುಪಿಎಲ್ ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ಮೊತ್ತ ಚೇಸ್ ಮಾಡಿ ಗೆದ್ದ ದಾಖಲೆ ಬರೆದಿದೆ.ಇಲ್ಲಿನ ಕೊತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ
ಆರ್ಸಿಬಿ ನಾಯಕಿ ಸ್ಮೃತಿ ಮಂದಾನ ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಬಂದ ನಾಯಕಿ ಆಶ್ಲೇ ಗಾರ್ಡ್ನರ್ ಅಬ್ಬರಿಸಿದರು. ಮೂನಿ (42 ಎಸೆತಗಳಲ್ಲಿ 56 ರನ್) ಹಾಗೂ ಆಶ್ಲೇ (37 ಎಸೆತಗಳಲ್ಲಿ 79 ರನ್) ಬೀಸಾಟದ ಬಲದಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 201 ರನ್ ಕಲೆಹಾಕಿತು.ಈ ಗುರಿ ಎದುರು ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ಇನಿಂಗ್ಸ್ ಆರಂಭಿಸಿದ ನಾಯಕಿ ಮಂದಾನ (9 ರನ್) ಹಾಗೂ ಡೇನಿಯಲ್ ವ್ಯಾಟ್ (6 ರನ್) ತಂಡದ ಮೊತ್ತ 14 ರನ್ ಆಗುವಷ್ಟರಲ್ಲೇ ಪೆವಿಲಿಯನ್ ಸೇರಿಕೊಂಡರು. ಬಳಿಕ, ಎಲಿಸ್ ಪೆರ್ರಿ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಆಟ ರಂಗೇರಿತು
ಪೆರ್ರಿ 34 ಎಸೆತಗಳಲ್ಲಿ 57 ರನ್ ಗಳಿಸಿ ಔಟಾದರೆ, ರಿಚಾ 27 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿದರು. ರಿಚಾಗೆ ಸಾಥ್ ನೀಡಿದ ಕನಿಕಾ ಅಹುಜಾ, 13 ಎಸೆತಗಳಲ್ಲಿ 30 ರನ್ ಬಾರಿಸಿ ಜಯದ ಸಂಭ್ರಮದಲ್ಲಿ ಜೊತೆಯಾದರು. 18.3 ಓವರ್ಗಳಲ್ಲೇ 202 ರನ್ ಗಳಿಸಿದ ಆರ್ಸಿಬಿ, 6 ವಿಕೆಟ್ ಅಂತರದಿಂದ ಗೆದ್ದಿತು.
ಇದರೊಂದಿಗೆ, ಬೆಂಗಳೂರು ಮಹಿಳಾ ಪಡೆ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ತನ್ನ ಮುಂದಿನ ಪಂದ್ಯವನ್ನು ಇದೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಫೆಬ್ರುವರಿ 17ರಂದು ಆಡಲಿದೆ. ಗುಜರಾತ್ ಬಳಗಕ್ಕೆ ಫೆಬ್ರುವರಿ 16ರಂದು ಯುಪಿ ವಾರಿಯರ್ಸ್ ಎದುರಾಗಲಿದೆ.
ಬೃಹತ್ ಗುರಿ ಬೆನ್ನತ್ತಿದ ಆರ್ಸಿಬಿ 15 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತ್ತು. ಹೀಗಾಗಿ, ಪಂದ್ಯವು ಗುಜರಾತ್ ನಿಯಂತ್ರಣದಲ್ಲಿತ್ತು. 16ನೇ ಓವರ್ನಲ್ಲಿ ರಿಚಾ, ನಾಲ್ಕು ಬೌಂಡರಿ ಒಂದು ಸಿಕ್ಸರ್ ಸಹಿತ 22 ರನ್ ಚಚ್ಚಿದರು. ಒಂದು ಎಸೆತ ವೈಡ್ ಆದದ್ದರಿಂದ ಒಟ್ಟು 23 ರನ್ಗಳು ಬಂದವು. ಹೀಗಾಗಿ, ಆರ್ಸಿಬಿ ಮೇಲಿದ್ದ ಒತ್ತಡ ಇಳಿಯಿತು. ಈ ಓವರ್ ಪಂದ್ಯದ ಗತಿಯನ್ನೇ ಬದಲಿಸಿತು.