ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 114 ರನ್ ಗಳಿಸಬೇಕಿದೆ.ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ 18.3 ಓವರ್ಗಳಲ್ಲಿ 113 ರನ್ಗಳಿಗೆ ಆಲೌಟ್ ಆಯಿತು.ಡೆಲ್ಲಿಗೆ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ
ಶಫಾಲಿ ವರ್ಮಾ ಬಿರುಸಿನ ಆರಂಭವೊದಗಿಸಿದರು. ಈ ಜೋಡಿ ಮೊದಲ ವಿಕೆಟ್ಗೆ ಕೇವಲ ಏಳು ಓವರ್ಗಳಲ್ಲೇ 64 ರನ್ ಪೇರಿಸಿತು.
ಆಕ್ರಮಣಕಾರಿಯಾಗಿ ಆಡಿದ ಶಫಾಲಿ ಕೇವಲ 27 ಎಸೆತಗಳಲ್ಲಿ 44 ರನ್ ಗಳಿಸಿದರು. ಇದರಲ್ಲಿ ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿ ಒಳಗೊಂಡಿತ್ತು. ಮತ್ತೊಂದೆಡೆ ನಾಯಕಿ ಮೆಗ್ ಲ್ಯಾನಿಂಗ್ ಮೂರು ಬೌಂಡರಿಗಳ ನೆರವಿನಿಂದ 23 ರನ್ ಗಳಿಸಿದರು.
ಈ ಹಂತದಲ್ಲಿ ದಾಳಿಗೆ ಇಳಿದ ಸೋಫಿ ಮಾಲಿನೆ ಒಂದೇ ಓವರ್ನಲ್ಲಿ ಮೂರು ವಿಕೆಟ್ಗಳನ್ನು ಕಬಳಿಸುವ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು.ಎಂಟನೇ ಓವರ್ನಲ್ಲಿ ಶಫಾಲಿ ವರ್ಮಾ (44), ಜೆಮಿಮಾ ರಾಡ್ರಿಗಸ್ (0) ಹಾಗೂ ಅಲೈಸ್ ಕ್ಯಾಪ್ಸಿ (0) ವಿಕೆಟ್ಗಳನ್ನು ಕಬಳಿಸಿದರು.
ಬಳಿಕ ಕನ್ನಡತಿ ಶ್ರೇಯಾಂಕಾ ಪಾಟೀಲ ಹಾಗೂ ಆಶಾ ಶೋಭನಾ ಮೋಡಿ ಮಾಡಿದರು. 3.3 ಓವರ್ಗಳಲ್ಲಿ 12 ರನ್ ಮಾತ್ರ ಬಿಟ್ಟು ಕೊಟ್ಟ ಶ್ರೇಯಾಂಕಾ, ನಾಲ್ಕು ವಿಕೆಟ್ ಕಬಳಿಸಿದರು. ಮತ್ತೊಂದೆಡೆ ಆಶಾ ಶೋಭನಾ ಎರಡು ವಿಕೆಟ್ ಗಳಿಸಿ ಮಿಂಚಿದರು.
ಪರಿಣಾಮ ಡೆಲ್ಲಿ 18.3 ಓವರ್ಗಳಲ್ಲಿ 113 ರನ್ಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.













