*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಇತ್ತೀಚಿನ ವರ್ಷಗಳಲ್ಲಿ ಸುಳ್ಯ ತಾಲೂಕಿನಲ್ಲಿ ಮಾತ್ರವಲ್ಲದೆ ಎಲ್ಲೆಡೆ ಕಾಡಾನೆ ಹಾವಳಿಯದ್ದೇ ಸುದ್ದಿ, ಕೃಷಿ ಹಾನಿ, ನಷ್ಟಗಳದ್ದೇ ಬವಣೆ. ಕಾಡಾನೆಗಳ ಉಪಟಳ, ಕೃಷಿ ಹಾನಿ ವ್ಯಾಪಕವಾಗುತಿದೆ. ಈ ರೀತಿ ವನ್ಯ ಪ್ರಾಣಿಗಳಿಂದ ರೈತರಿಗೆ ಆಗುವ ನಷ್ಟಕ್ಕೆ ಅರಣ್ಯ ಇಲಾಖೆ ವತಿಯಿಂದ ಒಂದಿಷ್ಟು ಪರಿಹಾರವನ್ನೂ ನೀಡಲಾಗುತಿದೆ. ಇದೀಗ ಕಳೆದ ಕೆಲವು ವರ್ಷಗಳಿಂದ ಅರಣ್ಯ ಇಲಾಖೆ ನೀಡುವ ಪರಿಹಾರ ಮೊತ್ತ ಹೆಚ್ಚಳವಾಗಿದೆ. ಆನೆ ಸೇರಿದಂತೆ
ವನ್ಯಪ್ರಾಣಿಗಳ ದಾಳಿಯಿಂದ ಆಗುವ ಕೃಷಿ ಹಾನಿ, ಜೀವ ಹಾನಿಗೆ ಪ್ರತ್ಯೇಕ ಮಾನದಂಡದಂತೆ ಪರಿಹಾರ ನೀಡಲಾಗುತ್ತದೆ. ಸುಳ್ಯ ವಲಯ ಅರಣ್ಯ ವ್ಯಾಪ್ತಿಯಲ್ಲಿ 2025-26ನೇ ಸಾಲಿನಲ್ಲಿ
ಇದುವರೆಗೆ ಕೃಷಿ ಹಾನಿಗೆ 51 ಪ್ರಕರಣಗಳಲ್ಲಿ 17,51,144 ರೂ. ಪರಿಹಾರ ಪಾವತಿಸಲಾಗಿದೆ. 2024-25ನೇ ಸಾಲಿನಲ್ಲಿ 121 ಪ್ರಕರಣಗಳಲ್ಲಿ 33,59,508 ರೂ ಪರಿಹಾರ ನೀಡಲಾಗಿದೆ. 2023-24ನೇ ಸಾಲಿನಲ್ಲಿ 131 ಪ್ರಕರಣಗಳಲ್ಲಿ 42,16,568 ರೂ ಕೃಷಿ ಹಾನಿಗೆ ಪರಿಹಾರ ವಿತರಿಸಲಾಗಿತ್ತು. 2008-09ನೇ ಸಾಲಿನಿಂದ 2025 ಮೇ 3ರ ತನಕ ಒಟ್ಟು 18 ವರ್ಷಗಳಲ್ಲಿ 880 ಪ್ರಕರಣಗಳಲ್ಲಿ 1.74 ಕೋಟಿ ರೂ.ಗಳನ್ನು ಪರಿಹಾರವಾಗಿ ವಿತರಿಸಲಾಗಿದೆ.
ಹಿಂದೆಲ್ಲಾ ಆನೆ ದಾಳಿಯ ಅತೀ ಕಡಿಮೆ ಪ್ರಕರಣಗಳು ದಾಖಲಾಗುತ್ತಿದ್ದರೆ ಇದೀಗ ಆನೆ ದಾಳಿ ಪ್ರಕರಣಗಳು ತೀವ್ರ ಹೆಚ್ಚಾಗುತಿದೆ. 2008-09ನೇ ಸಾಲಿನಲ್ಲಿ ಕೇವಲ 8 ಪ್ರಕರಣಗಳಲ್ಲಿ ರೂ
58,540, 2009-10ನೇ ಸಾಲಿನಲ್ಲಿ 4 ಪ್ರಕರಣಗಳಲ್ಲಿ 58,980 ರೂ,2010-11ನೇ ಸಾಲಿನಲ್ಲಿ 3 ಪ್ರಕರಣಗಳಲ್ಲಿ 21,330 ರೂ. ಪರಿಹಾರ ನೀಡಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರೀ ಹೆಚ್ಚಳವಾಗಿದ್ದು ಪ್ರತಿ ವರ್ಷ ನೂರಕ್ಕೂ ಅಧಿಕ ಪ್ರಕರಣಗಳಲ್ಲಿ ಲಕ್ಷಾಂತರ ರೂ ಪರಿಹಾರ ಪಾವತಿಸಲಾಗುತ್ತದೆ.

ಪರಿಹಾರ ಪಡೆಯುವುದು ಹೇಗೆ:
ಆನೆ ಅಥವಾ ವನ್ಯ ಪ್ರಾಣಿ ಹಾವಳಿಯಿಂದ ಕೃಷಿ ಹಾನಿ ಉಂಟಾದರೆ ಕೃಷಿಕರು, ಪಹಣಿ ಪತ್ರ, ಹಾನಿಯ ಭಾವಚಿತ್ರ, ಬ್ಯಾಂಕ್ ಖಾತೆ ವಿವರ, ಆಧಾರ್ ಮತ್ತಿತರ ದಾಖಲೆಯೊಂದಿಗೆ ಅರಣ್ಯ ಇಲಾಖೆಯ ಕಚೇರಿಗೆ ಅರ್ಜಿ ಸಲ್ಲಿಸಬೇಕು.ಉಪವಲಯ ಅರಣ್ಯಾಧಿಕಾರಿಗಳು ಇದನ್ನು ಪರಿಶೀಲಿಸಿ ವಿವರಗಳನ್ನು ಅರಣ್ಯ ಇಲಾಖೆಯ ‘ಇ ಪರಿಹಾರ್’ ಆಪ್ನಲ್ಲಿ ಆನ್ಲೈನ್ ಮೂಲಕ ಅಪ್ ಲೋಡ್ ಮಾಡುತ್ತಾರೆ. ಆ ಸಂದರ್ಭದಲ್ಲಿ ಸರಕಾರಿ ಮಾನದಂಡದ ಪ್ರಕಾರ ಪರಿಹಾರ ಮೊತ್ತ ದಾಖಲಾಗುತ್ತದೆ, ಬಳಿಕ ಇದನ್ನು ಆನ್ ಲೈನ್ ಮೂಲಕ ವಲಯ ಅರಣ್ಯಾಧಿಕಾರಿಗೆ ಕಳಿಸುತ್ತಾರೆ, ವಲಯ ಅರಣ್ಯಾಧಿಕಾರಿ ಪರಿಶೀಲನೆ ನಡೆಸಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ, ಅವರು ಪರಿಶಿಲಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಕಳಿಸಲಾಗುತ್ತದೆ. ಅವರು ಪರಿಶೀಲನೆ ನಡೆಸಿ ಅವರ ವ್ಯಾಪ್ತಿಯ ಮಿತಿಯ ಮೊತ್ತವಾದರೆ ಅವರೇ ಮಂಜೂರು

ಮಾಡುತ್ತಾರೆ, ಮಿತಿಗಿಂತ ಹೆಚ್ಚಿನ ಮೊತ್ತವಾದರೆ ಕಡತವನ್ನು ಆನ್ ಲೈನ್ ಮೂಲಕವೇ ಅರಣ್ಯ ಸಂರಕ್ಷಣಾಧಿಕಾರಿ ಅವರ ಅವಗಾಹನೆಗೆ ಕಳಿಸಲಾಗುತ್ತದೆ. ಅವರು ಪರಿಶೀಲನೆ ನಡೆಸಿ ಪರಿಹಾರ ಮಂಜೂರು ಮಾಡುತ್ತಾರೆ. ಆನ್ಲೈನ್ ಮೂಲಕವೇ ಮಂಜೂರಾತಿ ಆದೇಶ ಪತ್ರ ಜನರೇಟ್ ಆಗಿ ವಲಯ ಅರಣ್ಯಾಧಿಕಾರಿ ಹಾಗೂ ಫಲಾನುಭವಿಗಳಿಗೆ ರವಾನೆಯಾಗುತ್ತದೆ. ಅನುದಾನ ಬಿಡುಗಡೆ ಆದ ಬಳಿಕ ವಲಯ ಅರಣ್ಯಾಧಿಕಾರಿಗಳು ಬಿಲ್ ಮಾಡಿ ಟ್ರಜರಿಗೆ ಕಳಿಸಲಾಗುತ್ತದೆ ಮತ್ತು ಆನ್ಲೈನ್ ಮೂಲಕವೇ ಫಲಾನುಭವಿಗಳ ಖಾತೆಗೆ ಪರಿಹಾರ ಹಣ ಜಮೆ ಆಗುತ್ತದೆ ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಪರಿಹಾರ ಮಾನದಂಡ ಏನು:
ಪ್ರತಿ ಕೃಷಿ ಹಾನಿಗೆ ಸರಕಾರಿ ಮಾನದಂಡ ಪ್ರಕಾರ ಪರಿಹಾರ ದೊರೆಯುತ್ತದೆ. ಅಡಿಕೆ, ತೆಂಗು ಮರಗಳಿಗೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮರಕ್ಕೆ ಪ್ರತಿ ಮರಕ್ಕೆ 800, 5ರಿಂದ 9 ವರ್ಷ ವಯಸ್ಸಿನ ಗಿಡಗಳಿಗೆ ಪ್ರತಿ ಮರಕ್ಕೆ 1600, 10 ವರ್ಷ ಮತ್ತು ಮೇಲ್ಪಟ್ಟ ಗಿಡಗಳಿಗೆ ಪ್ರತಿ ಮರಕ್ಕೆ 4000 ರೂ, ಪ್ರತಿ ಬಾಳೆ ಗಿಡಕ್ಕೆ 320 ರೂ ಪರಿಹಾರ ನೀಡಲಾಗುತ್ತದೆ.ಅಲ್ಲದೆ ವನ್ಯ ಜೀವಿಗಳಿಂದ ಉಂಟಾಗುವ ಜೀವಹಾನಿಗೆ 15 ಲಕ್ಷ, ಶಾಶ್ವತ ಅಂಗವಿಕಲತೆಗೆ 10 ಲಕ್ಷ, ಗಾಯಗೊಂಡರೆ 60 ಸಾವಿರ, ಕಟ್ಟಡ, ಮನೆ, ಇತರ ಆಸ್ತಿ ನಷ್ಟಕ್ಕೆ 20 ಸಾವಿರ ದಯಾತ್ಮಕ ಧನ ನೀಡಲಾಗುತ್ತದೆ. ಜೀವಹಾನಿ ಉಂಟಾದರೆ ಕುಟುಂಬಕ್ಕೆ ಹಾಗೂ ಶಾಶ್ವತ ಅಂಗವವಿಕಲತೆ ಉಂಟಾದ ವ್ಯಕ್ತಿಗಳಿಗೆ ದಯಾತ್ಮಕ ಧನದ ಜೊತೆಗೆ ಪ್ರತಿ ತಿಂಗಳಂತೆ 5 ವರ್ಷದ ತನಕ ರೂ.4,000 ಮಾಸಾಶನವನ್ನೂ ನೀಡಲಾಗುತ್ತದೆ.

ಆನೆ ಹಾವಳಿ ತಡೆಗೆ ತೆಗೆದುಕೊಂಡ ಕ್ರಮಗಳು:
ಸುಳ್ಯ ತಾಲೂಕಿನಲ್ಲಿ ಬಹುತೇಕ ಗ್ರಾಮಗಳು ಆನೆ ದಾಳಿ ಪೀಡಿತವಾಗಿದೆ. ಸುಬ್ರಹ್ಮಣ್ಯ ಉಪವಿಭಾಗ ವ್ಯಾಪ್ತಿಯಲ್ಲಿ ಸುಮಾರು 60 ಸಾವಿರ ಹೆಕ್ಟೇರ್ ಅರಣ್ಯ ಪ್ರದೃಶ ಇದೆ.ಬಹುತೇಕ ಗ್ರಾಮಗಳು ಅರಣ್ಯದಿಂದ ಸುತ್ತು ವರಿದಿರುತ್ತದೆ. ಆದುದರಿಂದಲೇ ಈ ಗ್ರಾಮಗಳಲ್ಲಿ ಆನೆ, ಕಾಡುಕೋಣ, ಕಾಡು ಹಂದಿ, ಮಂಗಗಳು ಸೇರಿದಂತೆ ವನ್ಯ ಪ್ರಾಣಿಗಳ ದಾಳಿಯೂ ನಿರಂತರ. ಅದರಲ್ಲಿ ಆನೆ ದಾಳಿ ಮಿತಿ ಮೀರಿದೆ. ಆನೆ ದಾಳಿಯನ್ನು ತಡೆಯಲು ಅರಣ್ಯ ಇಲಾಖೆ ಹಲವು ಯೋಜನೆಗಳನ್ನು ಅನುಷ್ಠಾನ ಮಾಡಿದೆ. ಅರಣ್ಯ ಇಲಾಖೆ ಅರಣ್ಯದ ಅಂಚಿನಲ್ಲಿ ಸೋಲಾರ್ ಬೇಲಿಗಳನ್ನು ಅಳವಡಿಸಲಾಗುತ್ತದೆ. ನೇತಾಡುವ ಸೋಲಾರ್ ತೂಗು ಬೇಲಿ ಇವುಗಳಲ್ಲಿ ಪ್ರಮುಖವಾದುದು. ಸುಳ್ಯ ವಲಯ ವ್ಯಾಪ್ತಿಯಲ್ಲಿ 11 ಕಿ.ಮಿ. ಉದ್ದಕ್ಕೆ
ಆನೆಗಳು ಸುಲಭದಲ್ಲಿ ನಾಶ ಪಡಿಸಲು ಸಾಧ್ಯವಾಗದ ‘ಹ್ಯಾಂಗಿಂಗ್ ಸೋಲಾರ್ ಫೆನ್ಸಿಂಗ್’ ಮಾಡಲಾಗಿದೆ. ಅಜ್ಜಾವರ, ಆಲೆಟ್ಟಿ, ಮಂಡೆಕೋಲು ಮತ್ತಿತರ ಭಾಗಗಳಲ್ಲಿ ಈ ಸೋಲಾರ್ ತೂಗು ಬೇಲಿ ನಿರ್ಮಿಸಿದೆ.
ಅಲ್ಲದೆ ಅರಣ್ಯದಂಚಿನಲ್ಲಿ ಆನೆ ಕಂದಕಗಳನ್ನು ನಿರ್ಮಿಸಲಾಗುತ್ತಿದ್ದು ಸುಳ್ಯ ವಲಯದಲ್ಲಿ ಕಳೆದ 5 ವರ್ಷದಲ್ಲಿ 17 ಕಿ.ಮಿ. ಕಂದಕ ನಿರ್ಮಿಸಲಾಗಿದೆ.
ಹೊಳೆ, ತೋಡುಗಳ, ಗುಡ್ಡ, ಕಣಿವೆಗಳ ಮೂಲಕ ಆನೆಗಳು ನಾಡಿಗೆ

ಪ್ರವೇಶಿಸುವುದನ್ನು ತಡೆಯಲು ಆನೆ ನಿರೋಧಕ ಕಾಂಕ್ರೀಟ್ ಸ್ತಂಭಗಳನ್ನು ನಿರ್ಮಿಸಲಾಗುತ್ತಿದೆ. ಸುಳ್ಯ ವಲಯದಲ್ಲಿ 560 ಮೀಟರ್ ಕಾಂಕ್ರೀಟ್ ಸ್ತಂಭ ನಿರ್ಮಾಣ ಮಾಡಲಾಗಿದೆ. ಅಲ್ಲದೆ ರೈತರಿಗೆ ತಮ್ಮ ತೋಟದ ಸುತ್ತ ಸೋಲಾರ್ ಬೇಲಿ ನಿರ್ಮಾಣಕ್ಕೆ ಇಲಾಖೆ ಶೇ.50 ಸಹಾಯ ಧನ ನೀಡಲಾಗುತಿದೆ. ಒಂದು ಕಿ.ಮಿ.ಬೇಲಿಗೆ 2.30 ಲಕ್ಷ ಎಂದು ಅಂದಾಜಿಸಲಾಗಿದ್ದು ಇಲಾಖೆ 1.15 ಲಕ್ಷ ನೀಡುತ್ತದೆ.
ಬೇಸಿಗೆಯಲ್ಲಿ ಆನೆಗಳು ಊರಿಗೆ ಬರದಂತೆ ಕಾಡಿನಲ್ಲಿಯೇ ವನ್ಯ ಪ್ರಾಣಿಗಳಿಗೆ ನೀರು ಒದಗಿಸುವ ದೃಷ್ಟಿಯಿಂದ ಅರಣ್ಯದಲ್ಲಿ 5 ಕಡೆಗಳಲ್ಲಿ ಬೃಹತ್ ಕೆರೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಮಾಹಿತಿ ನೀಡಿದ್ದಾರೆ. ಶೇ.50ರ ಸಹಾಯ ಧನವನ್ನು ಬಳಸಿ ಕೃಷಿಕರು ತಮ್ಮ ತೋಟದ ಸುತ್ತ ಸೋಲಾರ್ ಬೇಲಿ ಅಳವಡಿಸಿ ತೋಟಕ್ಕೆ ಆನೆ ಬರುವುದನ್ನು ತಡೆಯಬಹುದು ಎಂದು ಅವರು ಸಲಹೆ ನೀಡಿದ್ದಾರೆ.
‘ಸುಳ್ಯ ತಾಲೂಕಿನ ಸುತ್ತಲೂ ದಟ್ಟ ಕಾಡು ಇರುವುದರಿಂದ ಈ ಕಾಡಿನಿಂದ ಆನೆಗಳು ಹಾಗೂ ಇತರ ವನ್ಯ ಪ್ರಾಣಿಗಳು ಸಹಜವಾಗಿ ನಾಡಿಗೆ ಬರುತ್ತದೆ. ಆನೆಗಳು ನಾಡಿಗೆ ಬರದಂತೆ ತಡೆಯಲು ಅರಣ್ಯ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಪೂರ್ತಿಯಾಗಿ ತಡೆಯಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕೃಷಿ ನಾಶವಾದ ಕೃಷಿಕರಿಗೆ ದಯಾತ್ಮಕ ಪರಿಹಾರ ಧನಗಳನ್ನು ನೀಡುತಿದೆ. ಕೃಷಿ ನಾಶ ಉಂಟಾದಲ್ಲಿ ಅರ್ಜಿ ಸಲ್ಲಿಸಿ ಪರಿಹಾರವನ್ನು ಪಡೆದುಕೊಳ್ಳಬಹುದು”
-ಎನ್.ಮಂಜುನಾಥ್
ವಲಯ ಅರಣ್ಯಾಧಿಕಾರಿ
ಸುಳ್ಯ.