ಸುಳ್ಯ:ಪೆರಾಜೆ ಸಮೀಪ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ಪಿ.ಬಿ.ದಿವಾಕರ ರೈ ಮತ್ತು ಸಹೋದರರ ಕೃಷಿ ಭೂಮಿಗೆ ನುಗ್ಗಿದ ಆನೆಗಳ ಹಿಂಡು ಅಕ್ಷರಷಃ ತಾಂಡವವಾಡಿದೆ. 7-8 ಆನೆಗಳಿರುವ ಹಿಂಡು ಕಳೆದ ರಾತ್ರಿ ತೋಟಕ್ಕೆ ನುಗ್ಗಿ ಭಾರೀ ಪ್ರಮಾಣದಲ್ಲಿ ಕೃಷಿ ಹಾನಿ ಮಾಡಿದೆ. ತೆಂಗು, ಬಾಳೆ, ಅಡಿಕೆ ಮರ, ಗದ್ದೆ ಕೃಷಿಯನ್ನು ಪುಡಿಗಟ್ಟಿದೆ. 25ಕ್ಕೂ ಹೆಚ್ಚು ಫಲ ಬರುವ ತೆಂಗಿನ ಮರ, ತೆಂಗಿನ ಗಿಡಗಳನ್ನು ನಾಶ ಮಾಡಿದ ಆನೆಗಳು ನೂರಾರು
ಬಾಳೆಗಳನ್ನು, ಹಲವಾರು ಅಡಿಕೆ ಮರಗಳನ್ನು ಪುಡಿಗಟ್ಟಿದೆ. ಕೆಲ ದಿನಗಳ ಹಿಂದೆಯಷ್ಟೇ ನೇಜಿ ನೆಟ್ಟ ಗದ್ದೆಯಲ್ಲಿ ನೀರಾಟ ಆಡಿದ ಆನೆಗಳು ಗದ್ದೆ ಕೃಷಿಯನ್ನೂ ನಾಮಾವಶೇಷ ಮಾಡಿದೆ.ದಿವಾಕರ ರೈಗಳ ಫಾರ್ಮ್ಸ್ಗೆ ನುಗ್ಗಿದ ಗಜಪಡೆಗಳು ಕಳೆದ ರಾತ್ರಿ ಲಕ್ಷಾಂತರ ರೂಗಳ ನಷ್ಟ ಉಂಟು ಮಾಡಿದೆ. ಕಳೆದ ಕೆಲವು ದಿನಗಳ ಹಿಂದೆ ಅರಂಬೂರು ಭಾಗದಲ್ಲಿ ಕಾಣಿಸಿಕೊಂಡ ಆನೆಗಳ ಹಿಂಡು ಇದೀಗ ಪೆರಾಜೆ ಭಾಗದಲ್ಲಿ ಕಾಣಿಸಿಕೊಂಡಿದೆ. 2-3 ಸಣ್ಣ ಮರಿಗಳು ಇರುವ ಆನೆ ಹಿಂಡು ಕಳೆದ

ಹಲವು ತಿಂಗಳಿನಿಂದ ಅರಂಬೂರು, ಪರಿವಾರಕಾನ,ಪೆರಾಜೆ ಭಾಗದಲ್ಲಿ ಕೃಷಿ ಹಾನಿ ಮಾಡುತಿವೆ. ಪೆರಾಜೆಯಲ್ಲಿ ಕೃಷಿ ಹಾನಿ ಮಾಡಿರುವ ಆನೆ ಹಿಂಡು ಜನವಸತಿ ಪ್ರದೇಶದ ಸಮೀಪದಲ್ಲೇ ಇರುವ ಕಾಡಿನಲ್ಲಿ ಬೀಡು ಬಿಟ್ಟಿದೆ.ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿಯಲ್ಲಿಯೇ ಹಲವು ತಿಂಗಳಿನಿಂದ ಸುತ್ತಾಟ ನಡೆಸುತ್ತಿರುವ ಈ ಆನೆಗಳ ಹಿಂಡು ವ್ಯಾಪಕವಾಗಿ ಕೃಷಿ ಹಾನಿ ಮಾಡುತಿವೆ. ಈ ಆನೆಗಳ ಹಿಂಡನ್ನು ದೂರ ಸರಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ದಿವಾಕರ ರೈಗಳ ತೋಟವೊಂದರಲ್ಲೇ ಒಂದು ರಾತ್ರಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ರೂಗಳ ಕೃಷಿ ಹಾನಿಯನ್ನು ಆನೆಗಳ ಹಿಂಡು ಮಾಡಿದೆ. ತೋಟವನ್ನು, ಗದ್ದೆಯನ್ನೂ ನೋಡಲಾಗದ ರೀತಿಯಲ್ಲಿ ನಾಶ ಮಾಡಿದೆ ಎನ್ನುತ್ತಾರೆ ಅವರ ಸಹೋದರ ಪಿ.ಬಿ.ಸುಧಾಕರ ರೈ.














