ನ್ಯೂಯಾರ್ಕ್:ಟಿ20 ವಿಶ್ವಕಪ್ಗಾಗಿ ಭಾರತೀಯ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಜೂನ್ 1 ರಂದು ನಡೆಯುವ ಬಾಂಗ್ಲಾದೇಶ್ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ನ್ಯೂಯಾರ್ಕ್ನಲ್ಲಿ ತಾಲೀಮು ಶುರು ಮಾಡಿದ್ದಾರೆ.
ಮೇ 26 ರಂದು ಅಮೆರಿಕಗೆ ತೆರಳಿದ್ದ ಭಾರತೀಯ ಆಟಗಾರರು 2 ದಿನಗಳ ಕಾಲ
ವಿಶ್ರಾಂತಿಯಲ್ಲಿದ್ದರು. ಅದರಂತೆ ಮಂಗಳವಾರದಿಂದ ಪ್ರಾಕ್ಟೀಸ್ ಆರಂಭಿಸಲಾಗಿದೆ. ಈ ಮೂಲಕ ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ.
ಇನ್ನು ಈ ಅಭ್ಯಾಸ ಕ್ಯಾಂಪ್ನಲ್ಲಿ ಟೀಮ್ ಇಂಡಿಯಾದ ಉಪನಾಯಕ ಹಾರ್ದಿಕ್ ಪಾಂಡ್ಯ ಕೂಡ ಕಾಣಿಸಿಕೊಂಡಿದ್ದಾರೆ. ಮೇ 26 ರಂದು ಭಾರತದಿಂದ ತೆರಳಿದ ಬಳಗದಲ್ಲಿ ಪಾಂಡ್ಯ ಕಾಣಿಸಿಕೊಂಡಿರಲಿಲ್ಲ. ಇದೀಗ ಹಾರ್ದಿಕ್ ಲಂಡನ್ನಿಂದ ನೇರವಾಗಿ ನ್ಯೂಯಾರ್ಕ್ಗೆ ಬಂದಿಳಿದಿದ್ದಾರೆ. ಅಲ್ಲದೆ ಭಾರತ ತಂಡದ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಹಾಗೆಯೇ ಜೂನ್ 9 ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ.
ಇದಾದ ಬಳಿಕ ಜೂನ್ 12 ರಂದು ಯುಎಸ್ಎ ಮತ್ತು ಜೂನ್ 15 ರಂದು ಕೆನಡಾ ವಿರುದ್ಧ ಆಡಲಿದೆ. ಈ ಪಂದ್ಯಗಳೊಂದಿಗೆ ಲೀಗ್ ಹಂತ ಮುಗಿಯಲಿದ್ದು, ಆ ಬಳಿಕ ಸೂಪರ್-8 ಹಂತದ ಪಂದ್ಯಗಳು ಶುರುವಾಗಲಿದೆ. ಈ ಪಂದ್ಯಗಳಿಗಾಗಿ ಇದೀಗ ಟೀಮ್ ಇಂಡಿಯಾ ಆಟಗಾರರು ನ್ಯೂಯಾರ್ಕ್ನಲ್ಲಿ ಕಠಿಣ ತಾಲೀಮಿನಲ್ಲಿ ನಿರತರಾಗಿದ್ದಾರೆ.
ಇನ್ನು ಭಾರತ ತಂಡವು ಅಭ್ಯಾಸವನ್ನು ಆರಂಭಿಸಿದರೂ ವಿರಾಟ್ ಕೊಹ್ಲಿ ಇನ್ನೂ ಕೂಡ ಟೀಮ್ ಇಂಡಿಯಾವನ್ನು ಕೂಡಿಕೊಂಡಿಲ್ಲ. ವೀಸಾ ಪೇಪರ್ ವರ್ಕ್ಗಳ ವಿಳಂಬದಿಂದ ಕಿಂಗ್ ಕೊಹ್ಲಿ ಅಮೆರಿಕಕ್ಕೆ ತೆರಳುವುದು ತಡವಾಗಿದೆ. ಅಲ್ಲದೆ ಮೇ 30 ರಂದು ಅವರು ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.
ಭಾರತ ಟಿ20 ವಿಶ್ವಕಪ್ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
ಮೀಸಲು ಆಟಗಾರರು: ಶುಭ್ಮನ್ ಗಿಲ್, ಅವೇಶ್ ಖಾನ್, ರಿಂಕು ಸಿಂಗ್, ಖಲೀಲ್ ಅಹ್ಮದ್.