*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಒಂದು ನಾಡಿನ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿರಬೇಕಾದ ತಾಣ ಪುರಭವನ. ಆದರೆ ಸುಳ್ಯದ ಈ ಪುರಭವನ ನಿರ್ವಹಣೆಯ ಕೊರತೆಯಿಂದ ಸೊರಗಿ ಪಾಳು ಬಿದ್ದಿದೆ.ಯಾವುದೇ ಕಾರ್ಯಕ್ರಮಗಳು ನಡೆಯದೆ ಕಳೆದ ಕೆಲವು ವರ್ಷಗಳಿಂದ ಸುಳ್ಯ ನಗರ ಪಂಚಾಯತ್ ಸುಪರ್ದಿಯಲ್ಲಿರುವ ಪುರಭವನ ಪಾಳು ಬಿದ್ದಿದೆ. ಒಂದು ಕಾಲದಲ್ಲಿ ಕಲೆ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಚಟುವಟಿಕೆಗಳ ಮೂಲಕ, ಸರಕಾರಿ ಕಾರ್ಯಕ್ರಮಗಳಿಂದ
ನಳ ನಳಿಸುತ್ತಿದ್ದ ಪುರಭವನ ಗತ ಕಾಲದ ವೈಭವವನ್ನು ನೆನಪಿಸುತ್ತಾ ಸೊರಗಿ ನಿಂತಿದೆ. ಜನ ಸಾಮಾನ್ಯರ ಮಧುವೆ ಮತ್ತಿತರ ಕಾರ್ಯಕ್ರಮಗಳು, ಸಂಘ ಸಂಸ್ಥೆಗಳ ಸಭೆ ಸಮಾರಂಭಗಳು ಸೇರಿ ನಿರಂತರ ಚಟುವಟಿಕೆಗಳ ತಣವಾಗಿದ್ದ ಪುರಭವನ ಇಂದು ಮೌನಕ್ಕೆ ಶರಣಾಗಿದೆ. ನಿರ್ವಹಣೆ ಇಲ್ಲದೆ ಕಳೆದ ಕೆಲವು ವರ್ಷಗಳಿಂದ ಇಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ.ಸುಳ್ಯದ ಹೃದಯ ಭಾಗದಲ್ಲಿ ವಿಶಾಲವಾದ ಸ್ಥಳದಲ್ಲಿ ತಲೆ ಎತ್ತಿ ನಿಂತಿರುವ ಪುರಭವನ ಭೂತ ಬಂಗಲೆಯಂತಾಗಿದೆ.

ಪುರಭವನದ ಸ್ಥಿತಿ ಅಯೋಮಯ:
ಇದೀಗ ಪುರಭವನದ ಸ್ಥಿತಿ ಹೇಳ ತೀರದು.ಮಳೆ ಬಂದರೆ ನೀರೆಲ್ಲ ಒಳಗೆ ಸೇರುತ್ತಿದೆ, ಸ್ವಚ್ಛತೆ ಮರೆಯಾಗಿದೆ. ಮೇಲ್ಚಾವಣಿಯ ಸೀಟುಗಳು ಸೋರುತ್ತಿದ್ದು ಮಳೆ ನೀರು ಒಳಗೆ ಸಂಗ್ರಹವಾಗುತಿದೆ.
ಪುರಭವನದ ಕಟ್ಟಡ ಸಂಪೂರ್ಣ ಲೀಕೇಜ್ ಆಗಿ ಅಲ್ಲಲ್ಲಿ ನೀರು ಹರಿಯುತಿದೆ. ಬಾಲ್ಕನಿಯಲ್ಲಿಯೂ ನೀರು ತುಂಬಿದೆ. ಸುಣ್ಣ ಬಣ್ಣಗಳು ಮಾಸಿ ಹೋಗಿದೆ. ಸಿಮೆಂಟ್ ಛಾವಣಿ, ರೆಡ್ ಆಕ್ಸೈಡ್ ನೆಲಹಾಸು ಕೂಡಾ ಶಿಥಿಲಾವಸ್ಥೆಯಲ್ಲಿದೆ. ನೆಲ ಹಾಸು ಮಾಸಿ ಹೋಗಿ ಅಲ್ಲಲ್ಲಿ ಹೊಂಡ ಬಿದ್ದಿದೆ. ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮತ್ತಿತರ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತಿದೆ. ಸ್ವಚ್ಛತೆ ಸಂಪೂರ್ಣ ಮಾಯವಾಗಿದೆ. ಪುರಭವನದ ಸುತ್ತಲೂ ಪೈಪ್ಗಳನ್ನು ತುಂಬಿಡಲಾಗಿದೆ.
ಒಟ್ಟಿನಲ್ಲಿ ಪಾಳು ಬಿದ್ದಿರುವ ಪುರಭವನ ಜನಾಕರ್ಷಣೆಯಿಲ್ಲದೆ ಸೊರಗಿದೆ. ನಗರ ಪಂಚಾಯತ್ ಕಳೆದ 15-20 ವರ್ಷಗಳಲ್ಲಿ ಇಲ್ಲಿ ಲಕ್ಷಾಂತರ ರೂ ವ್ಯಯಿಸಿ ಹಲವು ಅಭಿವೃದ್ಧಿ ಕಾರ್ಯ ಮಾಡಿದರೂ ನಗರ ಪಂಚಾಯತ್ಗೆ ಯಾವುದೇ ಆರ್ಥಿಕ ಆದಾಯ ಇಲ್ಲದ ಸ್ಥಿತಿ ಉಂಟಾಗಿದೆ.

ಡಾ.ಕುರುಂಜಿವರ ನೇತೃತ್ವದಲ್ಲಿ ನಿರ್ಮಾಣ:
ಸುಳ್ಯಕ್ಕೆ ಒಂದು ಸುಸಜ್ಜಿತ ಸಭಾಭವನ ಬೇಕು ಎಂಬ ನಿಟ್ಟಿನಲ್ಲಿ 3-4 ದಶಕಗಳ ಹಿಂದೆ ಸುಳ್ಯದಲ್ಲಿ ಪುರಭವನ ನಿರ್ಮಾಣದ ಚಿಂತನೆ ಆರಂಭಗೊಂಡಿತ್ತು. ಬಳಿಕ ಆಧುನಿಕ ಸುಳ್ಯದ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡರ ನೇತೃತ್ವದಲ್ಲಿ ಸುಂದರ ಪುರಭವನ ನಿರ್ಮಾಣಗೊಂಡು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಂಡಿತು. ಇದು ಬಳಿಕ ಕೆ.ವಿ.ಜಿ. ಪುರಭವನ ಎಂದೇ ನಾಮಕರಣಗೊಂಡಿತು.
ಕೆವಿಜಿ ಅವರ ಅಧ್ಯಕ್ಷತೆಯ ಕಟ್ಟಡ ನಿರ್ಮಾಣ ಸಮಿತಿಯ ನೇತೃತ್ವದಲ್ಲಿ ಪುರಭವನ ನಿರ್ಮಾಣಗೊಂಡು ಬಳಿಕ ಪುರಭವ ಅಭಿವೃದ್ಧಿ ಸಮಿತಿ ಮತ್ತು ಪುರಭವನ ಸಲಹಾ ಸಮಿತಿಯ ಮುಖಾಂತರ ನಿರ್ವಹಣೆ ಮಾಡಲಾಗುತ್ತಿತ್ತು. ಬಳಿಕ 2005ರಲ್ಲಿ ಕೆ.ವಿ.ಜಿ ಪುರಭವನವನ್ನು ನಗರ ಪಂಚಾಯತ್ಗೆ ಹಸ್ತಾಂತರ ಮಾಡಲಾಯಿತು.

ನ.ಪಂ.ವತಿಯಿಂದ ಹಲವು ಕಾಮಗಾರಿ:
ಪುರಭವನ ನಗರ ಪಂಚಾಯತಿಗೆ ಹಸ್ತಾಂತರವಾದ ನಂತರ 15-20 ವರ್ಷದಲ್ಲಿ ಪುರಭವನದಲ್ಲಿ ನಗರ ಪಂಚಾಯತ್ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿ ಲಕ್ಷಾಂತರ ರೂ.ವ್ಯಯಿಸಿದೆ. ವೇದಿಕೆ ಹಿಂಭಾಗದ ವಿಶ್ರಾಂತಿ ಗೃಹ, ಗ್ರೀನ್ ರೂಂ, ಅಡುಗೆ ಕೋಣೆ ರಚನೆ, ಪುರಭವನದ ಮುಂಭಾಗ ಇಂಟರ್ ಲಾಕ್ ಎಡಬದಿ ಕಾಂಕ್ರೀಟ್, ಶೌಚಾಲಯಗಳ ರಚನೆ, ಮಳೆ ಕೊಯ್ಲು ಯೋಜನೆ, ಇಂಗುಗುಂಡಿ, ನೀರಿನ ಟ್ಯಾಂಕ್, ಸ್ಲಾಬ್ ಸಹಿತ ಕಾಂಕ್ರೀಟ್ ಚರಂಡಿ, ಹೊಸ ಆವರಣ ಗೋಡೆ ಅಳವಡಿಕೆ, ಬಾಗಿಲು ಕಿಟಕಿಗಳ ಬದಲಾವಣೆ, ಪ್ಯಾನ್ ಗಳ ಬದಲಾವಣೆ, ಕೊಳವೆ ಬಾವಿ ರಚನೆ, ಕೈ ತೊಳೆಯುವ ಬೇಸಿನ್ ರಚನೆ ಮುಂತಾದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ ಎಂದು ನಗರ ಪಂಚಾಯತ್ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಕೆಲವು ವರ್ಷಗಳ
ಹಿಂದಿನವರೆಗೆ ಹತ್ತಾರು ಕಾರ್ಯಕ್ರಮಗಳು ನಡೆಯುತ್ತಿದ್ದ ಪುರಭವನದಲ್ಲಿ ಕೆಲ ವರ್ಷಗಳಿಂದ ಯಾವುದೇ ಕಾರ್ಯಕ್ರಮಗಳು ನಡೆಯುವುದಿಲ್ಲ. ಪುರಭವನ ಸಾರ್ವಜನಿಕರ ಉಪಯೋಗಕ್ಕೆ ಸೂಕ್ತವಾಗಿಲ್ಲ. ಸುಳ್ಯದ ಪುರಭವನವನ್ನು ವ್ಯವಸ್ಥಿತವಾಗಿ ಸುಸಜ್ಜಿತಗೊಳಿಸಬೇಕು ಮತ್ತು ತಾಲೂಕು ಕೇಂದ್ರದಲ್ಲಿರುವ ಈ ಪುರಭವನವನ್ನು ಸಾರ್ವಜನಿಕ ಸೇವೆಗೆ ಸಮರ್ಪಕವಾಗಿ ಒದಗಿಸುವ ದೃಷ್ಠಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬ ಬೇಡಿಕೆ ಇದೆ.

‘ಪುರಭವನವನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಕಳೆದ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಪುರಭವನ ಅಭಿವೃದ್ಧಿ ಬಗ್ಗೆ ನೀಲನಕ್ಷೆ ತಯಾರಿಸಲಾಗುವುದು. ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚಿಸಿ ಕ್ರಿಯಾ ಯೋಜನೆ ತಯಾರಿಸಲಾಗುವುದು
-ಸುಧಾಕರ ಎಂ.ಎಚ್.
ಮುಖ್ಯಾಧಿಕಾರಿ. ನ.ಪಂ.
‘ನಗರ ಪಂಚಾಯತ್ ಸರಿಯಾದ ನಿರ್ವಹಣೆ ಮಾಡದ ಕಾರಣ ಸುಳ್ಯ ಪುರಭವನ ಈ ಸ್ಥಿತಿಗೆ ಬಂದಿದೆ.
ಪುರಭವನ ಅಭಿವೃದ್ಧಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಕುರಿತು ಪ್ರಸ್ತಾವನೆ, ಕ್ರಿಯಾ ಯೋಜನೆ ಸಲ್ಲಿಸಲು ಸಚಿವರು ಸೂಚಿಸಿದ್ದರು. ಆದರೆ ನಗರ ಪಂಚಾಯತ್ ಅದನ್ನು ಕೂಡ ಫಾಲೋ ಆಪ್ ಮಾಡಿಲ್ಲ.
-ಕೆ.ಗೋಕುಲ್ದಾಸ್
ಮಾಜಿ ಉಪಾಧ್ಯಕ್ಷ
ನ.ಪಂ.ಸುಳ್ಯ.
‘ಸುಳ್ಯ ಟೌನ್ ಹಾಲ್ನ್ನು ಅಭಿವೃದ್ಧಿ ಪಡಿಸಿ ಹೈಟೆಕ್ ಸೌಲಭ್ಯಗಳೊಂದಿಗೆ ಹೊಸ ಟೌನ್ ಹಾಲ್ ನಿರ್ಮಾಣಕ್ಕೆ ಸರ್ಕಾರದ ನೆರವು ಪಡೆಯಲು ಸಾಧ್ಯವಿರುವ ಎಲ್ಲಾ ಪ್ರಯತ್ನ ನಡೆಸಬೇಕು
-ಶರೀಫ್ ಕಂಠಿ.
ಸುಳ್ಯ ನ.ಪಂ.ಸದಸ್ಯರು.
