ಸುಳ್ಯ: ಸುತ್ತಲೂ ಕಣ್ಣಾಡಿಸಿದರೆ ಕಾಣುವುದು ಹಚ್ಚ ಹಸಿರು ಹೊದ್ದು ಮಲಗಿದ ಅಗಾಧ ಪ್ರಕೃತಿಯ ರಮಣೀಯತೆ.. ಎಲ್ಲೆಲ್ಲೂ ಹರಡಿರುವ ಕೃಷಿ ತೋಟಗಳ ಹಸಿರ ಸೌಂದರ್ಯ ರಾಶಿ.. ಇನ್ನೊಂದೆಡೆ ಸುಳ್ಯ ನಗರದ ವಿಹಂಗಮ ನೋಟ.. ಹೀಗೆ ಬೆಟ್ಟ ಏರಿ ಕುರುಂಜಿಗುಡ್ಡೆ ತಲುಪಿದರೆ ಸುತ್ತಲೂ ಕಣ್ಣಿಗೆ ಹಬ್ಬ.. ಸುಳ್ಯ ನಗರದ ಅತೀ ಎತ್ತರದ ಪ್ರದೇಶ ಕುರುಂಜಿಗುಡ್ಡೆಗೆ ಬಂದರೆ ಕಣ್ಣು ಹಾಯಿಸಿದಷ್ಟೂ ಕಾಣುವ
ಮೋಹಕ ದೃಶ್ಯಗಳು. ಈ ಕುರುಂಜಿ ಗುಡ್ಟೆಗೆ ಮುಕುಟ ಮಣಿಯಾಗಿ ಕೆಲವು ವರ್ಷಗಳ ಹಿಂದೆ ಮನಮೋಹಕ ಪಾರ್ಕ್ ಒಂದು ನಿರ್ಮಾಣಗೊಂಡಿತ್ತು. ಸುಳ್ಯದ ‘ರಾಜಾಸೀಟ್’ ಆಗಬಹುದು ಎಂದು ನಿರೀಕ್ಷಿಸಲಾಗಿದ್ದ ಈ ಸೌಂದರ್ಯದ ಖನಿ ಈಗ ನಿರ್ವಹಣೆಯ ಕೊರತೆಯಿಂದ ಸೊರಗಿದೆ.
ಶೋಚನೀಯ ಪರಿಸ್ಥಿತಿ.!
ಸುಂದರವಾಗಿ ನಿರ್ಮಿಸಲಾಗಿದ್ದ ಪಾರ್ಕ್ನ ಸ್ಥಿತಿ ಈಗ ಶೋಚನೀಯವಾಗಿದೆ. ಪಾರ್ಕ್ನ ಸುತ್ತಲೂ, ಒಳಗೂ ಹೊರಗು ಎಲ್ಲೆಡೆ ಕಾಡು ಬೆಳೆದಿದೆ. ಕಾಡು,ಪೊದೆ, ಗಿಡಗಳೇ ತುಂಬಿದೆ. ಪಾರ್ಕ್ನ ಸುಂದರ ಹಸಿರು ಹುಲ್ಲು ರಾಶಿ ಮರೆಯಾಗಿದೆ. ಪಾರ್ಕ್ನ ಒಳಗೆ ನೆಡಲಾಗಿದ್ದ ಸೌಂದರ್ಯದ ಗಿಡಗಳು ಒಣಗಿ ಸೊರಗಿ ನಿಂತಿದೆ. ಪಾರ್ಕ್ನ ಸುತ್ತಲೂ
ಅಳವಡಿಸಿದ ರಕ್ಷಣಾ ಬೇಲಿಗಳು ನಾಶವಾಗಿದೆ. ಅಲ್ಲಲ್ಲಿ ಕಸದ ರಾಶಿಗಳು, ಮದ್ಯದ ಬಾಟಲಿಗಳು ರಾರಾಜಿಸುತ್ತಿದೆ. ಪಾರ್ಕ್ನ ಸ್ವಚ್ಛತೆ ಇಲ್ಲದಾಗಿದೆ. ಮಕ್ಕಳ ಪಾರ್ಕ್ನ ಆಟದ ಸಾಮಾಗ್ರಿಗಳು ಕೂಡ ನಿರ್ವಹಣೆ ಇಲ್ಲದೆ ಸೊರಗಿದೆ.ಇಲ್ಲಿ ರಾತ್ರಿ ಪಾರ್ಟಿಗಳು ನಡೆಯುತ್ತಿರುತ್ತವೆ. ತಡ ರಾತ್ರಿವರೆಗೂ ಹಲವರು ವಾಹನಗಳಲ್ಲಿ ಬಂದು ಹೋಗುತ್ತಿರುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.
ಸುಳ್ಯದ ಸುಂದರ ರಮಣೀಯ ತಾಣ:
ಸುಳ್ಯ ನಗರಕ್ಕೆ ಎಲ್ಲವೂ ಇದ್ದರೂ ಆರಾಮವಾಗಿ ಕುಳಿತು ವಿಶ್ರಾಂತಿ ಪಡೆಯಲು, ನಾಲ್ಕು ಹೆಜ್ಜೆ ವಾಕಿಂಗ್ ಮಾಡಲು ಒಂದು ಒಳ್ಳೆಯ ಉದ್ಯಾನವನ ಇಲ್ಲ ಎಂಬ ಕೊರಗು ಹಲವು ವರ್ಷಗಳಿಂದ ಕಾಡಿತ್ತು. ಹಲವು ವರ್ಷಗಳ ಯೋಚನೆ, ಯೋಜನೆಯ ಬಳಿಕ ಚಿಕ್ಕದಾದ ಮತ್ತು ಚೊಕ್ಕದಾದ ಪಾರ್ಕ್ ಕುರುಂಜಿಗುಡ್ಡೆಯ ನೆತ್ತಿಯಲ್ಲಿ ಕೆಲವು ವರ್ಷಗಳ ಹಿಂದೆ ತಲೆ ತಲೆ ಎತ್ತಿತ್ತು. ಸುಳ್ಯ ನಗರ ಪಂಚಾಯತ್ ವತಿಯಿಂದ ಸುಮಾರು 10ಲಕ್ಷ ರೂ ವೆಚ್ಚದಲ್ಲಿ ಉದ್ಯಾನ ರೂಪುಗೊಂಡಿತ್ತು. ಒಳಾಂಗಣ ಕ್ರೀಡಾಂಗಣದ ಮುಂಭಾಗದಲ್ಲಿ ಪಾರ್ಕ್ ನಿರ್ಮಿಸಲಾಗಿತ್ತು. ಮರ, ಗಿಡಗಳನ್ನು ನೆಟ್ಟು ಬೆಳೆಸಿ ಹುಲ್ಲು ಹಾಸು, ಹಲವು ವಿಧದ
ಆರಂಭದಲ್ಲಿ ಹೀಗಿತ್ತು ಕುರುಂಜಿ ಗುಡ್ಡೆ ಪಾರ್ಕ್
ಗಿಡಗಳನ್ನು ಬೆಳೆಸಿ ಹಸಿರು ಲೋಕ ಸೃಷ್ಠಿಸಲಾಗಿತ್ತು. ಪಾರ್ಕ್ನಲ್ಲಿ ಕುಳಿತುಕೊಳ್ಳಲು ಬೆಂಚುಗಳು, ನಡೆದಾಡಲು ಪಾಥ್ ವೇ ನಿರ್ಮಿಸಲಾಗಿತ್ತು. ರಕ್ಷಣಾ ಬೇಲಿಗಳನ್ನು ಅಳವಡಿಸಲಾಗಿದೆ. ಪಾರ್ಕ್ನ ಮಧ್ಯೆ ಅಲ್ಲಲ್ಲಿ ಇಂಟರ್ ಲಾಕ್ ಅಳವಡಿಸಲಾಗಿದೆ. ಮೆಟ್ಟಿಲುಗಳನ್ನು ನಿರ್ಮಿಸಲಾಗಿತ್ತು. ಮಕ್ಕಳಿಗಾಗಿ ಪ್ರತ್ಯೇಕ ಪಾರ್ಕ್ ಮಾಡಲಾಗಿತ್ತು. ಇಲ್ಲಿ ಉಯ್ಯಾಲೆ, ಜಾರುಬಂಡಿ, ತಿರುಗು ಬಂಡಿ ಮತ್ತಿತರ ವ್ಯವಸ್ಥೆಗಳನ್ನು ಒದಗಿಸಲಾಗಿದೆ.
ರಾಜಾಸೀಟ್ ನೆನಪಿಸುತಿದೆ..:
ಮೆಟ್ಟಿಲು ಏರಿ ಕುರುಂಜಿಗುಡ್ಡೆ ಪಾರ್ಕ್ನ ಮಧ್ಯೆ ನಿಂತಾಗ ಮಡಿಕೇರಿಯ ಪ್ರಸಿದ್ಧ ಉದ್ಯಾನವನ ರಾಜಾಸೀಟ್ನ್ನು ನೆನಪಿಸುತ್ತದೆ. ಮಡಿಕೇರಿಯ ರಾಜಾಸೀಟ್ ಮಾದರಿಯಲ್ಲಿ ಉದ್ಯಾನವನ ನಿರ್ಮಿಸಬೇಕು ಎಂಬ ಕಲ್ಪನೆಯಲ್ಲಿಯೇ ನಗರ ಪಂಚಾಯತ್ ಪಾರ್ಕ್ ನಿರ್ಮಾಣ ಮಾಡಲು ಯೋಜನೆ ರೂಪಿಸಿತ್ತು. ಕೆಲವು ವರ್ಷಗಳ ಹಿಂದೆ ಕುರುಂಜಿಗುಡ್ಡೆಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಆರಂಭಿಸಿದಾಗ ಎದುರಿನ ಜಾಗವನ್ನು ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಬಳಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಯೋಜನೆ ರೂಪಿಸಿತ್ತು. ಹಲವು ವರ್ಷಗಳ ಯೋಜನೆಯ
ಬಳಿಕ ಪಾರ್ಕ್ ಮೂರ್ತ ರೂಪಕ್ಕೆ ಬಂದಿತ್ತು.
ಪಾರ್ಕ್ ಪೂರ್ಣಗೊಳ್ಳಲು ಇನ್ನೂ ಕೆಲವು ಕಾಮಗಾರಿಗಳು ಆಗಬೇಕಿತ್ತು. ಅದಕ್ಕಾಗಿ ಯೋಜನೆ ರೂಪಿಸಲಾಗಿತ್ತು.ಒಳಾಂಗಣ ಕ್ರೀಡಾಂಗಣದ ಕೆಳಭಾಗಲ್ಲಿ ವಾಕಿಂಗ್ ಮಾಡಲು ಪುಟ್ಪಾತ್ ನಿರ್ಮಾಣ, ಪಾರ್ಕ್ ಮುಂಭಾಗದಲ್ಲಿ ಕಮಾನು ನಿರ್ಮಾಣ ಮತ್ತಿತರ ಕೆಲವು ಕಾಮಗಾರಿಗಳು ನಡೆಸಬೇಕು ಎಂಬ ಬೇಡಿಕೆ ಉಳಿದಿತ್ತು. ಪಾರ್ಕ್ನ ಸುತ್ತಲೂ ಬೆಂಚು ನಿರ್ಮಿಸಿ, ಹುಲ್ಲು ಹಾಸು ಹಾಕಿ ಪಾರ್ಕ್ ಮಾಡಿ ಮಧ್ಯದಲ್ಲಿ ಒಂದು ಚಿಮ್ಮುವ ಕಾರಂಜಿ, ಎದುರಿನ ಗೋಡೆಯನ್ನು ಕಲಾತ್ಮಕವಾಗಿ ರೂಪಿಸುವ ಮಾಡುವ ಬಗ್ಗೆಯೂ ಯೋಜನೆ ರೂಪಿಸಲಾಗಿತ್ತು. ಆದರೆ ಅದು ಯಾವುದೂ ಕೈಗೂಡಲಿಲ್ಲ.
ವಿಶ್ರಾಂತಿಗೆ ಪ್ರಶಾಂತ ಸ್ಥಳ:
ಕುರುಂಜಿಗುಡ್ಡೆ ಪಾರ್ಕ್ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ವಿರಾಮದ ವೇಳೆಯನ್ನು ಕಳೆಯಲು, ವಿಶ್ರಾಂತಿ ಪಡೆಯಲು ಅತ್ಯಂತ ಸೂಕ್ತ ಸ್ಥಳ. ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವವರಿಗೂ ಅನುಕೂಲವಾಗಿತ್ತು. ಎತ್ತರದ ಪಾರ್ಕ್ನಲ್ಲಿ ಕುಳಿತು ನೋಡಬಹುದಾದ ವಿಹಂಗಮ ನೋಟ ಮನ ತಣಿಸುತ್ತದೆ. ವಿಶ್ರಾಂತಿಯ ಸಮಯವನ್ನು ಕಳೆಯಲು ಅತೀ ಸೂಕ್ತ ಸ್ಥಳ ಎಂದು ಇಲ್ಲಿಗೆ ಬರುವ ಸಾರ್ವಜನಿಕರು ಸಾಕ್ಷೀಕರಿಸುತ್ತಾರೆ.
ಆದರೆ ಲಕ್ಷಾಂತರ ರೂ ಖರ್ಚು ಮಾಡಿ ಪಾರ್ಕ್ ನಿರ್ಮಿಸಿದರೂ ಅದು ನಿರ್ವಹಣೆ ಇಲ್ಲದೆ ಪಾಳು ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು
ತಪ್ಪಿಸಲು ಸಮರ್ಪಕವಾದ ನಿರ್ವಹಣೆ ಅತೀ ಅಗತ್ಯ. ಅಲ್ಲದೆ ಪಾರ್ಕ್ನಲ್ಲಿ ಕಸ, ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದು , ಮಲಿನಗೊಳಿಸುವುದಕ್ಕೆ ಕಡಿವಾಣ ಹಾಕುವುದು ಅತೀ ಅಗತ್ಯವಾಗಿದೆ. ಅದಕ್ಕಾಗಿ ನಿರ್ವಹಣೆ ಮತ್ತು ಉಸ್ತುವಾರಿಗೆ ಜನ ನಿಯೋಜನೆ ಮಾಡುವ ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಚೆನ್ನಾಗಿ ನಿರ್ವಹಣೆ ಮಾಡಿ, ಅಗತ್ಯ ಮೂಲ ಸೌಕರ್ಯ ಒದಗಿಸಿ, ಪ್ರವೇಶ ಫೀಸ್ ಏರ್ಪಡಿಸಿದರೆ ನ.ಪಂ.ಗೆ ಆದಾಯವೂ ಬರಬಹುದು ಎಂಬುದು ಜನರ ಅಭಿಪ್ರಾಯ
ಕುರುಂಜಿಗುಡ್ಡೆ ಪಾರ್ಕ್ಗೆ ಪ್ರವೇಶಕ್ಕೆ ಸಮಯ ನಿಗದಿಪಡಿಸಬೇಕು, ನಾಮಫಲಕ ಅಳವಡಿಸಬೇಕು ಮತ್ತು ಪಾರ್ಕನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು ಎಂದು ಕೇರ್ಪಳ ಪಯಸ್ವಿನಿ ಯುವಕ ಮಂಡಲದ ವತಿಯಿಂದ ನ.ಪಂ. ಆಡಳಿತಾಧಿಕಾರಿಗಳಾದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ.