ನವದೆಹಲಿ: ನೈರುತ್ಯ ಮುಂಗಾರು ಇಡೀ ದೇಶವನ್ನು ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.
ಮಂಗಳವಾರ ರಾಜಸ್ಥಾನ, ಹರಿಯಾಣ, ಪಂಜಾಬ್ ರಾಜ್ಯಗಳನ್ನು ಪ್ರವೇಶ ಮಾಡಿದೆ. ಈ ಮೂಲಕ ಜುಲೈ 2ರಂದು ಮುಂಗಾರು ಇಡೀ ದೇಶವನ್ನು
ಆವರಿಸಿದಂತಾಗಿದೆ. ಸಾಮಾನ್ಯವಾಗಿ ಜುಲೈ 8ರಂದು ಮುಂಗಾರು ದೇಶವನ್ನು ವ್ಯಾಪಿಸುತ್ತಿತ್ತು. ಇದೀಗ ವಾಡಿಕೆಗಿಂತ ಆರು ದಿನಗಳ ಮೊದಲೇ ದೇಶದ ಎಲ್ಲೆಡೆ ಪ್ರವೇಶಿಸಿದೆ ಎಂದು ಇಲಾಖೆ ಹೇಳಿದೆ.
ಮೇ 30ರಂದು ಮುಂಗಾರು ಕೇರಳವನ್ನು ಪ್ರವೇಶಿಸಿತ್ತು. ಮಹಾರಾಷ್ಟ್ರದವರೆಗೆ ತಲುಪಿದ ಬಳಿಕ ವೇಗ ಕಳೆದುಕೊಂಡಿತ್ತು. ಪರಿಣಾಮ ವಾಯವ್ಯ ಭಾರತದಲ್ಲಿ ತಾಪಮಾನ ಏರಿಕೆಯಾಗಿತ್ತು. ಕ್ರಮೇಣ ವೇಗ ಪಡೆದ ಮುಂಗಾರು ವಾಡಿಕೆಗಿಂತ ಆರು ದಿನಗಳ ಮೊದಲೇ ದೇಶವನ್ನು ವ್ಯಾಪಿಸಿದೆ.ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಕೆಲವು ದಿನ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.