ಸುಳ್ಯ:ಇಂದು ನಿಧನರಾದ ಸುಜನಾರವರು ಸುಳ್ಯದ ಸಾಂಸ್ಕೃತಿಕ ನೆಲೆಯ ಹೆಗ್ಗುರುತು,ತಾನಲ್ಲದೇ ತನ್ನ ಕುಟುಂಬದ ಮೂಲಕವೂ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸಲು ಕಾರಣರಾದವರು. ಯಕ್ಷಗಾನದ ಮೂಲಕ ತನ್ನ ಅಸ್ಥಿತ್ವವನ್ನು ಜಾಹಿರುಗೊಳಿಸಿದರೂ ಸುಳ್ಯದಲ್ಲೊಂದು ಕಲಾ ಜಗತ್ತನ್ನು ತೆರೆದಿಡಲು ಕಾರಣರಾದವರು. ಎಲ್ಲಕ್ಕಿಂತಲೂ ಮುಖ್ಯವಾಗಿ
ಅವರ ಜೀವನೋತ್ಸಾಹ, ಕಲೆಯನ್ನು ಪ್ರೀತಿಸುವ ಅಗಾಧ ಮನಸ್ಥಿತಿ ಹೊಸ ತಲೆಮಾರಿಗೆ ಪ್ರೇರಣೆಯಾದದ್ದು ಎಂದು ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಹಾಗು ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ಸ್ಥಾಪಕ ಸಂಚಾಲಕ ಡಾ.ಸುಂದರ ಕೇನಾಜೆ ಹೇಳಿದ್ದಾರೆ. ಸುಜನಾರವರ ಯಕ್ಷಗಾನ ಪಾತ್ರವನ್ನು ಹತ್ತಿರದಿಂದ ನೋಡಿ ಆನಂದಿಸುವ ಸ್ಥಿತಿ ನನ್ನಂತವನ ಅರಿವಿನ ಕಾಲಘಟ್ಟದಲ್ಲಿ ಸಾಧ್ಯವಾಗದಿದ್ದರೂ ಕಲೆಯ ಬಗೆಗಿನ ಅಧಮ್ಯ ಆಸಕ್ತಿಯ ಸೂಕ್ಷ್ಮಗಳನ್ನು ಮತ್ತು ಜೀವನ ಪ್ರೀತಿಯನ್ನು ಹತ್ತಿರದಿಂದ ಕಂಡಿದ್ದೇನೆ. ಮಾತು ಮತ್ತು ಚಲನೆಯ ತೊಂದರೆಗಳ ಮಧ್ಯೆಯೂ ಕಲೆ, ಕಲಾವಿದರು ಮತ್ತು ಕಲಾರಾಧನೆಯ ಅವರಲ್ಲಿ ಮನಸ್ಥಿತಿ ಗಾಢವಾಗಿತ್ತು. ರಂಗಮನೆಯ ನಿರ್ವಹಣೆಯ ಹಿಂದಿನ ಬೆನ್ನೆಲುಬಾಗಿ ಅಷ್ಟೂ ವರ್ಷಗಳ ಕಾಲ ಓಡಾಡುತ್ತಿದ್ದುದ್ದನ್ನು ಹತ್ತಿರದಿಂದ ಕಂಡಿದ್ದೇನೆ.
ನಾನು ತಿಳಿದಂತೆ ಸುಜನಾ ತನ್ನ ಕಲಾ ಜೀವನದಲ್ಲಿ ಕೇವಲ ಕಲಾವಿದನಾಗಿ ಮಾತ್ರ ಬೆಳೆದದ್ದಲ್ಲ, ಇನ್ನೂ ಅನೇಕರನ್ನು ಬೆಳೆಸುವ ಶಕ್ತಿಯಾಗಿಯೂ ಆ ಪರಂಪರೆಯನ್ನು ಮುಂದುವರಿಸುವ ಪ್ರೇರಣೆಯಾಗಿಯೂ ಕೆಲಸ ಮಾಡಿದ್ದಾರೆ. ಯಕ್ಷಗಾನ ರಂಗದ ನಡೆಯ ಬಗ್ಗೆ ಅಧಿಕೃತವಾದ ಅರಿವನ್ನು ಬೆಳೆದಿದ್ದ ಸುಜನಾ ಹೊಸ ತಲೆಮಾರಿನ ಅನೇಕ ಕಲಾವಿದರಿಗೆ ಮಾರ್ಗದರ್ಶಕರಾಗಿ, ಗುರುಗಳಾಗಿ ಕೆಲಸ ಮಾಡಿದ್ದಾರೆ. ಅವರ ಹಾಸ್ಯದ ಬಗ್ಗೆ ಅನೇಕ ಹಿರಿಯರು ಇಂದೂ ಮನದುಂಬಿ ನೆನಪಿಸುತ್ತಾರೆ. ಅತ್ಯಂತ ಸಹ್ಯ ಮತ್ತು ಪ್ರಬುದ್ಧ ಹಾಸ್ಯವನ್ನು ರಂಗದಲ್ಲಿ ಅಭಿವ್ಯಕ್ತಿಸುತ್ತಿದ್ದ ಸುಜನಾ, ವಿಟ್ಲ ಜೋಶಿಯವರ ಪರಂಪರೆಯನ್ನು ಮುಂದುವರಿಸಿದವರು ಎಂಬ ಮಾತನ್ನೂ ಕೇಳಿದ್ದೇನೆ. ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ತನ್ನ ದೈಹಿಕ ತೊಂದರೆಯ ಮಧ್ಯೆಯೂ ಅವರಿಗೆ ಬದುಕಲು ಸಾಧ್ಯವಾಗಿದ್ದರೆ ಅವರ ಅಂತರಂಗದಲ್ಲಿದ್ದ ಪರಿಶುದ್ದ ಹಾಸ್ಯ ಪ್ರಜ್ಞೆಯಿಂದಲೇ ಆಗಿರಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ.ಕಲಾವಿದತ್ವದ ನೆಲೆಯ ಅಂತಃಶಕ್ತಿ ಮತ್ತು ರಂಗಮನೆಯ ಸಾಂಸ್ಕೃತಿಕ ಅನಾವರಣದ ಹಿಂದಿನ ಧೀಶಕ್ತಿಯಾಗಿದ್ದ ಸುಜನಾ ಸುಳ್ಯರವರ ನಿಧನ ಪರಂಪರೆಯ ಯಕ್ಷಗಾನ ಮತ್ತು ಶಕ್ತಿಯುತ ಸಾಂಸ್ಕೃತಿಕ ಪರಂಪರೆಯೊಂದರ ಅಂತ್ಯ ಮತ್ತು ನಷ್ಟ ಎರಡೂ ಆಗಿದೆ. ಅವರ ಹೆಸರಿನಲ್ಲಿ ಜೀವನ್ ರಾಂ ಸುಳ್ಯರವರು ಸ್ಥಾಪಿಸಿದ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ಸ್ಥಾಪಕ ಸಂಚಾಲಕನಾಗಿ ಒಂದಷ್ಟು ಕಾಲ ಕೆಲಸ ಮಾಡುವ ಸುಯೋಗ ನನ್ನಂತವನ ಪಾಲಿಗೆ ಸಿಕ್ಕಿದ್ದಕಾಗಿ ಕೃತಜ್ಞತೆ ಸಲ್ಲಿಸುತ್ತಾ ನೂರು ಪೂರೈಸುತ್ತಾರೋ ಎಂಬ ನಿರೀಕ್ಷೆಯ ಮಧ್ಯೆಯೂ ಅವರಿಂದು ನಮ್ಮನ್ನಗಲಿದ್ದಾರೆ. ಅವರಿಗೆ ಗೌರವದ ನಮನಗಳನ್ನು ಸಲ್ಲಿಸುತ್ತೇನೆ.















