ಲಖನೌ: ಬೆಟ್ಟಂದತಾ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ವಿರುದ್ಧ 42 ರನ್ ಅಂತರದ ಸೋಲನುಭವಿಸಿತು. ಈ ಸೋಲಿನಿಂದ ಅಂಕ ಪಟ್ಟಿಯಲ್ಲಿ ಆರ್ಸಿಬಿ ಮೂರನೇ ಸ್ಥಾನಕ್ಕೆ ಕುಸಿಯಿತು.
ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಇಶಾನ್ ಕಿಶನ್ ಬಿರುಸಿನ ಅರ್ಧಶತಕದ (94*) ನೆರವಿನಿಂದ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 231 ರನ್ಗಳ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ
ಆರ್ಸಿಬಿ 19.5 ಓವರ್ಗಳಲ್ಲಿ 189 ರನ್ ಗಳಿಸಿ ಆಲ್ ಔಟ್ ಆಯಿತು. ಆರ್ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಬಿರುಸಿನ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ ಇವರು 7 ಓವರ್ಗಳಲ್ಲಿ 80 ರನ್ ಜೊತೆಯಾಟ ನೀಡಿದರು. ಅರ್ಧ ಶತಕ ಸಿಡಿಸಿದ ಸಾಲ್ಟ್ 32 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 62 ರನ್ ಬಾರಿಸಿದರೆ, ಕೊಹ್ಲಿ 25 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 43 ರನ್ ಬಾರಿಸಿದರು. 11 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಗೆಲುವಿನೆಡಗೆ ಸಾಗಿದ್ದ ಆರ್ಸಿಬಿ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯದಿಂದ ಸೋಲನುಭವಿಸುಂತಾಯಿತು. ಕೇವಲ 17 ರನ್ ಅಂತರದಲ್ಲಿ 7 ಮಂದಿ ಪೆವಿಲಿಯನ್ ಸೇರಿದರು.
ಮಾಯಾಂಕ್ ಅಗರ್ವಾಲ್ 11, ರಜತ್ ಪಾಟಿದಾರ್ 18, ಜಿತೇಶ್ ಶರ್ಮ 24, ರೊಮೆರಿಯೋ ಶೆಪರ್ಡ್ 0, ಟಿಮ್ ಡೇವಿಡ್ 1 ರನ್ ಗಳಿಸಿ ಪೆವಿಲಿಯನ್ ಸೇರಿದರು. ಪ್ಯಾಟ್ ಕಮಿನ್ಸ್ 3 ವಿಕೆಟ್ ಪಡೆದರು. ಈ ಸೋಲಿನೊಂದಿಗೆ ಅಂಕ ಪಟ್ಟಿಯಲ್ಲಿ ಪ್ರಥಮ ಸ್ಥಾನಕ್ಕೇರುವ ಆರ್ಸಿಬಿ ಕನಸು ಭಗ್ನಗೊಂಡಿತು. ಮಾತ್ರವಲ್ಲದೆ 13 ಪಂದ್ಯಗಳಿಂದ 16 ಅಂಕ ಪಡೆದು ಮೂರನೇ ಸ್ಥಾನಕ್ಕೆ ಕುಸಿಯಿತು
ಟಾಸ್ ಗೆದ್ದ ಆರ್ಸಿಬಿ ಉಸ್ತುವಾರಿ ನಾಯಕ ಜಿತೇಶ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.ಆದರೆ ಆರ್ಸಿಬಿ ಯೋಜನೆಗಳೆಲ್ಲ ಆರಂಭದಲ್ಲೇ ತೆಲೆಕೆಳಗಾದವು.
ಓಪನರ್ಗಳಾದ ಅಭಿಷೇಕ್ ಶರ್ಮಾ (34) ಹಾಗೂ ಟ್ರಾವಿಸ್ ಹೆಡ್ (17) ಬಿರುಸಿನ ಆರಂಭವೊದಗಿಸಿದರು. ನಾಲ್ಕು ಓವರ್ಗಳಲ್ಲೇ 54 ರನ್ಗಳ ಜೊತೆಯಾಟ ಕಟ್ಟಿದರು.ಬಳಿಕ ಕ್ರೀಸಿಗಿಳಿದ ಇಶಾನ್ ಕಿಶನ್ ಬಿರುಸಿನ ಆಟದ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು.
ಅವರಿಗೆ ಹೆನ್ರಿಚ್ ಕ್ಲಾಸೆನ್ (24) ಹಾಗೂ ಅನಿಕೇತ್ ವರ್ಮಾ (26) ಅವರಿಂದಲೂ ಉತ್ತಮ ಬೆಂಬಲ ದೊರಕಿತು. ಈ ನಡುವೆ ನಿತೀಶ್ ಕುಮಾರ್ ರೆಡ್ಡಿ (4) ಹಾಗೂ ಅಭಿನವ್ ಮನೋಹರ್ (12) ಹಿನ್ನಡೆ ಅನುಭವಿಸಿದರು.ಅತ್ತ ಆರ್ಸಿಬಿ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಇಶಾನ್, ಮೈದಾನದ ಎಲ್ಲ ದಿಕ್ಕಿಗೂ ಚೆಂಡನ್ನು ಅಟ್ಟಿದರು. ಅಂತಿಮವಾಗಿ 94 ರನ್ ಗಳಿಸಿ ಔಟಾಗದೆ ಉಳಿದರು.
48 ಎಸೆತಗಳನ್ನು ಎದುರಿಸಿದ ಇಶಾನ್ ಇನಿಂಗ್ಸ್ನಲ್ಲಿ ಏಳು ಬೌಂಡರಿ ಹಾಗೂ ಐದು ಸಿಕ್ಸರ್ಗಳು ಸೇರಿದ್ದವು. ಇನ್ನುಳಿದಂತೆ ನಾಯಕ ಪ್ಯಾಟ್ ಕಮಿನ್ಸ್ 13 ರನ್ ಗಳಿಸಿ ಅಜೇಯರಾಗುಳಿದರು.
ಆರ್ಸಿಬಿ ಪರ ರೊಮರಿಯೊ ಶೆಫಾರ್ಡ್ ಎರಡು ವಿಕೆಟ್ ಗಳಿಸಿದರು.