ಸುಳ್ಯ: ಸರಕಾರಿ ಆಸ್ಪತ್ರೆಯ ವಠಾರದಲ್ಲಿರುವ ಜನೌಷಧಿ ಕೇಂದ್ರಗಳನ್ನು ಯಥಾ ಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸರಕಾರ ಆಸ್ಪತ್ರೆಯ ರೋಗಿಗಗಳಿಗೆ ಉಚಿತ ಔಷಧಿ ನೀಡಿ ಅದಕ್ಕೆ ಏನೂ ತಕರಾರಿಲ್ಲ. ಜನೌಷಧಿ ಕೇಂದ್ರಗಳಿಂದ
ಸಾರ್ವಜನಿಕರಿಗೆ ಹೆಚ್ಚು ಪ್ರಯೋಜನಕಾರಿ. ಕೇಂದ್ರ ಸರಕಾರ 15 ಸಾವಿರ ಜನೌಷಧಿ ಕೇಂದ್ರಗಳನ್ನು ಆರಂಭಿಸಿದೆ, ಇನ್ನೂ 10 ಸಾವಿರ ಕೇಂದ್ರಗಳನ್ನು ಆರಂಭಿಸಲಿದೆ. ಆದುದರಿಂದ ರಾಜ್ಯ ಸರಕಾರ ಈಗ ಇರುವ ಕೇಂದ್ರಗಳನ್ನು ಮುಂದುವರಿಸುವುದರ ಜೊತೆಗೆ ಇನ್ನಷ್ಟು ಜನೌಷಧಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.
ಅಡಿಕೆ ಹಳದಿ ರೋಗಕ್ಕೆ ಪೂರ್ಣ ಪ್ರಮಾಣದ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗಿಲ್ಲ, ನಿರಂತರ ಸಂಶೋಧನೆಗಳು ನಡೆಯುತ್ತಲೇ ಇದೆ. ಕೇಂದ್ರ ಹಾಗು ರಾಜ್ಯ ಸರಕಾರ ಹಂತ ಹಂತವಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಲಿದೆ ಎಂದರು. ಭಯೋತ್ಪಾದನೆ ವಿರುದ್ಧ ಭಾರತ ಎದ್ದು ನಿಂತಿದೆ. ಭಯೋತ್ಪಾದಕರ ಅಡಗು ತಾಣಗಳನ್ನು ನಾಶಪಡಿಸಲು ಆಪರೇಷನ್ ಸಿಂಧೂರ್ ಮೂಲಕ ಸಾಧ್ಯವಾಗಿದೆ. ಭಯೋತ್ಪಾದನೆ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಭಾರತ ಕೈಗೊಳ್ಳಲಿದೆ ಎಂದರು.