ಲಖನೌ: ಸನ್ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಪಂದ್ಯದಲ್ಲಿ ಆರು ವಿಕೆಟ್ಗಳಿಂದ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿತು.ಈ ಸೋಲಿನೊಂದಿಗೆ ಲಖನೌ ತಂಡದ ಪ್ಲೇಆಫ್ ಅವಕಾಶದ ಬಾಗಿಲು ಮುಚ್ಚಿತು. ಗುಜರಾತ್ ಟೈಟನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಈಗಾಗಲೇ ಪ್ಲೇ ಆಫ್ಗೆ ಟಿಕೆಟ್ ಪಡೆದಿವೆ. ಕ್ಷೀಣ ಅವಕಾಶ ಹೊಂದಿದ್ದ ಲಖನೌ ತಂಡ ಹೊರಬಿದ್ದ ಕಾರಣ
ಉಳಿದ ಒಂದು ಸ್ಥಾನಕ್ಕೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಪೈಪೋಟಿಯಿದೆ. ಇದೇ 21ರಂದು ಈ ತಂಡಗಳು ಮುಖಾಮುಖಿಯಾಗಲಿದ್ದು, ಆ ಪಂದ್ಯ ನಿರ್ಣಾಯಕವಾಗುವ ಸಾಧ್ಯತೆಯಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಲಖನೌ ತಂಡ 7 ವಿಕೆಟ್ಗೆ 205 ರನ್ಗಳ ಸವಾಲಿನ ಮೊತ್ತ ಗಳಿಸಿತ್ತು. ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡವು 10 ಎಸೆತಗಳು ಬಾಕಿ ಇರುವಂತೆ 4 ವಿಕೆಟ್ಗೆ 206 ರನ್ ಗಳಿಸಿ ಸಂಭ್ರಮಿಸಿತು. ಈ ಮೊದಲೇ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿರುವ ಹಾಲಿ ರನ್ನರ್ಸ್ ಅಪ್ ಹೈದರಾಬಾದ್ ತಂಡಕ್ಕೆ ಇದು 12 ಪಂದ್ಯಗಳಲ್ಲಿ ನಾಲ್ಕನೇ ಗೆಲುವಾಗಿದೆ.ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ (59; 20ಎ, 4×4, 6×6) ಅವರ ಬಿರುಸಿನ
ಅರ್ಧಶತಕ, ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಉಪಯುಕ್ತ ಕೊಡುಗೆಯ ನೆರವಿನಿಂದ ಹೈದ್ರಾಬಾದ್ ಗೆಲುವಿನ ನಗೆ ಬೀರಿತು.ಟ್ರಾವಿಸ್ ಹೆಡ್ ಬದಲು ಅವಕಾಶ ಪಡೆದ ಅಥರ್ವ ತೈಡೆ (13) ಅವರು ಅಭಿಷೇಕ್ ಜೊತೆ ಇನಿಂಗ್ಸ್ ಆರಂಭಿಸಿದರು. ತೈಡೆ ಬೇಗ ನಿರ್ಗಮಿಸಿದರೂ ಅಭಿಷೇಕ್ ಅವರನ್ನು ಸೇರಿಕೊಂಡ ಇಶಾನ್ ಕಿಶನ್ (35) ಎರಡನೇ ವಿಕೆಟ್ ಜೊತೆಯಾಟದಲ್ಲಿ ವೇಗದ 82 (35 ಎಸೆತ) ರನ್ ಸೇರಿಸಿ ಗೆಲುವಿಗೆ ಮುನ್ನುಡಿ ಬರೆದರು.ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ (47;28ಎ) ಮತ್ತು ಕಮಿಂದು ಮೆಂಡಿಸ್ (32;21ಎ) ಜವಾಬ್ದಾರಿಯ ಆಟವಾಡಿದರು. ಇದಕ್ಕೆ ಮೊದಲು ಲಖನೌ ತಂಡವನ್ನು ಎಂದಿನಂತೆ ಮೂವರು ಪ್ರಮುಖ ಆಟಗಾರರು ಆಧರಿಸಿದರು. ಆರಂಭ ಆಟಗಾರರಾದ ಮಿಚೆಲ್ ಮಾರ್ಷ್ (65, 39 ಎ, 4×6, 6×6) ಮತ್ತು ಏಡನ್ ಮರ್ಕರಂ (61, 38 ಎ, 4×4, 6×4) ಅವರು ಮೊದಲ ವಿಕೆಟ್ಗೆ 115 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ನಿಕೋಲಸ್ ಪೂರನ್ ಉಪಯುಕ್ತ 45 ರನ್ ಗಳಿಸಿದರು.ಕೊನೆಯ ಹಂತದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ರನ್ವೇಗಕ್ಕೆ ಒಂದಿಷ್ಟು ಕಡಿವಾಣ ಹಾಕಿತು. ಮೊದಲ 10 ಓವರುಗಳ ಆಟದಲ್ಲಿ ವಿಕೆಟ್ ನಷ್ಟವಿಲ್ಲದೇ 108 ರನ್ ಗಳಿಸಿದ್ದ ಲಖನೌ ದೊಡ್ಡ ಮೊತ್ತ ಪೇರಿಸುವಂತೆ ಕಂಡಿತ್ತು. ಆದರೆ ಸನ್ರೈಸರ್ಸ್ ಬೌಲರ್ಗಳು ಕೊನೆಯ 10 ಓವರುಗಳಲ್ಲಿ 97 ರನ್ ಬಿಟ್ಟುಕೊಟ್ಟರೂ 7 ವಿಕೆಟ್ಗಳನ್ನು ಪಡೆದು ಆತಿಥೇಯ ತಂಡಕ್ಕೆ ಕಡಿವಾಣ ಹಾಕಿದರು. ನಾಯಕ ರಿಷಭ್ ಪಂತ್ (7) ಅವರ ವೈಫಲ್ಯ ಮುಂದುವರಿಯಿತು.