ಲಂಡನ್:ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ಚಾಂಪಿಯನ್ ಪಟ್ಟಕ್ಕೇರಿತು.ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 282 ರನ್ ಗುರಿ ಪಡೆದ ತೆಂಬಾ ಬವುಮಾ ಪಡೆಗೆ ಆರಂಭಿಕ ಏಡನ್ ಮರ್ಕರಂ ಆಸರೆಯಾದರು. ಅವರ ಶತಕದಾಟದ ಬಲದಿಂದ ದ.ಆಫ್ರಿಕಾ ತಂಡ 5 ವಿಕೆಟ್ಗಳನ್ನು ಕಳೆದುಕೊಂಡು 285 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಸವಾಲಿನ ಗುರಿ ಎದುರು ಮೂರನೇ ದಿನ
ಬ್ಯಾಟಿಂಗ್ ಆರಂಭಿಸಿದ ಆಫ್ರಿಕನ್ನರಿಗೆ ವೇಗಿ ಮಿಚೇಲ್ ಸ್ಟಾರ್ಕ್ ಆರಂಭದಲ್ಲೇ ಪೆಟ್ಟು ನೀಡಿದರು. ಮರ್ಕರಂ ಜೊತೆ ಕ್ರೀಸ್ಗಿಳಿದ ರಿಯಾನ್ ರಿಕೆಲ್ಟನ್ ಕೇವಲ 6 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
2ನೇ ವಿಕೆಟ್ ಪಾಲುದಾರಿಕೆಯಲ್ಲಿ ವಿಯಾನ್ ಮುಲ್ಡರ್ (27 ರನ್) ಜೊತೆಗೂಡಿ 61 ರನ್ ಕೂಡಿಸಿದ ಅವರು, 3ನೇ ವಿಕೆಟ್ ಪಾಲುದಾರಿಕೆಯಲ್ಲಿ ನಾಯಕ ತೆಂಬಾ ಜೊತೆ 147 ರನ್ ಕಲೆಹಾಕಿದರು. 134 ಎಸೆತಗಳಲ್ಲಿ 66 ರನ್ ಗಳಿಸಿದ್ದ ತೆಂಬಾ ಔಟಾದರು. ಶತಕ ಸಿಡಿಸಿದ ಮರ್ಕರಂ 207 ಎಸೆತಗಳಲ್ಲಿ 136 ರನ್ ಗಳಿಸಿದರು. ಕೊನೆಯಲ್ಲಿ ಡೇವಿಡ್ ಬೆಡ್ಡಿಂಗ್ಹ್ಯಾಮ್ (21 ರನ್) ಹಾಗೂ ಕೈಲ್ ವೆರೆಯ್ನ್ (7 ರನ್) ಜಯದ ದಡ ಸೇರಿಸಿದರು.
ಇದರೊಂದಿಗೆ, ಸತತ ಎರಡನೇ ಅವಧಿಗೆ ಚಾಂಪಿಯನ್ ಎನಿಸಿಕೊಳ್ಳುವ ಅವಕಾಶ ಕಮಿನ್ಸ್ ಪಡೆಯ ಕೈಯಿಂದ ಜಾರಿತು. ಆಸ್ಟ್ರೇಲಿಯಾ ಪರ ಮಿಚೇಲ್ ಸ್ಟಾರ್ಕ್ ಮೂರು ವಿಕೆಟ್ ಉರುಳಿಸಿದರೆ, ನಾಯಕ ಪ್ಯಾಟ್ ಕಮಿನ್ಸ್ ಒಂದು ವಿಕೆಟ್ ಪಡೆದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕಮಿನ್ಸ್ ಬಳಗ ಮೊದಲ ದಿನವೇ ಸರ್ವಪತನ ಕಂಡಿತ್ತು. 212 ರನ್ ಗಳಿಸುವಷ್ಟರಲ್ಲೇ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್
ಮಾಡಿದ ಆಫ್ರಿಕಾ ಕೇವಲ 138 ರನ್ಗಳಿಸಿ ಆಲ್ ಔಟ್ ಆಯಿತು. 74 ರನ್ ಮುನ್ನಡೆ ದೊರೆತರೂ, ಕಾಂಗರೂ ಪಡೆ ಎರಡನೇ ಇನಿಂಗ್ಸ್ನಲ್ಲಿ 207 ರನ್ ಗಳಿಸಿ ಎದುರಾಳಿಗೆ 282 ರನ್ ಗುರಿ ನೀಡಿತ್ತು.