ಸುಳ್ಯ:ತನ್ನ ನರ ನಾಡಿಗಳಲ್ಲಿ, ಹೃದಯ ದಮನಿಗಳಲ್ಲಿ ಹರಿಯುವ ರಕ್ತವನ್ನು ದಾನ ಮಾಡಿ ಮತ್ತೊಬ್ಬರ ಜೀವವನ್ನು ಉಳಿಸುವುದು ಜೀವನದ ಶ್ರೇಷ್ಠ ಸಾಧನೆ. ಈ ರೀತಿ ರಕ್ತವನ್ನು ನೀಡಿ ಜೀವ ಉಳಿಸುವವರಿಗೆ ಕೃತಜ್ಞತಾ ಪೂರ್ವಕವಾಗಿ ಗೌರವ ಸಲ್ಲಿಸುವ ದಿನವೇ ರಕ್ತದಾನಿಗಳ ದಿನ. ಇಂದು ನಾಡಿನ ಮೂಲೆ ಮೂಲೆಗಳಲ್ಲಿ ಹಲವಾರು ಮಂದಿ ರಕ್ತವನ್ನು ದಾನ ಮಾಡುವ ಮೂಲಕ ತಮ್ಮ ಅಮೂಲ್ಯ ಸೇವೆಯನ್ನು ಮಾನವ ಕುಲಕ್ಕೆ ನೀಡುತ್ತಾರೆ. ಅಂತಹಾ ರಕ್ತದಾನಿಗಳಿಗೆ
ಮಾದರಿಯಾದವರು ಸುಳ್ಯದ ವಾಣೀಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷರು ಹಾಗೂ ಸುಳ್ಯ ತಾಲೂಕು ರೆಡಕ್ರಾಸ್ ಸಂಸ್ಥೆಯ ಸಭಾಪತಿ ಹಾಗೂ ರಕ್ತದಾನಿ ಪಿ.ಬಿ.ಸುಧಾಕರ ರೈ. ರಕ್ತದಾನದ ಮೂಲಕವೇ ವಿಶೇಷವಾಗಿ ಗುರುತಿಸಿಕೊಂಡಿರುವ ರೈಗಳು ಒಂದು, ಎರಡು ಅಲ್ಲಾ.. ಐವತ್ತು.. ನೂರಲ್ಲ.. ಬರೋಬರಿ 156 ಬಾರಿ ರಕ್ತದಾನ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ.ಆದುದರಿಂದಲೇ ಯಾರಿಗಾದರೂ ರಕ್ತ ಬೇಕು ಎಂದ ಕೂಡಲೇ ಮೊದಲು ನೆನಪಾಗುವುದೇ ಸುಧಾಕರ ರೈಗಳನ್ನು..!

ಪಿ.ಬಿ.ಸುಧಾಕರ ರೈ.
ತನ್ನ 17ನೇ ವರ್ಷದಿಂದ ಆರಂಭಗೊಂಡ ರಕ್ತದಾನ ಕಾಯಕ ತಮ್ನ 63ನೇ ವರ್ಷದಲ್ಲಿಯೂ ಮುಂದುವರಿಸಿದ್ದಾರೆ ರೈಗಳು. 1978ರಲ್ಲಿ ಪಿಯುಸಿಯಲ್ಲಿ ಓದುತ್ತಿದ್ದಾಗ ತುರ್ತು ಸಂದರ್ಭದಲ್ಲಿ ಅವರು ಮೊದಲ ಬಾರಿಗೆ ರಕ್ತದಾನ ಮಾಡಿದ್ದರು. ಬಳಿಕ ಗಲ್ಪ್ ರಾಷ್ಟ್ರಗಳಲ್ಲಿ ಉದ್ಯೋಗಕ್ಕೆ ತೆರಳಿದ ಸಂದರ್ಭದಲ್ಲಿ ರಕ್ತದಾನ ಅಭ್ಯಾಸವನ್ನು ಮುಂದುವರಿಸಿದರು. ಗಲ್ಫ್ ರಾಷ್ಟ್ರಗಳಲ್ಲಿ ರಕ್ತದಾನ ಮಾಡುವುದಕ್ಕೆ ಬಹಳ ಮಹತ್ವ ನೀಡುತ್ತಿದ್ದರು. ಅದರಂತೆ ಇವರು ರಕ್ತದಾನ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡರು.1985ರಿಂದ 2000ನೇ ಇಸವಿ ತನಕ ವಿದೇಶದ ಉದ್ಯೋಗ ಸಂದರ್ಭದ 15 ವರ್ಷದಲ್ಲಿ 36 ಬಾರಿ ರಕ್ತದಾನ ಮಾಡಿದ್ದರು. 2000ನೇ ಇಸವಿಯಲ್ಲಿ ಸುಳ್ಯದಲ್ಲಿ ಉದ್ಯಮ ಆರಂಭಿಸಿದ ಬಳಿಕ ಇಲ್ಲಿ ಸಾಮಾಜಿಕ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡರು. ಮಾತ್ರವಲ್ಲದೆ

ರಕ್ತದಾನವನ್ನು ನಿರಂತರವಾಗಿ ಮಾಡುತ್ತಿದ್ದರು. ತನ್ನ 60 ನೇ ವರ್ಷದವರೆಗೆ ವರ್ಷಕ್ಕೆ 4 ಬಾರಿ ರಕ್ತದಾನ ಮಾಡುತ್ತಿದ್ದ ಅವರು 60 ವರ್ಷದ ಬಳಿಕ ವರ್ಷಕ್ಕೆ 3 ಬಾರಿ ರಕ್ತ ನೀಡುತ್ತಾರೆ. ಒಟ್ಟು 47 ವರ್ಷದಲ್ಲಿ 156 ಬಾರಿ ರಕ್ತದಾನ ಮಾಡಿದ್ದಾರೆ.18 ರಿಂದ 65 ವರ್ಷ ತನಕ ರಕ್ತದಾನ ಮಾಡಬಹುದು ಎಂದು ಅವರು ಹೇಳುತ್ತಾರೆ. ಕೆವಿಜಿ ಮೆಡಿಕಲ್ ಕಾಲೇಜಿನ ಬ್ಲಡ್ ಬ್ಯಾಂಕ್ನಲ್ಲಿ ಹೆಚ್ಚಾಗಿ ರಕ್ತದಾನ ಮಾಡುವ ಅವರು ಸುಳ್ಯ, ಪುತ್ತೂರು, ಮಂಗಳೂರು, ಮಣಿಪಾಲ, ಬಳ್ಳಾರಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ರಕ್ತದಾನ ಮಾಡಿದ್ದಾರೆ. ರೆಡ್ ಕ್ರಾಸ್ ಸಂಸ್ಥೆ ನಡೆಸುವ ರಕ್ತದಾನ ಶಿಬಿರಗಳಲ್ಲಿಯೂ ನಿರಂತರ ರಕ್ತದಾನ ಮಾಡುತ್ತಾರೆ. ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡುತ್ತಾರೆ, ನಿರಂತರ ಜಾಗೃತಿ ಮೂಡಿಸುತ್ತಾರೆ. ಯಾರಿಗೆ ರಕ್ತ ಬೇಕೆಂದರೂ ಸ್ಪಂದಿಸಿ ವ್ಯವಸ್ಥೆ ಮಾಡುತ್ತಾರೆ. ವರ್ಷಕ್ಕೆ 10 ರಿಂದ 12 ಬಾರಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ವಿವಿಧ ರಕ್ತ ನಿಧಿ ಕೇಂದ್ರಗಳಿಗೆ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಕ್ತ ನಿಧಿ ಕೇಂದ್ರಕ್ಕೆ ವರ್ಷಕ್ಕೆ 1000 ಯೂನಿಟ್ ಕಿಂತಲೂ ಹೆಚ್ಚು ರಕ್ತ ಸಂಗ್ರಹಿಸಿ ಕೊಡುತ್ತಾರೆ.
ಇವರ ಪುತ್ರರಾದ ಸ್ವಸ್ಥಿಕ್ ಮತ್ತು ಸಾತ್ವಿಕ್ ಕೂಡ ರಕ್ತದಾನ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ.ರಕ್ತದಾನದ ಸೇವೆಗಾಗಿ ರಾಜ್ಯದ ಹಲವಾರು ಕಡೆಗಳಿಂದ ಗೌರವ, ಸನ್ಮಾನ ಅರಸಿ ಬಂದಿದೆ. 2019ರಲ್ಲಿ ರೆಡ್ ಕ್ರಾಸ್ ಸಂಸ್ಥೆ ಏರ್ಪಡಿಸಿದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ರಾಜ್ಯಪಾಲರಿಂದ ಸನ್ಮಾನ ಸ್ವೀಕರಿಸಿದ್ದಾರೆ.
‘ರಕ್ತದಾನ ಮಾಡುವುದು ಅತ್ಯುತ್ತಮ ಕಾರ್ಯ. ಇತರರ ಜೀವ ಉಳಿಸುವುದರ ಜೊತೆಗೆ ನಮ್ಮ ಆರೋಗ್ಯ ರಕ್ಷಣೆಗೂ ಸಹಾಯಕ. ರಕ್ತದಾನ ಮಾಡುವುದರಿಂದ ನಮ್ಮ ರಕ್ತ ಶುದ್ಧೀಕರಣ ಆಗುತ್ತದೆ, ದೇಹಕ್ಕೆ ಪಾಸಿಟಿವ್ ಎನರ್ಜಿ ಸಿಗುತ್ತದೆ, ಮನಸ್ಸಿಗೆ ಸಂತೃಪ್ತಿ ದೊರೆಯುತ್ತದೆ.
-ಪಿ.ಬಿ.ಸುಧಾಕರ ರೈ.
ವಿಶ್ವ ರಕ್ತದಾನಿಗಳ ದಿನ:
ಪ್ರತಿ ವರ್ಷ ಜೂನ್ 14 ರಂದು ವಿಶ್ವದಾದ್ಯಂತ ‘ವಿಶ್ವ ರಕ್ತದಾನಿಗಳ ದಿನ’ವನ್ನು ಆಚರಣೆ ಮಾಡಲಾಗುತ್ತದೆ. ಭೂಮಿ ಮೇಲಿರುವ ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿ ಇರುವುದು ಒಂದೇ ರಕ್ತ. ಮನುಷ್ಯ ಆರೋಗ್ಯ ಇರಲು ಶುದ್ದ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ಜಗತ್ತಿನೆಲ್ಲಡೆ ಪ್ರತಿ ಕ್ಷಣ ಲೆಕ್ಕವಿಲ್ಲದಷ್ಟು ಜನರಿಗೆ ರಕ್ತದ ಅವಶ್ಯವಿರುತ್ತದೆ.
ದಾನಗಳಲ್ಲಿ ರಕ್ತದಾನವನ್ನು ಸಹ ಬಹಳ ಶ್ರೇಷ್ಠ ದಾನವೆಂದು ಕರೆಯಲಾಗುತ್ತಾದೆ. ಈ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಹೊಸ ಹೊಸ ಥೀಮ್ನೊಂದಿಗೆ ವಿಶ್ವ ರಕ್ತದಾನಿಗಳ ದಿನವನ್ನು ಆಚರಣೆ ಮಾಡಲಾಗುತ್ತದೆ.ವಿಶ್ವ ಆರೋಗ್ಯ ಸಂಸ್ಥೆಯು ರಕ್ತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತದೆ. ಇದಲ್ಲದೆ, ಆಸ್ಟ್ರಿಯಾ ವೈದ್ಯ ಕಾರ್ಲ್ ಲ್ಯಾಂಡ್ಸ್ಟೇನರ್ ಅವರು ಮಾನವನ ರಕ್ತದ ಮೊದಲ ಮೂರು ಗ್ರೂಪ್ಗಳನ್ನು ಸಂಶೋಧಿಸಿದರು. ಈ ಹಿನ್ನೆಲೆಯಲ್ಲೂ ಅವರ ಜನ್ಮದಿನವಾದ ಜೂನ್ 14 ಅನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ.