ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ.ಲೋಕಸಭೆ ಚುನಾವಣೆ ಫಲಿತಾಂಶ ಬಳಿಕವೂ ಮುಂದುವರೆಯಲಿದ್ದು, ಈಗಾಗಲೇ ಇದಕ್ಕೆ ಅನುದಾನ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ ತುಂಬಿರುವ ಹಿನ್ನೆಲೆ ನಗರದಲ್ಲಿಂದು ಬೆಂಗಳೂರು ಪ್ರೆಸ್ ಕ್ಲಬ್ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಬಂದು ಇಂದಿಗೆ ಒಂದು ವರ್ಷ
ತುಂಬಿದ್ದು, ಲೋಕಸಭಾ ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಸಂಭ್ರಮ ಆಚರಣೆ ಮಾಡಲು ಆಗಿಲ್ಲ. ನಮ್ಮ ಸರ್ಕಾರವನ್ನು ಒಂದು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ, ಸ್ಪಷ್ಟವಾದ ಬಹುಮತವನ್ನು ಕೊಟ್ಟು ಸರ್ಕಾರ ರಚನೆಗೆ ಅವಕಾಶ ಕೊಟ್ಟ ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು. ಈ ಒಂದು ವರ್ಷದಲ್ಲಿ ಸರ್ಕಾರ ‘ಶಕ್ತಿ, ಅನ್ನ ಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಮತ್ತು ಯುವ ನಿಧಿ’ ಎಂಬ ಐದು ಗ್ಯಾರೆಂಟಿಗಳನ್ನು ಸಾಕಾರಗೊಳಿಸಲಾಗಿದೆ. ಸದರಿ ಲೋಕಸಭೆ ಚುನಾವಣೆಯ ನಂತರ ಸ್ಥಗಿತಗೊಳಿಸಲಾಗುತ್ತದೆ. ಚುನಾವಣೆ ಮುಗಿದ ಬಳಿಕ ಉಚಿತ ಯೋಜನೆ ಬಂದ್ ಎಂಬ ಆರೋಪಗಳಿವೆ. ಆದರೆ ಇದೆಲ್ಲ ಊಹೆಗಳಾಗಿದ್ದು, ಒಪ್ಪಲು ಸಾಧ್ಯವಿಲ್ಲ. ಲೋಸಕಭಾ ಚುನಾವಣೆ ನಂತರವು ಕಾಂಗ್ರೆಸ್ 5 ಗ್ಯಾರೆಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಮುಂದುವರಿಯುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ವರ್ಷ ರಾಜ್ಯಕ್ಕೆ ಬರಗಾಲ ಉಂಟಾದ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯ ನಿರ್ವಹಿಸಿದ್ದೇವೆ. ರಾಜ್ಯದ ಆಡಳಿತವನ್ನು ಮತ್ತೆ ಸರಿದಾರಿಗೆ ತರುವ ದೊಡ್ಡ ಜವಾಬ್ದಾರಿಗೆ ಹೆಗಲು ಕೊಟ್ಟಾಗ ಅದರ ಭಾರದ ಅರಿವು ನಮಗಿತ್ತು. ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಲು ನಾವು ಹೋರಾಟವನ್ನೇ ಮಾಡಬೇಕಾಯಿತು. ಸವಾಲುಗಳ ನಡುವೆಯೂ ನಮ್ಮ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ನಮ್ಮ ಮಾತು ಉಳಿಸಿಕೊಂಡಿದ್ದೇವೆ ಎಂದು ಅವರು ಹೇಳಿದರು.
ಲೋಕಸಭಾ ಚುನಾವಣೆ ಫಲಿತಾಂಶ ಏನೇ ಬರಲಿ. ಯಾವುದೇ ಕಾರಣಕ್ಕೂ ಸಚಿವ ಸಂಪುಟ ಪುನರ್ ರಚನೆ ಆಗಲ್ಲ.ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೂ 15ರಿಂದ 20 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.