ಅಂಕೋಲಾ:ಇಲ್ಲಿನ ಶಿರೂರು ಬಳಿ ಗುಡ್ಡ ಕುಸಿತದಿಂದಾಗಿ ನಾಪತ್ತೆಯಾಗಿರುವ ಮೂವರು ವ್ಯಕ್ತಿಗಳು ಮತ್ತು ವಾಹನಗಳ ಶೋಧ ಕಾರ್ಯ ಬುಧವಾರವೂ ಮುಂದುವರಿಯಿತು.
ಗಂಗಾವಳಿ ನದಿಯಲ್ಲಿ ನೀರಿನ ಮಟ್ಟ ಇಳಿಕೆ ಆಗಿರುವ ಕಾರಣ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಮಂಗಳವಾರ ಸಂಜೆ ಕಾರ್ಯಾಚರಣೆಗೆ ಇಳಿದ ಸಂದರ್ಭದಲ್ಲಿ ಕೇರಳದ ಅರ್ಜುನ್ ಅವರ ಭಾರತ ಬೆಂಜ್ ಲಾರಿಯ ಜಾಕ್ ನದಿಯಲ್ಲಿ
ಮಣ್ಣಿನ ಅಡಿಯಲ್ಲಿ ಪತ್ತೆಯಾಗಿತ್ತು.ಬುಧವಾರ ಬೆಳಗ್ಗೆಯಿಂದ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಶೋಧ ನಡೆಸಿದರು.ಎನ್. ಡಿ.ಆರ್. ಎಫ್, ಎಸ್. ಡಿ.ಆರ್. ಎಫ್, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಸ್ಥಳೀಯ ಮೀನುಗಾರರು ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ನಡೆಸಿದರು.ಭಾರತ್ ಬೆಂಜ್ ಲಾರಿಯ ಜಾಕ್ ಪತ್ತೆಯಾದ ಸ್ಥಳದಲ್ಲಿ ಹಲವಾರು ಭಾರಿ ಮುಳುಗಿ ಶೋಧ ನಡೆಸಲಾಯಿತು. ನೌಕಾದಳದ ಮುಳುಗು ತಜ್ಞರು ಕೂಡ ನದಿಯ ವಿವಿಧ ಭಾಗಗಳಲ್ಲಿ
ಶೋಧ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ನದಿಯಲ್ಲಿ ವಾಹನಗಳದ್ದು ಎಂದು ಶಂಕಿಸಲಾಗಿರುವ ಕೆಲವು ಲೋಹದ ಭಾಗಗಳು ಪತ್ತೆಯಾದವು.
ಕಾರವಾರ ಅಂಕೋಲಾ ಶಾಸಕ ಸತೀಶ ಸೈಲ್, ಕೇರಳ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸ್ಥಳದಲ್ಲಿ ಉಪಸ್ಥಿತರಿದ್ದರು.ನದಿಯಲ್ಲಿ ಮಣ್ಣು ರಾಶಿಯ ಅಡಿಯಲ್ಲಿ ಲಾರಿ ಇದ್ದು ಅದರ ಮೇಲೆ ಕಲ್ಲು ಬಂಡೆಗಳು ಬಿದ್ದಿರುವ ಸಾಧ್ಯತೆ ಇದ್ದು ಗೋವಾದಿಂದ ಡ್ರೆಜ್ಜರ್ ಯಂತ್ರ ತಂದು ನದಿಯಲ್ಲಿ ರಾಶಿ ಬಿದ್ದಿರುವ ಮಣ್ಣು ತೆರುವು ಕಾರ್ಯಾಚರಣೆ ಮಾಡಲಾಗುವುದು ಎಂದು ಶಾಸಕ ಸತೀಶ ಸೈಲ್ ತಿಳಿಸಿದ್ದಾರೆ.