ಶಿರೂರು : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರು ಗುಡ್ಡ ಕುಸಿತ ಪರಿಣಾಮ ನಾಪತ್ತೆಯಾದ ಕೇರಳದ ಟ್ರಕ್ ಚಾಲಕ ಅರ್ಜುನ್ ಹಾಗೂ ಇತರ ಇಬ್ಬರಿಗಾಗಿ ಶೋಧ ಕಾರ್ಯಾಚರಣೆ ಮತ್ತೆ ಆರಂಭಿಸಲಾಗಿದೆ. ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆ ಸಂದರ್ಭ ಲಾರಿಯದ್ದು
ಎಂದು ಅಂದಾಜಿಸಲಾಗಿರುವ ಜಾಕ್ ಹಾಗೂ ವಾಹನಗಳ ಬಿಡಿ ಭಾಗಗಳು ಪತ್ತೆಯಾಗಿದೆ. ಗಂಗಾವಳಿ ನದಿಯಲ್ಲಿ ಸ್ಕೂಬಾ ಡೈವ್ ಕಾರ್ಯಾಚರಣೆ ವೇಳೆ ಅರ್ಜುನ್ ಓಡಿಸುತ್ತಿದ್ದ ಲಾರಿಯದ್ದು ಎಂದು ಹೇಳಲಾಗಿರುವ ಜಾಕ್ ಪತ್ತೆಯಾಗಿದೆ. ಈಶ್ವರ ಮಲ್ಪೆ ತಂಡ ಹಲವು ಬಾರಿ ಗಂಗಾವಳಿ ನದಿಯಲ್ಲಿ ಮುಳುಗಿ ಈ ವಸ್ತುಗಳನ್ನು ಎತ್ತಿದ್ದಾರೆ.
ಮಳೆ ನಿಂತು ಬಿಸಿಲು ಬಿದ್ದಿರುವುದು ಮತ್ತು ನದಿ ನೀರಿನ ಮಟ್ಟ ಇಳಿದಿರುವುದು ಕಾರ್ಯಾಚರಣೆಗೆ ಅನುಕೂಲವಾಗಿದೆ.
ಜುಲೈ 16 ರಂದು ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿದ್ದು ಗುಡ್ಡ ಕುಸಿತ ಸಂಭವಿಸಿದ ಬಳಿಕ ಹಲವು ದಿನಗಳ ವರೆಗೆ ಶೋಧ ಕಾರ್ಯ ನಡೆಸಲಾಗಿತ್ತಾದರೂ ಭಾರೀ ಮಳೆಯಿಂದಾಗಿ ಗಂಗಾವಳಿ ನದಿಯ ಒಳ ಹರಿವು ಹೆಚ್ಚಾಗಿ ಶೋಧ ಕಾರ್ಯ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.
ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಲೋಕೇಶ್ ನಾಯ್ಕ ಮತ್ತು ಜಗನ್ನಾಥ ನಾಯ್ಕ ಅವರ ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ.