ಚೆನ್ನೈ:ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರವು ತಮಿಳುನಾಡು ವಿಧಾನಸಭೆಯಲ್ಲಿ ಬುಧವಾರ ವಿಶ್ವಾಸಮತ ಸಾಬೀತು ಮಾಡಿದೆ.234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 118 ಆಗಿದೆ. 144 ಶಾಸಕರ ಬೆಂಬಲದೊಂದಿಗೆ
ಸಿಎಂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ವಿಶ್ವಾಸವನ್ನು ಗೆದ್ದಿದೆ.ಎಐಎಡಿಎಂಕೆಯ ಒಂದು ಬಣದ ಬಂಡಾಯ ಶಾಸಕರು ಟಿವಿಕೆ ಸರ್ಕಾರವನ್ನು ಬೆಂಬಲಿಸಿದ್ದಾರೆ.22 ಶಾಸಕರು ಸರಕಾರದ ವಿರುದ್ಧ ಮತ ಚಲಾಯಿಸಿದರು.ಬಳಿಕ ಸಭಾಧ್ಯಕ್ಷ ಜೆ.ಸಿ.ಡಿ ಪ್ರಭಾಕರ್ ಅವರು ಸಿಎಂ ವಿಜಯ್ ನೇತೃತ್ವದ ಸರ್ಕಾರ ಬಹುಮತವನ್ನು ಸಾಬೀತುಪಡಿಸಿರುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ.ಈ ಮೊದಲು ಸದನದಲ್ಲಿ ವಿಶ್ವಾಸಮತಕ್ಕೆ ಸಂಬಂಧಿಸಿದಂತೆ ಸಿಎಂ ವಿಜಯ್ ಅವರು ನಿರ್ಣಯ ಮಂಡಿಸಿದರು. ಈ ವೇಳೆ ಡಿಎಂಕೆ ಪಕ್ಷದ ಶಾಸಕರು ಸಭಾತ್ಯಾಗ ಮಾಡಿದ್ದಾರೆ.
ಕಾಂಗ್ರೆಸ್, ಸಿಪಿಐ, ಸಿಪಿಐ (ಎಂ), ವಿಸಿಕೆ ಮತ್ತು ಐಯುಎಂಎಲ್ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ನೇತೃತ್ವದ ಟಿವಿಕೆ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಬಿಜೆಪಿ ತಟಸ್ಥ ನಿಲುವನ್ನು ಹೊಂದಿತು. ನಾಲ್ಕು ಶಾಸಕರನ್ನು ಹೊಂದಿರುವ ಅನ್ಬುಮಣಿ ರಾಮದಾಸ್ ನೇತೃತ್ವದ ಪಿಎಂಕೆ ಈ ಪ್ರಕ್ರಿಯೆಯಿಂದ ದೂರವುಳಿಯಿತು.
ಮೇ 13ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ಬಹುಮತ ಸಾಬೀತು ಮಾಡುವಂತೆ ರಾಜ್ಯಪಾಲ ಆರ್.ವಿ. ಅರ್ಲೇಕರ್ ನಿರ್ದೇಶನ ನೀಡಿದ್ದರು.
ತಮಿಳುನಾಡು ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಟಿವಿಕೆ 108 ಸ್ಥಾನಗಳನ್ನು ಹೊಂದಿದೆ. ಆಡಳಿತರೂಢ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಐವರು ಶಾಸಕರ ಬೆಂಬಲ ಇದೆ. ಇದಲ್ಲದೆ ಸಿಪಿಐ, ಸಿಪಿಐ (ಎಂ), ವಿಸಿಕೆ ಮತ್ತು ಐಯುಎಂಎಲ್ ತಲಾ ಎರಡು ಶಾಸಕರ ಬೆಂಬಲವಿದೆ. ಇನ್ನು ಎಸ್.ಪಿ. ವೇಲುಮಣಿ ಹಾಗೂ ಸಿ.ವಿ. ಷಣ್ಮುಗಂ ನೇತೃತ್ವದ ಎಐಎಡಿಎಂಕೆಯ ಒಂದು ಬಣದ ಶಾಸಕರು ಟಿವಿಕೆಗೆ ಬಂಬಲ ಘೋಷಿಸಿದ್ದಾರೆ.













