*ಡಾ. ಸುಂದರ ಕೇನಾಜೆ.
ಇದೊಂದು ಅಧ್ಯಯನ ವರದಿ, ಇದನ್ನು ಎರಡು ಕಂತುಗಳಲ್ಲಿ ಇಲ್ಲಿ ಬರೆಯಲು ಬಯಸುತ್ತೇನೆ. ನಾವು ಕಳೆದ ಮೂರು ವರ್ಷಗಳಿಂದ ಕರ್ನಾಟಕದ ಗಡಿಭಾಗಗಳಿಗೆ ಭೇಟಿ ನೀಡಿ ಗಮನಿಸಿದ ಅಂಶಗಳು ಇಲ್ಲಿಯವು. ಈ ಗಡಿ(ಬೀದರ್, ಗುಲ್ಬರ್ಗ, ಬಿಜಾಪುರ, ಬೆಳಗಾವಿ, ಕೋಲಾರ, ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ) ಜಲ್ಲೆಗಳಲ್ಲಿ ಸಂಚರಿಸಿ ಕನ್ನಡ ಭಾಷೆ ಮತ್ತು ಸಾಂಸ್ಕೃತಿಕ ಸಂಗತಿಗಳ ಬಗ್ಗೆ ತಿಳಿದುಕೊಂಡ ಅಂಶಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಮುಖ್ಯವಾಗಿ ಭಾಷಾವಾರು ಪ್ರಾಂತ್ಯ ರಚನೆಯಾದ(1956) ನಂತರ ಈ ಗಡಿಪ್ರದೇಶದ
ಮೂಲಭಾಷೆಯ ಸ್ವರೂಪ ಮತ್ತು ಕನ್ನಡದ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ನೋಡುವುದು ಇಲ್ಲಿಯ ಮುಖ್ಯ ಉದ್ದೇಶ. ಈ ಜಿಲ್ಲೆಗಳಲ್ಲಿ ಕೆಲವೆಡೆ ಅನ್ಯಭಾಷೆಯ ಪ್ರದೇಶಗಳು ಕರ್ನಾಟಕಕ್ಕೆ ಸೇರಿವೆ. ಅದೇ ರೀತಿ ಕೆಲವೆಡೆ ಕನ್ನಡ ಭಾಷಿಕ ನೆಲಗಳು ಅನ್ಯರಾಜ್ಯಗಳಿಗೆ ಸೇರಿವೆ. ಈ ಪ್ರಕ್ರಿಯೆ ನಡೆದು ಅರವತ್ತೆಂಟು ವರ್ಷಗಳೇ ಕಳೆದವು. ಇಲ್ಲಿಯ ಭಾಷಾ ಬೆಳವಣಿಗೆ ಮತ್ತು ಅರ್ಥಿಕ, ಸಾಮಾಜಿಕ ಪ್ರಗತಿ ವಿಗತಿಗಳನ್ನು ಗಮನಿಸುವ ಕಳಕಳಿ ಮಾತ್ರ ಇಲ್ಲಿಯದು.
ದಕ್ಷಿಣದಲ್ಲಿ ಮುಖ್ಯವಾಗಿ ಕಾಸರಗೋಡು ಮತ್ತು ಉತ್ತರದಲ್ಲಿ ಬೆಳಗಾವಿ ಇವರೆಡು ಇಂದಿಗೂ ಬೂದಿಮುಚ್ಚಿದ ಕೆಂಡದಂತೆ ಭಾಷಾವಾರು ಪ್ರಾಂತ್ಯ ರಚನೆಯ ಲೋಪದಲ್ಲಿ ಚರ್ಚಿತವಾಗುತ್ತಿರುವ ಪ್ರದೇಶಗಳು. ಉಳಿದಂತೆ ಸಮಸ್ಯೆ, ಸಂಘರ್ಷಗಳಿಲ್ಲದಿದ್ದರೂ ಕನ್ನಡ ಭಾಷಾ ಬೆಳವಣಿಗೆಯಲ್ಲಿ ಯಾವ ಉನ್ನತಿಯೂ ಸಾಧಿಸಿಲ್ಲವೆಂಬುವುದು ನಾವು ಕಂಡುಕೊಂಡ ಸತ್ಯ. ಕಾಸರಗೋಡು ಶುದ್ಧ ಕನ್ನಡದ ನೆಲ, ಅದು ಕೇರಳಕ್ಕೆ ಹೋಗುವಲ್ಲಿ ಅಂದಿನ ತ್ರಿಸದಸ್ಯ ಸಮಿತಿಯ ಸದಸ್ಯರಲ್ಲಿ ಓರ್ವರು ಕೇರಳದವರು ಆಗಿದ್ದದು ಮುಖ್ಯ ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಕೇರಳಕ್ಕೆ ಕಾಸರಗೋಡು ಸಿಕ್ಕ ತಕ್ಷಣ ಕೇರಳ ಸರಕಾರ ಆ ಪ್ರದೇಶವನ್ನು ಭದ್ರಪಡಿಸುವ ನೆಲೆಯಲ್ಲಿ ಮುಖ್ಯವಾಗಿ ಅಭಿವೃದ್ಧಿಯ ಕಡೆಗೆ ಗಮನ ಹರಿಸಿತು. ಅಲ್ಲಿಯ ಕನ್ನಡ ಶಾಲೆ ಮತ್ತು ಕನ್ನಡ ಸಾಂಸ್ಕೃತಿಕ ಪರಿಸರ ನಿಧಾನಕ್ಕೆ ಕ್ಷೀಣವಾಯಿತು. ಪರಿಣಾಮ ಇಂದು ಕಾಸರಗೋಡಿನಲ್ಲಿ ಕನ್ನಡ ಗಣನೀಯವಾಗಿ ಇಳಿದಿದೆ. ಕನ್ನಡ ಭಾಷಿಕ ಕುಟುಂಬಗಳ ಹೊಸ ತಲೆಮಾರು ಮಲೆಯಾಳಂ ಕಡೆಗೆ ವರ್ಗಾವಣೆಗೊಳ್ಳುವುದನ್ನು ಕಾಣುತ್ತಿದ್ದೇವೆ. ಪರಿಣಾಮ ಕೆಲವೇ ವರ್ಷಗಳಲ್ಲಿ ಕಾಸರಗೋಡು ಪೂರ್ಣ ಮಲೆಯಾಳಂ ಭೂಮಿಯಾಗಿ ಮಾರ್ಪಡುವುದರಲ್ಲಿ ಯಾವ ಸಂದೇಹವೂ ಇಲ್ಲ.

ಇದೇ ಸಂಗತಿ ಬೆಳಗಾವಿ ವಿಷಯಕ್ಕೆ ಬಂದಾಗ ಭಿನ್ನವಾಗಿದೆ. ಕಳೆದ ಅನೇಕ ವರ್ಷಗಳಿಂದ ಬೆಳಗಾವಿ ಮರಾಠಿ ಪ್ರಾಬಲ್ಯದಿಂದಲೇ ಮೆರೆಯುತ್ತಿದ್ದ ಪ್ರದೇಶ. ಇಲ್ಲಿಯ ಕನ್ನಡಿಗರು ಕನ್ನಡ ರಾಜ್ಯದೊಳಗಿದ್ದರೂ ಉಸಿರುಗಟ್ಟಿದ ಸ್ಥಿತಿಯಲ್ಲಿ ಬದುಕಬೇಕಾಗಿತ್ತು. ಕಾಸರಗೋಡು ಮಲೆಯಾಳಂ ಭೂಮಿಯಾಗುವ ಅದೇ ವೇಗದಲ್ಲಿ ಬೆಳಗಾವಿಯನ್ನು ಪೂರ್ಣ ಕನ್ನಡದ ನೆಲವಾಗಿಸಲು ನಲವತ್ತು ವರ್ಷಗಳಿಂದಲೂ ನಮಗೆ ಸಾಧ್ಯವಾಗಲಿಲ್ಲ(ಈಗಲೂ ಪೂರ್ಣವಾಗಿದೆ ಎಂದಲ್ಲ) ಅಲ್ಲಿ ಕನ್ನಡ ಪ್ರಬಲವಾಗುವ ಬದಲು ಮರಾಠಿ(ಜತೆಗೆ ಹಿಂದಿ)ಯೇ ಬೆಳೆಯುವಂತಾಗಿತ್ತು. ಮಹಾರಾಷ್ಟ್ರ ಏಕೀಕರಣ ಸಮಿತಿ ಕನ್ನಡವನ್ನು ಬಲತ್ಕಾರವಾಗಿ ಮುಗಿಸುವ ಎಲ್ಲ ಚಟುವಟಿಕೆಗಳಿಗೂ ಮುಂದಾಗಿತ್ತು. ಆದರೆ ಇಂದು ಬೆಳಗಾವಿಯ ಕನ್ನಡಿಗರು ಹೇಳುತ್ತಾರೆ, “ಕಳೆದ ಇಪ್ಪತ್ತು ವರ್ಷಗಳ ಹಿಂದಿನ ಸ್ಥಿತಿ ಇಂದು ಬೆಳಗಾವಿ ನಗರದಲ್ಲಿಲ್ಲ, ಮರಾಠಿ ದಬ್ಬಾಳಿಕೆ ಕಡಿಮೆಯಾಗಿದೆ. ಕರ್ನಾಟಕದ ಅಭಿವೃದ್ಧಿ ಕೆಲಸಗಳು ಪ್ರೇರಣೆಯಾಗಿವೆ” ಎಂದು.
ಈ ಮಾತು ಬೆಳಗಾವಿ ನಗರಕ್ಕೇನೋ ಸರಿ ಎಂದು ಕಂಡಿತು. ಸುವರ್ಣ ವಿಧಾನಸೌಧ, ವಿಮಾನ ನಿಲ್ದಾಣ, ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶ ಬೆಳಗಾವಿ, ಕರ್ನಾಟಕವನ್ನು ಆ ಮೂಲಕ ಕನ್ನಡವನ್ನು ನಿಧಾನವಾಗಿ ಇಷ್ಟಪಡುವಂತೆ ಮಾಡಿದೆ ಎಂದೂ ಸಮರ್ಥಿಸಬಹುದು. ಆದರೆ ನಗರದಿಂದ ಹೊರಗಿರುವ ಸುಮಾರು ಮೂವತ್ತು ನಲವತ್ತು ಕಿ.ಮೀ ಗಡಿ ವ್ಯಾಪ್ತಿಯ ವರೆಗಿನ ಪ್ರದೇಶದ ಸ್ಥಿತಿಯಲ್ಲೇನೂ ಬದಲಾವಣೆ ಕಾಣುತ್ತಿಲ್ಲ. ಅಥಣಿ, ನಿಪ್ಪಾಣಿ, ರಾಯಭಾಗದಂತಹಾ ಗಡಿ ತಾಲೂಕಿನಲ್ಲಿ ಕನ್ನಡ ಬಾರದ ಅನೇಕ ಹೊಸ ತಲೆಮಾರಿನ ವ್ಯಾಪಾರಿ ಹುಡುಗರನ್ನು ಭೇಟಿಯಾಗಿದ್ದೆವು.ಕನ್ನಡ ನಾಡಿನಲ್ಲೇ ಹುಟ್ಟಿ, ಕನ್ನಡವಿಲ್ಲದೇ ವ್ಯಾಪಾರ ಮಾಡುವಷ್ಟು ಧೈರ್ಯವನ್ನು ಇಂದಿಗೂ ಈ ಹುಡುಗರು ಇಟ್ಟುಕೊಂಡಿದ್ದಾರೆ. ಕರ್ನಾಟಕದ ಬಹುತೇಕ ನಗರಗಳಲ್ಲಿ ವ್ಯಾಪಾರ ಮಾಡುವ ಅನ್ಯರಾಜ್ಯದ ಅನೇಕರು ಹೀಗೇ ಇದ್ದಾರೆ. ಆದರೆ ಭಾಷಾವಾರು ಪ್ರಾಂತ್ಯ ರಚನೆಯಾದ ನಂತರ ಇಲ್ಲೇ ಹುಟ್ಟಿದ ಮೂರನೇ ತಲೆಮಾರು ಕೂಡ ಕನ್ನಡ ಕಲಿತಿಲ್ಲವೆಂದರೆ ಆಶ್ಚರ್ಯ!
ಇದೇ ಸ್ಥಿತಿ ಚಾಮರಾಜನಗರದ ಗಡಿಪ್ರದೇಶ, ಅಂದರೆ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ತಮಿಳುನಾಡು ಗಡಿಭಾಗದಲ್ಲೂ ಇದೆ. ಇಲ್ಲೂ ಕನ್ನಡ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದರೂ ಅಲ್ಲಿನ ಜನರಲ್ಲಿ ಕನ್ನಡ ಬಾರದವರ ಸಂಖ್ಯೆಯೂ ಬಹಳಷ್ಟಿದೆ. ಹಾಗಾಗಿ ಈ ಪ್ರದೇಶ ಕರ್ನಾಟಕದ ಒಳಗಿದೆಯೋ ಎನ್ನುವ ಸಂಶಯವೂ ಕಾಡುವಂತಿದೆ(ಬಳ್ಳಾರಿ ಜಿಲ್ಲೆಯ ಗಡಿಭಾಗದಲ್ಲಿ ತೆಲುಗಿನ ಪ್ರಭಾವ ಕಡಿಮೆಯದ್ದೇನೂ ಅಲ್ಲ) ಅಭಿವೃದ್ಧಿಯ ಮುಖದರ್ಶನದ ಸರತಿಯ ಸಾಲಿನಲ್ಲಿ ಹಿಂದಿರುವ ಈ ಪ್ರದೇಶದ ಹೊಸತಲೆಮಾರಿನ ಮಕ್ಕಳಿಗೂ ಇಲ್ಲಿ ತಮಿಳು ಭಾಷೆಯೇ ಪ್ರಿಯ. ಕರ್ನಾಟಕದ ಗಡಿಯ ಪ್ರಮುಖ ಪ್ರವಾಸಿ ಕೇಂದ್ರವಾದ ಹೊಗೇನೆಕಲ್ಲ್ ನಲ್ಲಿ ಕನ್ನಡಿಗರಿಗಿಂತ ತಮಿಳರ ಸಂಖ್ಯೆಯೇ ಹೆಚ್ಚು.
ಭಾಷಾವಾರು ಪ್ರಾಂತ್ಯ ರಚನೆಯಾದ ನಂತರ ಹೆಚ್ಚು ಕಡಿಮೆ ಮೂರನೇ ತಲೆಮಾರು ನಮ್ಮ ಮಧ್ಯೆ ಬೆಳೆಯುತ್ತಿದೆ. ಈ ಮಕ್ಕಳು ನಿಜವಾಗಿಯೂ ತಮ್ಮತಮ್ಮ ರಾಜ್ಯಭಾಷೆಗೆ ಆದ್ಯತೆ ನೀಡಬೇಕಾದುದು ಸರಿ. ಅಂದರೆ ಕರ್ನಾಟಕ ರಾಜ್ಯಕ್ಕೆ ಸೇರಿದ ಎಲ್ಲ ಗಡಿಪ್ರದೇಶಗಳ ಜನರು ಕನ್ನಡ ಭಾಷೆಯನ್ನೇ ಕಲಿಯುವುದು, ಉಳಿದ ರಾಜ್ಯಕ್ಕೆ ಸೇರಿದ ಜನರು ಆ ರಾಜ್ಯದ ಭಾಷೆಯನ್ನು ಅನಿವಾರ್ಯವಾಗಿ ಕಲಿಯುವುದು ತಾತ್ವಿಕವಾಗಿ ಸರಿ(ಮಹಾಜನ್ ವರದಿ ಜಾರಿಯಾಗಲಾರದೆಂಬ ಖೇದದೊಂದಿಗೆ…) ವಿಶೇಷವೆಂದರೆ ನಮ್ಮಿಂದ ಕನ್ನಡ ಪ್ರದೇಶ ಪಡೆದುಕೊಂಡ ರಾಜ್ಯಗಳ ವಿಷಯದಲ್ಲಿ ಈ ಸಿದ್ಧಾಂತ ಸರಿಯಾಗಿಯೇ ಅನ್ವಯವಾಗಿದೆ. ಆದರೆ ಕರ್ನಾಟಕಕ್ಕೆ ಅನ್ಯಭಾಷೆಗಳಿಂದ ಬಂದ ಪ್ರದೇಶಗಳ ವಿಷಯದಲ್ಲಿ ಇದು ನಿರೀಕ್ಷಿಸುವಷ್ಟು ಪ್ರಗತಿ ಸಾಧಿಸಿಲ್ಲ.
ಅಲ್ಲದೇ ಕರ್ನಾಟಕ ರಾಜ್ಯದೊಳಗೆ ಬಹಳ ಪೂರ್ವದಿಂದಲೇ ಇರುವ ಇಲ್ಲಿಯ ಉಪಭಾಷೆಗಳಾದ ತುಳು, ಕೊಂಕಣಿ, ಕೊಡವ, ಉರ್ದು, ಅರೇಬಿಕ್, ಅರೆಭಾಷೆಗಳಂತಹಾ ಭಾಷೆಗಳಿಂದ ಕನ್ನಡಕ್ಕೆ ಅಪಾಯವಂತೂ ಆಗಿಲ್ಲ. ಆದರೆ ಅನ್ಯರಾಜ್ಯಗಳ ಭಾಷೆಗಳು ಇಂದೂ ಕನ್ನಡ ನಾಡಿನಲ್ಲಿ ಪಾರುಪತ್ಯ ನಡೆಸುತ್ತಿರುವುದೇ ಅಪಾಯದ ಸ್ಥಿತಿ. ಇದು ಕೇವಲ ನಮ್ಮ ನೆರೆಯ ರಾಜ್ಯಗಳ ಭಾಷೆಗಳಿಗೆ ಮಾತ್ರ ಸೀಮಿತವಲ್ಲ, ಹಿಂದಿ, ಗುಜರಾತಿಯಂತಹಾ ಇತರ ಎಲ್ಲಾ ರಾಜ್ಯಭಾಷೆಗಳಿಗೂ ಅನ್ವಯಿಸುತ್ತದೆ. ಇದಕ್ಕೆ ಆ ರಾಜ್ಯಗಳ ಭಾಷಾನೀತಿಯ ಪರಿಣಾಮವೂ ಒಂದು ಕಾರಣ.
(ಮುಂದುವರಿಯುವುದು.)

(ಡಾ.ಸುಂದರ ಕೇನಾಜೆ ಲೇಖಕರು, ಅಂಕಣಕಾರರು, ಜಾನಪದ ಸಂಶೋಧಕರು)