*ಗಣೇಶ್ ಮಾವಂಜಿ.
ಮತ್ತೆ ಮಳೆಯಾಗಿದೆ. ಕಾದ ಕಾವಲಿಯಂತಾಗಿದ್ದ ಭೂಮಿಗೆ ಮಳೆರಾಯನ ಆಗಮನವಾಗಿ ತಂಪಾಗಿದೆ ಇಳೆ. ಹಾಗೆಂದು ಮುಂಗಾರು ಇನ್ನೂ ಎಂಟ್ರಿ ಕೊಟ್ಟಿಲ್ಲ.ಅದರ ಆಗಮನ ಇನ್ನಷ್ಟೇ ಆಗಬೇಕಿದೆ. ಈ ನಡುವೆ ರಜೆ ಮುಗಿಸಿದ ಮನೆ ಮಕ್ಕಳು ಮತ್ತೆ ಶಾಲೆಗೆ ತೆರಳಲಿದ್ದಾರೆ. ಸದಾ ಮೊಬೈಲ್ ನಲ್ಲಿ ನೇತಾಡಿಕೊಂಡಿರುವ ಮಕ್ಕಳಿಗೆ ಬೈದು ಸಾಕುಸಾಕಾಗಿದ್ದ ಹೆತ್ತವರು ‘ಒಮ್ಮೆ ಶಾಲೆ ಶುರುವಾಗಿದ್ದರೆ ಸಾಕಾಗಿತ್ತು’ ಎಂದು ಹಂಬಲಿಸುತ್ತಿದ್ದ ಆ ಕ್ಷಣ ಬಂದೇ ಬಿಟ್ಟಿದೆ! ಹೌದು., ರಜೆಯ ಮಜಾ ಉಡಾಯಿಸಿದ ಮಕ್ಕಳು ಮತ್ತೆ
ಶಾಲೆಗಳತ್ತ ಮುಖ ಮಾಡಬೇಕಾಗಿದೆ. ಜೇಡರ ಬಲೆ ಕಟ್ಟಿದಂತಾಗಿದ್ದ ಮಕ್ಕಳ ಮನಸ್ಸು ಮತ್ತೆ ಓದಿಗಾಗಿ ತೆರೆದುಕೊಳ್ಳಲೇ ಬೇಕಾಗಿದೆ. ವರ್ಷಗಳು ಕಳೆದಂತೆ ಶಾಲೆಗೆ ತೆರಳುವ ಪ್ರಕ್ರಿಯೆಗಳಲ್ಲಿ ಬದಲಾವಣೆ ಕಂಡು ಬಂದರೂ ರಜೆ ಕಳೆದು ಶಾಲೆ ಪುನರಾರಂಭಗೊಳ್ಳುವ ಆ ಸನ್ನಿವೇಶಗಳು ಎಲ್ಲಾ ಕಡೆಗಳಲ್ಲೂ ಇದ್ದೇ ಇದೆ.
ಬಹುಶಃ ಈಗಿನ ಮಕ್ಕಳಿಗೆ ನಾಲ್ಕೈದು ದಶಕಗಳ ಹಿಂದಿನ ಕಾಲದಲ್ಲಿ ಶಾಲೆ ಮರು ಪ್ರಾರಂಭವಾದಾಗ ಆಗುತ್ತಿದ್ದ ಗೌಜಿ ಗಮ್ಮತ್ತಿನ ಬಗ್ಗೆ ಹೇಳಿದರೆ ನಂಬಲು ಸಾಧ್ಯವೇ ಆಗದು. ಏಕೆಂದರೆ ಕಾಲ ಬಹಳಷ್ಟು ಬದಲಾಗಿದೆ.
ಸಾಗುವ ದಾರಿಗೆ ವಾಹನಗಳ ಪ್ರವೇಶವಾಗಿದೆ. ಬುತ್ತಿ ಊಟದ ಬದಲಿಗೆ ಶಾಲೆಯಲ್ಲಿ ಬಿಸಿ ಊಟ ಲಭ್ಯವಾಗಿದೆ. ಬಣ್ಣದ ಕೊಡೆಯ ಜಾಗಕ್ಕೆ ರೈನ್ ಕೋಟ್ ಗಳ ಆಗಮನವಾಗಿದೆ. ರೀಫಿಲ್ ಮಾಡುವ ಪೆನ್ಗಳ ಜಾಗಕ್ಕೆ ಬಳಸಿ ಎಸೆಯುವ ಬಗೆಬಗೆಯ ಪೆನ್ಗಳು ಮಾರ್ಕೆಟ್ ಗೆ ಲಗ್ಗೆ ಇಟ್ಟಿವೆ. ಇಷ್ಟು ಮಾತ್ರವಲ್ಲ. ಹಳೆಯ ಆ ದಿನಗಳಿಗೆ ಹೋಲಿಸಿದರೆ ಈಗ ಏನೇನೋ ಬದಲಾವಣೆಗಳಾಗಿವೆ. ಬದಲಾದ ಕಾಲಕ್ಕೆ ನಾವೂ ಕೂಡಾ ಬದಲಾಗಲೇ ಬೇಕು. ಇದು ಪ್ರಕೃತಿ ನಿಯಮ. ಆದರೆ ಈ ಬದಲಾದ ಕಾಲ ಘಟ್ಟದಲ್ಲಿ ಆ ಹಳೆಯ ನೆನಪುಗಳನ್ನು ಮತ್ತೆ ಮೆಲುಕಿ ಹಾಕಿದರೆ ಆ ಖುಷಿಗೆ ಪರ್ಯಾಯ ಬೇರೆ ಯಾವುದೂ ಇಲ್ಲವೆಂದೇ ಹೇಳಬಹುದು.
ಶಾಲಾ ಆರಂಭದ ದಿನಗಳಲ್ಲಿ ಎಲ್ಲವೂ ಹೊಸತು ಹೊಸತು. ಬರೆಯುವ ಪೆನ್ನು, ಬರೆಸಿಕೊಳ್ಳುವ ಪುಸ್ತಕ, ಹಾಕುವ ದಿರಿಸು, ಹೆಗಲೇರುವ ಬ್ಯಾಗ್, ಹಿಡಿಯುವ ಕೊಡೆ, ಹಾಕುವ ಚಪ್ಪಲಿ ಎಲ್ಲದಕ್ಕೂ ಹೊಸತರ ಘಮಘಮ. ದಿನ ಕಳೆದಂತೆ ಶಾಲೆಗೆ ತೆರಳುವ ಆ ಸಂಭ್ರಮ ಮಸುಕಾಗುತ್ತದೆ. ಓದುವ ಪುಸ್ತಕದ ಹಾಳೆಗಳು ಕೊಂಚಕೊಂಚವೇ ಕೊಳೆಯಾಗುವಂತೆ ಆರಂಭದ ಹುರುಪಿಗೂ ಕಸುವು ಕಡಿಮೆಯಾಗುತ್ತದೆ. ಆದರೆ ಆ ಮೊದಲ ಸಂಭ್ರಮ ಮಾತ್ರ ಬಣ್ಣಿಸಲಾಗದು.
ಶಾಲೆ ಆರಂಭವಾಗುವ ಹಂತದಲ್ಲಿ ಹೊಸ ಪುಸ್ತಕಗಳನ್ನು ಖರೀದಿಸಿ ಅವುಗಳ ಪುಟಗಳನ್ನು ಬಿಡಿಸಿ ಮೂಗೊಡ್ಡಿ ಪರಿಮಳ ಆಘ್ರಾಣಿಸುವ ಆ ಖುಷಿಯೇ ಬೇರೆ! ಪ್ರತೀ ಪುಸ್ತಕಕ್ಕೂ ದಿನಪತ್ರಿಕೆಗಳದ್ದೋ, ಶಾರದಾ ಕ್ಯಾಲೆಂಡರ್ನದ್ದೋ ಅಥವಾ ಹಳೆಯ ವಾರ ಪತ್ರಿಕೆಗಳ ಪುಟಗಳನ್ನು ಕಿತ್ತು ಬೈಂಡ್ ಹಾಕಲಾಗುತ್ತಿತ್ತು.
ನೋಟ್ ಪುಸ್ತಕಗಳಿಗೆ, ಪಠ್ಯ ಪುಸ್ತಕಗಳಿಗೆ ಬೈಂಡ್ ಹಾಕಿದ ಬಳಿಕ ತಮ್ಮ ಪುಸ್ತಕವೆಂದು ಗುರುತು ಹಿಡಿಯಲು ಅದರ ಮೇಲೆ ಹೆಸರು ಬರೆಯಲಾಗುತ್ತಿತ್ತು. ಆದರೆ ಈಗಿನ ಹಾಗೆ ಆಗ ಲೇಬಲ್ ಗಳಿರಲಿಲ್ಲ. ಇದ್ದರೂ ಅದು ಎಲ್ಲರ ಸೊತ್ತಾಗುತ್ತಿರಲಿಲ್ಲ. ಚಿಕ್ಕ ಮಕ್ಕಳ ಪುಸ್ತಕಗಳಲ್ಲಿ ಅಣ್ಣಂದಿರು, ಅಕ್ಕಂದಿರು ಹೆಸರು ಬರೆದು ಶಾಲೆಗೆ ರೆಡಿಯಾಗಿಸುತ್ತಿದ್ದರು.
ನಮ್ಮ ಹಿರಿಯರನ್ನು ಕೇಳಿದರೆ ಅಂದಿನ ಶಾಲೆ, ಆ ಶಾಲೆಯ ದಾರಿ, ಅಂದಿನ ಶಿಕ್ಷಣ ಪದ್ಧತಿ ಇವೆಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ಹೇಳುತ್ತಾರೆ. ಮೂರ್ನಾಲ್ಕು ದಶಕಗಳ ಹಿಂದೆ ಪ್ರಾಥಮಿಕ ಶಾಲೆಗೆ ಹೋಗುವ ಪ್ರತಿಯೊಬ್ಬ ವಿದ್ಯಾರ್ಥಿಯೂ ನಡೆದೇ ಶಾಲೆಗೆ ಹೋಗಬೇಕಾಗಿತ್ತು. ಪ್ರಕೃತಿಯ ನಿಜ ದರ್ಶನ ಪ್ರಾಥಮಿಕ ಶಾಲೆಯ ಆ ದಿನಗಳಲ್ಲೇ ಮಕ್ಕಳಿಗೆ ಒದಗಿ ಬರುತ್ತಿತ್ತು.
ಮಳೆಗಾಲದಲ್ಲಂತೂ ರಸ್ತೆಯಲ್ಲಿ ಹರಿದಾಡುವ ಮಳೆಯ ನೀರಿನಲ್ಲಿ ಕಾಲ್ಕುಣಿಸಿಯೇ ಮಕ್ಕಳು ಶಾಲೆಗೆ ತೆರಳುತ್ತಿದ್ದುದು. ಈಗಿನಂತೆ ಆಗ ಪಾಲಿಶ್ ಮಾಡಿದ ಬೂಟ್ಗಳು ಮಕ್ಕಳ ಕಾಲಿಗೆ ಸೋಕಿರಲಿಲ್ಲ. ಹಾಗಾಗಿ ಮಳೆ ನೀರು ಹರಿದು ಹೋಗುವ ಚರಂಡಿಯಲ್ಲಿ ಕಾಲಾಡಿಸುತ್ತಾ, ಮಾವು, ಗೇರು, ಪೇರಳೆ ಮರದಡಿ ಕತ್ತುದ್ದ ಮಾಡಿ ಸಿಕ್ಕಿದ ಹಣ್ಣುಗಳನ್ನು ಮೆಲ್ಲುತ್ತಾ ಶಾಲೆಗೆ ಹೋದರೆ ಮಕ್ಕಳಿಗೆ ಪಠ್ಯಕ್ಕಿಂತ ಹೆಚ್ಚಾಗಿ ಪಠ್ಯೇತರ ವಿಷಯಗಳಲ್ಲಿ ಹೆಚ್ಚಿನ ಜ್ಞಾನ ಒದಗಿ ಬರುತ್ತಿತ್ತು.
ಹಿಂದಿನ ಕಾಲದಲ್ಲಿ ಈಗಿನಂತೆ ಶಾಲೆಗೆ ರಜೆ ಸಿಕ್ಕ ಕೂಡಲೇ ಬೇಸಿಗೆ ಶಿಬಿರಗಳ ಆಯೋಜನೆಯಾಗುತ್ತಿರಲಿಲ್ಲ. ಅದರ ಅವಶ್ಯಕತೆಯೂ ಆಗಿರಲಿಲ್ಲ. ಏಕೆಂದರೆ ಈಗಿನ ಬೇಸಿಗೆ ಶಿಬಿರಗಳಲ್ಲಿ ಬೋಧಿಸುವ ಪ್ರತಿಯೊಂದು ವಿಷಯಗಳೂ ಮಕ್ಕಳಿಗೆ ತಂದೆ ತಾಯಿಯರಿಂದ, ಅಜ್ಜ, ಅಜ್ಜಿಯರಿಂದ ಅಥವಾ ಕೂಡು ಕುಟುಂಬದ ಹಿರಿಯರಿಂದ ಸಿಕ್ಕಿ ಬಿಡುತ್ತಿತ್ತು. ಮನೆಯ ಮುಂದಿರುವ ಹಳ್ಳಕೊಳ್ಳಗಳೇ ಮಕ್ಕಳಿಗೆ ಈಜುಕೊಳಗಳಾಗಿ ಮಕ್ಕಳು ಈಜು ಕಲಿತುಬಿಡುತ್ತಿದ್ದರು. ಹೆಚ್ಚಿನ ಕುಟುಂಬಗಳು ಆಗ ಜೀವನೋಪಾಯಕ್ಕಾಗಿ ಬೇಸಾಯವನ್ನೇ ನೆಚ್ಚಿಕೊಂಡಿದ್ದ ಕಾರಣ ಮಕ್ಕಳು ರಜಾ ಅವಧಿಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಹೆತ್ತವರಿಗೆ ಕೃಷಿ ಕೆಲಸದಲ್ಲಿ ನೆರವಾಗುತ್ತಿದ್ದರು. ಅದಕ್ಕಿಂತಲೂ ವಿಶೇಷವಾಗಿ ಬಾಂಧವ್ಯ ಬೆಸೆಯುವಲ್ಲಿ ಪ್ರಮುಖ ಪಾತ್ರವಾಗಿರುವ ‘ನೆಂಟರ ಮನೆಗೆ’ ಹೋಗುವ ಪದ್ಧತಿ ಆ ಕಾಲದಲ್ಲಿ ಹೆಚ್ಚಾಗಿದ್ದುದರಿಂದ ಈಗಿನಂತೆ ಬೇಸಿಗೆ ಶಿಬಿರಕ್ಕೆ ಹೋಗುವ ಅವಶ್ಯಕತೆ ಆಗ ಇರಲೇ ಇಲ್ಲ ಎನ್ನಬಹುದು.
ಕಾಲ ಸರಿದಂತೆ ಕಷ್ಟದ ದಿನಗಳು ಕರಗಿ, ಇಷ್ಟಪಟ್ಟ ವಸ್ತುಗಳು ಕೈಗೆಟುಕುವಂತಾಗಿ ಜೀವನ ಸುಖಮಯ ಆಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹಾಗಿದ್ದರೂ ವ್ಯವಸ್ಥೆಗಳು ಹೆಚ್ಚಾದಂತೆಲ್ಲಾ ಮಕ್ಕಳು ದಾರಿ ತಪ್ಪುತ್ತಾರೇನೋ ಎಂಬ ಆತಂಕ ಹಿರಿಯರಲ್ಲಿ ಇದ್ದೇ ಇದೆ.
ಏಕೆಂದರೆ ಅಂದು ಬೇಸಿಗೆ ರಜೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ಹೆತ್ತವರಿಗೆ ಸದಾ ನೆರವಾಗಿ ಕೈಕಾಲುಗಳಲ್ಲಿ ಕೆಸರು ಮೆತ್ತಿಕೊಂಡಿರುತ್ತಿದ್ದ ಮಕ್ಕಳು ಇಂದು ಅಂಗಳಕ್ಕೆ ಇಳಿಯಲು ಕೂಡಾ ಅಂಜುತ್ತಿದ್ದಾರೆ. ಮೂರ್ನಾಲ್ಕು ಕಿಲೋಮೀಟರ್ ಪಾದಯಾತ್ರೆ ಮಾಡಿಯೇ ಶಾಲಾ ಮೆಟ್ಟಿಲೇರುತ್ತಿದ್ದ ಮಕ್ಕಳು ಈಗ ಮನೆಯ ಹೊಸಿಲು ದಾಟಬೇಕಾದರೆ ವಾಹನದ ಮೊರೆ ಹೋಗುತ್ತಿದ್ದಾರೆ. ಹೊರಾಂಗಣ ಆಟವಾಡುತ್ತಿದ್ದ ಮಕ್ಕಳು ಒಳಾಂಗಣ ಆಟಕ್ಕೆ ಮಾತ್ರ ಜೋತು ಬೀಳುತ್ತಿದ್ದಾರೆ. ಅದಕ್ಕಿಂತಲೂ ಆತಂಕದ ಸಂಗತಿ ಯಾವುದೆಂದರೆ ಮಕ್ಕಳು ಮೊಬೈಲ್ ಗೇಮ್ಗಳಿಗೆ ಅಂಟಿಕೊಂಡು ತಮ್ಮ ಭವಿಷ್ಯಕ್ಕೆ ತಾವೇ ಕೊಳ್ಳಿ ಇರಿಸಿಕೊಳ್ಳುವಷ್ಟು ಕೆಡುತ್ತಿದ್ದಾರೆ.
ಕಾಲ ಚಕ್ರ ತಿರುಗುತ್ತಲೇ ಇದೆ. ನಮ್ಮ ಹಿರಿಯರು ಅಂದಿನ ದಿನಗಳನ್ನು ಜ್ಞಾಪಿಸಿಕೊಳ್ಳುತ್ತಾ ಅಂದಿನ ಆ ಕಾಲವೇ ಚೆನ್ನಾಗಿತ್ತು ಎನ್ನುತ್ತಿದ್ದರು. ಮಧ್ಯವಯಸ್ಸಿನ ಈಗಿನ ಜನ ದಶಕಗಳ ಹಿಂದಿನ ಘಟನೆಗಳನ್ನು ನೆನಪಿಸುತ್ತಾ ಆ ದಿನಗಳೇ ಚೆನ್ನಾಗಿತ್ತು ಅನ್ನುತ್ತಿದ್ದಾರೆ. ಬದಲಾದ ಕಾಲದ ಈಗಿನ ಮಕ್ಕಳು ತಮ್ಮ ಇಳಿ ವಯಸ್ಸಿನಲ್ಲಿ ಅವರ ಬದುಕಿನ ಕ್ಷಣಗಳನ್ನು ಮೆಲುಕು ಹಾಕುತ್ತಾ ಮುಂದಿನ ಪೀಳಿಗೆಗೆ ‘ಅಂದಿನ ಆ ಕ್ಷಣಗಳೇ ಚೆನ್ನಾಗಿದ್ದವು. ಈಗ ಕಾಲ ಕೆಟ್ಟು ಹೋಗಿದೆ’ ಎಂದು ಹಲುಬದೆ ಇರಲಾರರು ಎಂಬುದು ಮಾತ್ರ ಸತ್ಯ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತ ಹಾಗು ಅಂಕಣಕಾರರು)














