ಧರ್ಮಶಾಲಾ: ಐಪಿಎಲ್ನಲ್ಲಿ ಮೊದಲ ಕ್ವಾಲಿಫಯರ್ ಪಂದ್ಯ ಇಂದು ಧರ್ಮಾಶಾಲಾದಲ್ಲಿ ನಡೆಯಲಿದೆ. ಪಂದ್ಯ ಗೆದ್ದು ಫೈನಲ್ ತಲುಪಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಹವಣಿಸುತ್ತಿವೆ.ಆರ್ಸಿಬಿ, ಟೈಟನ್ಸ್– ಈ ಎರಡೂ ತಂಡಗಳು ಅಗ್ರ ಸರದಿಯಲ್ಲಿ ಬಲಿಷ್ಠ ಬ್ಯಾಟಿಂಗ್, ಆಕ್ರಮಣಕಾರಿ ಬೌಲಿಂಗ್, ಒತ್ತಡದ ಸನ್ನಿವೇಶದಲ್ಲಿ ಸಂಯಮದಿಂದ ಆಡಿ ಪಂದ್ಯದ ಗತಿಯನ್ನು
ಬದಲಾಯಿಸುವ ಛಾತಿ, ತಂತ್ರಗಾರಿಕೆಯನ್ನು ತೋರಿವೆ. ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು (ತಲಾ 18 ಪಾಯಿಂಟ್ಸ್) ಪಡೆದಿವೆ. ಇದರಿಂದಾಗಿ ಈ ತಂಡಗಳಿಗೆ ಫೈನಲ್ ತಲುಪಲು ಎರಡು ಯತ್ನದ ಅವಕಾಶವೂ ದೊರೆತಿದೆ. ಹಾಲಿ ಚಾಂಪಿಯನ್, ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಪರ ವಿರಾಟ್ ಕೊಹ್ಲಿ ಹೆಚ್ಚು ರನ್ (557) ಕಲೆಹಾಕಿ ಚೇಸಿಂಗ್ ಮಾಸ್ಟರ್’ ಖ್ಯಾತಿಗೆ ತಕ್ಕಂತೆ ಆಡಿದ್ದಾರೆ. ಇದರಲ್ಲಿ 1 ಶತಕ, 4 ಅರ್ಧಶತಕಗಳಿವೆ.ಮಧ್ಯಮ ಕ್ರಮಾಂಕದಲ್ಲಿ ದೇವದತ್ತ ಪಡಿಕ್ಕಲ್ (433), ರಜತ್ ಪಾಟೀದಾರ್ (393) ಅವರೂ ಉಪಯುಕ್ತ ಕೊಡುಗೆ ನೀಡಿದ್ದಾರೆ. ನೀಳಕಾಯದ ಟಿಮ್ ಡೇವಿಡ್ ಫಿನಿಷರ್ ಆಗಿ ಆಟದ ಮಟ್ಟ ಎತ್ತರಿಸಿದ್ದಾರೆ. ಅಪರೂಪಕ್ಕೆ ಅಗ್ರ ಕ್ರಮಾಂಕ
ವಿಫಲವಾದಾಗ ಕೃಣಾಲ್ ಪಾಂಡ್ಯ ನೆರವಿಗೆ ಬಂದಿದ್ದಾರೆ. ಭುವನೇಶ್ವರ್ ಅವರು ಈ ಋತುವಿನಲ್ಲಿ 24 ವಿಕೆಟ್ಗಳನ್ನು ಕಬಳಿಸಿ ಆರ್ಸಿಬಿಯ ‘ಅತಿ ಮೌಲ್ಯಯುತ ಆಟಗಾರ’ ಎನಿಸಿದ್ದಾರೆ. ಅವರಿಗೆ ಜೋಶ್ ಹೇಝಲ್ವುಡ್ ಉತ್ತಮ ಬೆಂಬಲ ನೀಡಿ ದ್ದಾರೆ. ಟೈಟನ್ಸ್ ಸಹ ಇಂಥದ್ದೇ ಬಲ ಹೊಂದಿದೆ. ಅಗ್ರ ಸರದಿಯಲ್ಲಿ ಸಾಯಿ ಸುದರ್ಶನ್ ಅವರ ಅಮೋಘ ಆಟ ಈ ಋತುವಿನಲ್ಲೂ ಮುಂದುವರಿದಿದೆ. ಅವರು 638 ರನ್ ಕಲೆಹಾಕಿದರೆ, ಅವರ ಜೊತೆ ಇನಿಂಗ್ಸ್ ಆರಂಭಿಸುತ್ತಿರುವ ನಾಯಕ ಶುಭಮನ್ ಗಿಲ್ (616) ಕಾಣಿಕೆ ಕಮ್ಮಿಯೇನಿಲ್ಲ. ಮೂರನೇ ಕ್ರಮಾಂಕದಲ್ಲಿ ಜೋಸ್ ಬಟ್ಲರ್ ಅವರೂ ಬೀಸಾಟವಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಟೈಟನ್ಸ್ ತಂಡದ ಬತ್ತಳಿಕೆಯಲ್ಲಿರುವ ಅಸ್ತ್ರಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಕಗಿಸೊ ರಬಾಡ (24 ವಿಕೆಟ್), ಮೊಹಮ್ಮದ್ ಸಿರಾಜ್ (17) ಮತ್ತು ಪ್ರಸಿದ್ಧ ಕೃಷ್ಣ (14) ಅವರು ಛಾಪು ಮೂಡಿಸಿದ್ದಾರೆ. ಅನುಭವಿ ಸ್ಪಿನ್ನರ್ ರಶೀದ್ ಖಾನ್ (19) ಜೇಸನ್ ಹೋಲ್ಡರ್ ಮೋಡಿ ಮಾಡಿದ್ದಾರೆ.














