ಸುಳ್ಯ:ಸುಳ್ಯದ ಗಾಂಧಿ ಚಿಂತನ ವೇದಿಕೆ ನೀಡುವ ಮೊದಲ ರಾಜ್ಯ ಮಟ್ಟದ ‘ಗಾಂಧಿ ಸ್ಮೃತಿ ಪ್ರಶಸ್ತಿ’ 2025 ನ್ನು ಹಿರಿಯ ಸಹಕಾರಿ ಧುರೀಣ, ಶಿಕ್ಷಣ ಸಂಸ್ಥೆಗಳ ಸ್ಥಾಪಕ ಸವಣೂರು ಸೀತಾರಾಮ ರೈಯವರಿಗೆ ನೀಡಿ ಗೌರವಿಸಲಾಯಿತು.ಸೀತಾರಾಮ ರೈಯವರ ಸವಣೂರು ಸ್ವಗೃಹದಲ್ಲಿ ನಡೆದ ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಪ್ರಶಸ್ತಿ ಪ್ರದಾನ ಮಾಡಿದರು. ಸೀತಾರಾಮ ರೈಯವರು
ನಾಡಿಗೆ ಕೊಟ್ಟ ಕೊಡುಗೆ ದೊಡ್ಡದು. ಗ್ರಾಮಗಳಿಗೆ ಕಾಲ್ನಡಿಗೆಯ ಮೂಲಕ ಹೋಗಿ ಸಹಕಾರಿ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದವರು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಸ್ಥಾಪಕ ಸಂಚಾಲಕ ಡಾ.ಸುಂದರ ಕೇನಾಜೆ ‘ಗಾಂಧೀಜಿಯವರ ಬದುಕಿನ ಬೇರೆಬೇರೆ ಅಂಶಗಳಲ್ಲಿ ಕೆಲವೊಂದನ್ನಾದರೂ ತಮ್ಮ ಬದುಕಿನಲ್ಲಿ ಅಳವಡಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ಆ ಮೂಲಕ ಗಾಂಧಿಯ ಆದರ್ಶಗಳನ್ನು ಹೊಸತಲೆಮಾರಿಗೆ ವರ್ಗಾಯಿಸುವ ನೆಲೆಯಿಂದ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಸವಣೂರು ಸೀತಾರಾಮ ರೈ ಸಹಕಾರಿ ಕ್ಷೇತ್ರದಲ್ಲಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತಾನು ಕಾರ್ಯ ನಿರ್ವಹಿಸಲು ಕಾರಣವಾದ ಅಂಶಗಳನ್ನು ನೆನಪಿಸಿ ವೇದಿಕೆಗೆ ಕೃತಜ್ಞತೆ ಸಲ್ಲಿಸಿದರು.ವೇದಿಕೆಯ ಸಂಚಾಲಕ ಚಂದ್ರಶೇಖರ ಪೇರಾಲು ಅಭಿನಂದನಾ ಮಾತುಗಳನ್ನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ವೇದಿಕೆಯ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ವಹಿಸಿದ್ದರು.
ವಿಜಯ ಬ್ಯಾಂಕ್ನ ನಿವೃತ್ತ ಹಿರಿಯ ಅಧಿಕಾರಿ ಹಿರಿಯಡ್ಕ ಕೃಷ್ಣ ರೈ ಪುಂಚಪ್ಪಾಡಿ ಮಾತನಾಡಿದರು. ಹಿರಿಯರಾದ ಚಿಕ್ಕಪ್ಪ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸವಣೂರು ಸಹಕಾರಿ ಬ್ಯಾಂಕ್ ಸಿಇಒ ಚಂದ್ರಶೇಖರ್ ಸ್ವಾಗತಿಸಿದರು. ವೇದಿಕೆಯ ಸಂಚಾಲಕರಾದ ಶಂಕರ ಪೆರಾಜೆ ವಂದಿಸಿದರು. ಇನ್ನೋರ್ವ ಸಂಚಾಲಕ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಕೆ.ಆರ್. ಗೋಪಾಲಕೃಷ್ಣ ಆಶಯ ಗೀತೆ ಹಾಡಿದರು. ಸಂಚಾಲಕಿ ಚಂದ್ರವತಿ ಬಡ್ಡಡ್ಕ ಉಪಸ್ಥಿತರಿದ್ದರು. ಪ್ರಶಸ್ತಿಯು ಖಾದಿ ಶಾಲು, ಖಾದಿ ನೂಲಿ ಹಾರ, ಗಾಂದೀ ಟೊಪ್ಪಿ, ಫಲಕ, ಫಲಪುಷ್ಪ ಹಾಗೂ ಹತ್ತು ಸಾವಿರ ರೂ ಗಳ ಚೆಕ್ ಒಳಗೊಂಡಿತ್ತು.ಸುಳ್ಯ ರೋಟರಿ ಕ್ಲಬ್ ನ ಸದಸ್ಯರು, ಸವಣೂರು ಸಹಕಾರಿ ಬ್ಯಾಂಕ್ ನ ನಿರ್ದೇಶಕರು, ವಿದ್ಯಾ ರಶ್ಮಿ ವಿದ್ಯಾಸಂಸ್ಥೆಯ ಟ್ರಿಸ್ಟಿಗಳು, ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ಊರ ಪ್ರಮುಖರು ಹಾಗೂ ಸೀತಾರಾಮ ರೈಯವರ ಕುಟುಂಬದ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.















