ಅಹಮದಾಬಾದ್: ಜಾಸ್ ಬಟ್ಲರ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಆತಿಥೇಯ ಗುಜರಾತ್ ಟೈಟನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ ಅಂತರದ ಜಯ ಸಾಧಿಸಿತು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 203 ರನ್ ಕಲೆಹಾಕಿತ್ತು. ಗುಜರಾತ್ ಪಡೆ ಈ ಗುರಿಯನ್ನು ಕೇವಲ
3 ವಿಕೆಟ್ ಕಳೆದುಕೊಂಡು ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ತಲುಪಿತು.ಸವಾಲಿನ ಗುರಿ ಬೆನ್ನತ್ತಿದ ಗುಜರಾತ್ಗೆ ಉತ್ತಮ ಆರಂಭ ಸಿಗಲಿಲ್ಲ. ಸಾಯಿ ಸುದರ್ಶನ್ ಜೊತೆ ಇನಿಂಗ್ಸ್ ಆರಂಭಿಸಿದ ನಾಯಕ ಶುಭಮನ್ ಗಿಲ್ (7 ರನ್), ತಂಡದ ಮೊತ್ತ 14 ರನ್ ಆಗಿದ್ದಾಗಲೇ ರನೌಟ್ ಆದರು.ಈ ಹಂತದಲ್ಲಿ, ಸುದರ್ಶನ್ ಹಾಗೂ ಬಟ್ಲರ್ ಚೇತರಿಕೆ ನೀಡಿದರು.21 ಎಸೆತಗಳಲ್ಲಿ 36 ರನ್ ಗಳಿಸಿದ್ದ ಸಾಯಿ ಔಟಾದ ನಂತರ ಬಂದ ಶೆರ್ಫೇನ್ ರುದರ್ಫೋರ್ಡ್ ಶತಕದ ಜೊತೆಯಾಟವಾಡುವ ಮೂಲಕ ಗೆಲುವಿಗೆ ಕಾಣಿಕೆ ನೀಡಿದರು.
34 ಎಸೆತಗಳಲ್ಲಿ 43 ರನ್ ಗಳಿಸಿದ ರುದರ್ಫೋರ್ಡ್, ಬಟ್ಲರ್ಗೆ ಉತ್ತಮ ಸಾಥ್ ನೀಡಿದರು. ಅವರು ತಂಡದ ಗೆಲುವಿಗೆ ಇನ್ನು 11 ರನ್ ಬೇಕಿದ್ದಾಗ ಔಟಾದರು.54 ಎಸೆತಗಳಲ್ಲಿ 97 ರನ್ ಬಾರಿಸಿದ ಬಟ್ಲರ್ ಅಜೇಯವಾಗಿ ಉಳಿದರೂ ಐಪಿಎಲ್ನಲ್ಲಿ ದಾಖಲೆಯ 8ನೇ ಶತಕ ಸಿಡಿಸುವ ಅವಕಾಶ ತಪ್ಪಿಸಿಕೊಂಡರು.ರಾಹುಲ್ ತೆವಾಟಿಯ (11 ರನ್), ಕೊನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದರು. ಇದರಿಂದಾಗಿ ಬಟ್ಲರ್ಗೆ ಶತಕದ ಅವಕಾಶ ತಪ್ಪಿದರೂ, ಗುಜರಾತ್ಗೆ ಜಯ ಒಲಿಯಿತು.ಡೆಲ್ಲಿ ತಂಡದ ಮುಕೇಶ್ ಕುಮಾರ್ ಹಾಗೂ ಕುಲದೀಪ್ ಯಾದವ್ ಒಂದೊಂದು ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡದ ಪರ ಯಾವೊಬ್ಬ ಬ್ಯಾಟರ್ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಆದರೆ, ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ನೀಡಿದ ಉತ್ತಮ ಮೊತ್ತದಿಂದ ತಂಡದ ಮೊತ್ತ ಇನ್ನೂರರ ಗಡಿ ದಾಟಿತು.ಕರುಣ್ ನಾಯರ್ ಜೊತೆ ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಪೊರೇಲ್ 9 ಎಸೆತಗಳಲ್ಲಿ 18 ರನ್ ಗಳಿಸುವ ಮೂಲಕ ಬಿರುಸಿನ ಆರಂಭ ನೀಡಿದರು.
ನಂತರ ಬಂದ ಕೆ.ಎಲ್. ರಾಹುಲ್ 14 ಎಸೆತಗಳಲ್ಲಿ 28 ರನ್ ಬಾರಿಸಿದರು. ನಾಯರ್ (18 ಎಸೆತಗಳಲ್ಲಿ 31 ರನ್), ನಾಯಕ ಅಕ್ಷರ್ ಪಟೇಲ್ (32 ಎಸೆತಗಳಲ್ಲಿ 39 ರನ್), ಟಿಟ್ಸನ್ ಸ್ಟಬ್ಸ್ (21 ಎಸೆತಗಳಲ್ಲಿ 31 ರನ್) ಹಾಗೂ ಅಶುತೋಷ್ ಶರ್ಮಾ (19 ಎಸೆತಗಳಲ್ಲಿ 37 ರನ್) ಉಪಯುಕ್ತ ಆಟವಾಡಿದರು. ಹೀಗಾಗಿ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಯಿತು.
ಗುಜರಾತ್ ಪರ ಕನ್ನಡಿಗ ಪ್ರಸಿದ್ಧ ಕೃಷ್ಣ ಅಮೋಘ ಬೌಲಿಂಗ್ ಪ್ರದರ್ಶನ ತೋರಿದರು. ಅವರು, ನಾಲ್ಕು ಓವರ್ಗಳಲ್ಲಿ 41 ರನ್ ನೀಡಿ ಪ್ರಮುಖ 4 ವಿಕೆಟ್ಗಳನ್ನು ಕಬಳಿಸಿದರು. ವೇಗಿಗಳಾದ ಮೊಹಮ್ಮದ್ ಸಿರಾಜ್, ಅರ್ಶದ್ ಖಾನ್, ಇಶಾಂತ್ ಶರ್ಮಾ ಮತ್ತು ಸ್ಪಿನ್ನರ್ ಸಾಯಿ ಕಿಶೋರ್ ಒಂದೊಂದು ವಿಕೆಟ್ ಹಂಚಿಕೊಂಡರು.
ತಲಾ 7 ಪಂದ್ಯಗಳಲ್ಲಿ ಆಡಿರುವ ಉಭಯ ತಂಡಗಳು ಐದರಲ್ಲಿ ಗೆದ್ದು, ಎರಡನ್ನು ಸೋತಿವೆ. ಎರಡೂ ತಂಡಗಳ ಖಾತೆಯಲ್ಲಿ ತಲಾ 10 ಪಾಯಿಂಟ್ಗಳಿದ್ದರೂ, ಉತ್ತಮ ರನ್ರೇಟ್ ಹೊಂದಿರುವ ಕಾರಣ ಗುಜರಾತ್ ಪಡೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಡೆಲ್ಲಿ, ಎರಡನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.