ಸುಳ್ಯ:ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ 2003-04 ಸಾಲಿನಿಂದ ಪ್ರಸ್ತುತವಿರುವ ಆಡಳಿತ ಮಂಡಳಿಯವರೆಗಿನ ಅವಧಿಯ ಸಂಪೂರ್ಣ ಲೆಕ್ಕ ಪರಿಶೋಧನೆ ಮಾಡಿ ಸಮಗ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕಾಂಗ್ರೆಸ್ ಮುಖಂಡ ಮಹೇಶ್ ಕುಮಾರ್ ಕರಿಕ್ಕಳ ಹಾಗು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲೋಕೇಶ್ ಅಕ್ರಿಕಟ್ಟೆ ಈ ಒತ್ತಾಯ ಮಾಡಿದ್ದಾರೆ. ಕಳೆದ 23 ವರ್ಷಗಳಲ್ಲಿ ದೇವಸ್ಥಾನದ ಆಡಳಿತ ಮಾಡಿದ ಎಲ್ಲಾ ಆಡಳಿತ ಮಂಡಳಿಗಳ ಅವಧಿಯ ಲೆಕ್ಕದ ಸಂಪೂರ್ಣ ಪರಿಶೀಲನೆ, ತನಿಖೆ ನಡೆಸಿ ಯಾವುದೆ ಲೋಪ ಇದ್ದಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು ಈ ಬೇಡಿಕೆ ಮುಂದಿರಿಸಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಮಹೇಶ್ ಕುಮಾರ್ ಕರಿಕ್ಕಳ ಮಾತನಾಡಿ ಹಿಂದಿನ ಆಡಳಿತ ಮಂಡಳಿಗಳ ಅವಧಿಯ ಲೆಕ್ಕಗಳ ಬಗ್ಗೆ, ಅಲ್ಲದೆ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಸಂಬಂಧಿಸಿ ಸಮಿತಿ ರಚನೆ ಆಗಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿದ ಲೆಕ್ಕಗಳು ಸೇರಿದಂತೆ ಎಲ್ಲಾ ಲೆಕ್ಕಾಚಾರದ ಬಗ್ಗೆಯೂ ಇಲಾಖೆಯಿಂದ ಮತ್ತು ಲೋಕಾಯುಕ್ತ ವತಿಯಿಂದ ಕೂಲಂಕುಷ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ದೇವಸ್ಥಾನದ ಪ್ರಸ್ತುತ ಆಡಳಿತ ಮಂಡಳಿಯ ಅಧ್ಯಕ್ಷರಾದ ದೇವಿಪ್ರಸಾದ್ ಕಾನತ್ತೂರು ಅವರ ನೇತೃತ್ವದ ಸಮಿತಿಯು ಎರಡೂವರೆ ವರ್ಷದಿಂದ ದೇವಸ್ಥಾನದ ಅಭಿವೃದ್ಧಿಗೆ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಇದೀಗ ಕೆಲವರು ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ಆರೋಪಗಳನ್ನು ಹೊರಿಸಿ ದೇವಸ್ಥಾನದ ಅಧ್ಯಕ್ಷರಿಗೆ ಸಾರ್ವಜನಿಕ ಸಭೆ ಕರೆದು ಲೆಕ್ಕಪತ್ರ ಕೊಡಬೇಕೆಂದು 8 ಪ್ರಶ್ನೆಗಳನ್ನು ಮುಂದಿಟ್ಟು ಪತ್ರವೊಂದನ್ನು

ಕೊಟ್ಟಿದ್ದರು.ದೇವಸ್ಥಾನದ ಅಧ್ಯಕ್ಷರು ಸಭೆ ಕರೆಯಲು ಒಪ್ಪಿ ಸಾರ್ವಜನಿಕ ಸಭೆ ಕರೆದು ಅವರು ಕೇಳಿದ 8 ಪ್ರಶ್ನೆಗಳಿಗೂ ಉತ್ತರ ಕೊಡುವ ಪ್ರಯತ್ನ ಮಾಡಿದ್ದರು. ಮನವಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವ ಸಂದರ್ಭದಲ್ಲಿ ಸಭೆಯಲ್ಲಿ ಗೊಂದಲ ಸೃಷ್ಟಿ ಮಾಡಿ ಅಧ್ಯಕ್ಷರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದರು. ನಂತರ
ಸಾಮಾಜಿಕ ಜಾಲತಾಣಗಳಲ್ಲಿಯೂ ದೇವಸ್ಥಾನದ ಬಗ್ಗೆ ಸಮಾಜದಲ್ಲಿ ನಕಾರಾತ್ಮಕ ಅಭಿಪ್ರಾಯ ಮೂಡುವಂತೆ ನಿರಂತರವಾಗಿ ಪ್ರಚಾರ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು ಅವರ ಆರೋಪಗಳ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟೀಕರಣ ನೀಡಿರುತ್ತಾರೆ ಮತ್ತು ದೇವರ ಜಳಕದ ಹೊಳೆಯಲ್ಲಿ ಸ್ನಾನ ಮಾಡಿ ಬಂದು ನಾನು ದೇವಸ್ಥಾನದ ಹಣವನ್ನು ಅವ್ಯವಹಾರ ಮಾಡಿಲ್ಲವೆಂದು ದೇವಸ್ಥಾನದ ನಡೆಯಲ್ಲಿ ಪ್ರಾರ್ಥನೆ, ಪ್ರಮಾಣ ಮಾಡಿರುತ್ತಾರೆ ಎಂದು ವಿವರಿಸಿದರು. ದೇವಸ್ಥಾನದಲ್ಲಿ ಸಿಬ್ಬಂದಿ ಬದಲಾವಣೆ, ಅಭಿವೃದ್ಧಿ ಕೆಲಸ ಇತರ ಬದಲಾವಣೆಗಳು ಆಡಳಿತಾತ್ಮಕ ವಿಚಾರ. ಅಂತಹಾ ಬದಲಾವಣೆಗಳು ಎಲ್ಲಾ ಆಡಳಿತ ಮಂಡಳಿಯ ಅವಧಿಯಲ್ಲಿಯೂ ಮಾಡಿದ್ದಾರೆ ಎಂದು ಮಹೇಶ್ ಕುಮಾರ್ ಉತ್ತರಿಸಿದರು.
ಇದು ರಾಜಕೀಯ ಪ್ರೇರಿತ ಆರೋಪ ಎಂದ ಮಹೇಶ್ ಕುಮಾರ್ ಕರಿಕ್ಕಳ ಹಾಗು ರಾಧಾಕೃಷ್ಣ ಬೊಳ್ಳೂರು ಪಂಜ ಸೇರಿದಂತೆ ಸುಳ್ಯದ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಉತ್ತಮವಾಗಿ ಸಂಘಟನೆಯಾಗುತ್ತಿರುವುದನ್ನು ಸಹಿಸಲಾಗದೆ ಬಿಜೆಪಿಯವರು ದೇವಸ್ಥಾನವನ್ನು ಮುಂದಿಟ್ಟು ರಾಜಕೀಯ ಮಾಡುತ್ತಿದ್ದಾರೆ.ಇದನ್ನು ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಎದುರಿಸಲಿದೆ ಮತ್ತು ಇದಕ್ಕೆ ತಾರ್ಕಿಕ ಅಂತ್ಯ ಆಗಬೇಕು ಎಂಬ ನೆಲೆಯಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಈಗಾಗಲೇ ಇಲಾಖೆಗೆ ಮನವಿ ಸಲ್ಲಿಸಲಾಗಿದೆ, ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಕಾಂಗ್ರೆಸ್ ಪ್ರಚಾರ ಸಮಿತಿ ಸಂಚಾಲಕ ರಜತ್ ಭಟ್ ಉಪಸ್ಥಿತರಿದ್ದರು.










